ಬುಧವಾರ, ಜೂನ್ 6, 2012

ಕ.ರಾ.ರ.ಸಾ.ನಿಗಮ ಮತ್ತು ಕನ್ನಡ

ಅದೇಕೋ ಗೊತ್ತಿಲ್ಲ? ನಮ್ಮ ರಾಜ್ಯದ ಕ.ರಾ.ರ.ಸಾ. ನಿಗಮ ಮತ್ತು ಕನ್ನಡಕ್ಕೆ ಸರಿಯಾದ ಜಾತಕವೇ ಕೂಡಿ ಬರುವುದಿಲ್ಲ ಅನಿಸುತ್ತದೆ. ಅವರ ಮಿಮ್ಬಲೆಯ ಕನ್ನಡ ಅವತರಣಿಕೆಯಲ್ಲಿ 'ಪ್ರತಿದಿನದ ಸರಾಸರಿ ಸಾರಿಗೆ ಆದಾಯ' ಎಂಬುದರ ಬದಲಾಗಿ ಬದಲಾಗಿ 'ರತಿದಿನದ ಸರಾಸರಿ ಸಾರಿಗೆ ಆದಾಯ' ಎಂದಿರುವುದನ್ನು ಹುಡುಕಿ ತೋರಿದ ಮೇಲೆ ರಾತ್ರೋ ರಾತ್ರಿ ಅದನ್ನು ಮಾತ್ರ ಸರಿಪಡಿಸಿ ಕೈ ಕಟ್ಟಿ ಕುಳಿತರು. ಇಂತಹ ಬರವಣಿಗೆಯ ತಪ್ಪುಗಳ ಜೊತೆಗೆ ನಿಗಮದವರು ಕನ್ನಡ ಹಾಗು ಕನ್ನಡಿಗನಿಗೆ ಎಸಗುತ್ತಿರುವ ದ್ರೋಹ ಒಂದೆರಡಲ್ಲ. ನಿಗಮದ ಸಾರಿಗೆ ಬಸ್ಸಿನ ಬಳಕೆದಾರರು ಕನ್ನಡಿಗರೇ ಆಗಿದ್ದಾರೆ, ಆದರೆ ಕನ್ನಡಿಗನಿಗೆ ಕನ್ನಡದಲ್ಲಿ ಸೇವೆ ನೀಡುವಲ್ಲಿ ನಿಗಮ ತೋರುತ್ತಿರುವ ಮಲತಾಯಿ ಧೋರಣೆ ಮಾತ್ರ ಸಹಿಸಲಾಗದು.

ಹಾಗಾದರೆ ಅಂತಹ ದ್ರೋಹಗಳೇನು?
೧. ಕನ್ನಡ ಮಿಂಬಲೆ ಪ್ರಾಥಮಿಕವಾಗಿ ಕನ್ನಡದಲ್ಲಿ ಇಲ್ಲ. ಇದು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ರಾಜ್ಯದ ಆಡಳಿತ ನುಡಿಗೆ ಕೊಟ್ಟ ಮಾನ್ಯತೆ !!!???
೨. ಕನ್ನಡ ಮಿಮ್ಬಲೆಗೆ ಹೋಗಿ ಯಾವುದಾದರು ಮಾರ್ಗಕ್ಕೆ ಬಸ್ಸಿನ ಲಭ್ಯತೆ ಹುಡುಕಿ ಕಾಯ್ದಿರಿಸಲು ಸಾಧ್ಯವಿಲ್ಲ. "ಹುಡುಕಿ ಮತ್ತು ಟಿಕೆಟ್ ಕಾಯ್ದಿರಿಸಿ' ಭಾಗವು ಕೆಲಸ ಮಾಡುವುದಿಲ್ಲ. ಕನ್ನಡಿಗರು ಬಸ್ಸನ್ನು ಹುಡುಕಲು ಇಂಗ್ಲಿಷ್ ಕಲಿಯಬೇಕೆ?
೩.'ಅವತಾರ್ ಸೆಲ್' ನಲ್ಲಿ ಕನ್ನಡ ಆಯ್ಕೆ ಇಲ್ಲ, ಒಮ್ಮೆ ಲಾಗಿನ್ ಆದರೆ ಅಲ್ಲಿ ಇರುವುದು ಪೂರ್ತಿ ಇಂಗ್ಲಿಷ್. ಕೇವಲ ಇಂಗ್ಲಿಷ್ ಬಲ್ಲವರು ಮಾತ್ರ ಇದನ್ನು ಬಳಸಬೇಕೆ?
೪.ಮಿಂಬಲೆಯಲ್ಲಿ ಪಡೆಯುವ ಮುಂಗಡ ಚೀಟಿ (ಇ- ಟಿಕೆಟ್ ) ಕನ್ನಡದಲ್ಲಿ  ಇಲ್ಲ. ಕನ್ನಡ ಮಾತ್ರ ಬಲ್ಲ ಹಲವು ಪ್ರಯಾಣಿಕರು ಇದರಿಂದ ದಿನ ನಿತ್ಯ ಕಷ್ಟ ಪಡುತ್ತಿದ್ದಾರೆ.  (ಇದರ ಅನಾನುಕೂಲದ ಬಗ್ಗೆ ತಿಳಿಯಲು ಈ ಕೊಂಡಿ ಬಳಸಿ)
೫.'ನಿಮ್ಮ ಅನಿಸಿಕೆ' ವಿಭಾಗದಲ್ಲಿ ನೀವು ಅನಿಸಿಕೆಗಳನ್ನು ಬರೆದು ಉಳಿಸಲು (ಸೇವ್) ಆಗುತ್ತಿಲ್ಲ.ಅಲ್ಲಿ ಅನಿಸಿಕೆ ಬರೆಯುವ 'ಜಾಗವೇ' ಇಲ್ಲ. ಕನ್ನಡಿಗರ ಅನಿಸಿಕೆ ನೀಡಲು ಅನರ್ಹರೆ? ಇಲ್ಲವೇ 'ಕನ್ನಡಿಗರ ಅನಿಸಿಕೆ ಕಟ್ಕೊಂಡು ನಮಗೆ ಆಗಬೇಕಾದ್ದು ಏನು ಇಲ್ಲ' ಎಂಬ ಧೋರಣೆಯೇ?
೬. ಐರಾವತ ಬಸ್ಸುಗಳಲ್ಲಿ ಕನ್ನಡದಲ್ಲಿ ಮನರಂಜನೆ ಬೇಡಿದರು ಸಿಗದು.
...... ಹೀಗೆ ಬರೆಯುತ್ತ ಹೋದರೆ ಪುಟಗಳೇ ಸಾಲದು. ಮೇಲಿನವು ಕೆಲವು ಎತ್ತುಗೆಗಳು ಮಾತ್ರ.

ಕಾರಣಗಳು ಏನಿರ ಬಹುದು?
ನಿಗಮದ ಈ ಕನ್ನಡದ ಕಡೆಗಣನೆಗೆ ಕಾರಣಗಳನ್ನು ಹುಡುಕಿದರೆ...
೧. ಮೊದಲು ಕಣ್ಣಿಗೆ ಕಾಣುವುದು ನಮ್ಮ ನಿಗಮದ ಮೇಲಧಿಕಾರಿಗಳು ಹಾಗು ಸಿಬ್ಬಂದಿಗಳಿಗೆ ಕನ್ನಡದ ಮೇಲೆ ಇರುವ ತಿರಸ್ಕಾರ. ಕನ್ನಡ ಅನುಷ್ಟಾನಕ್ಕೆ ಇರುವ ಇಚ್ಚಾ ಶಕ್ತಿಯ ಕೊರತೆ. ( ಕನ್ನಡ ಅನುಷ್ಠಾನದ  ಕುರಿತು ಹಲವು ಒಲೆಗಳನ್ನು ಬರೆದರೂ ಅವರು ಉತ್ತರಿಸುವುದಿಲ್ಲ.)
೨. ಬೆಂಗಳೂರು ಹಾಗು ಉಳಿದ ಕೆಲವು ನಗರಗಳಲ್ಲಿ ಓಡಾಡುವ ಬೆರಳೆಣಿಕೆಯ ಪರಭಾಷಾ ಪ್ರಯಾಣಿಕರಿಂದಲೇ ನಮಗೆ ಹೆಚ್ಚಿನ ಆದಾಯ ಬರುತ್ತಿರುವುದು, ಅವರಿಗೆ ಉಪಯೋಗ ಆಗುವ ಹಾಗೆ ವ್ಯವಸ್ಥೆಯನ್ನು ಕಟ್ಟ ಬೇಕು, ಅವರ ಅನುಕೂಲತೆಗೆ ಮೊದಲ ಆದ್ಯತೆ ನೀಡ ಬೇಕು ಎಂಬ ನಿಗಮದವರ ಮನಸ್ಥಿತಿ.
೩. ಕನ್ನಡಿಗರು ಮಿಂಬಲೆ ಬಳಸುವುದೇ ಇಲ್ಲ ಬಿಡಿ,ಇಂಗ್ಲಿಷ್ ಅವತರಣಿಕೆ ಒಂದು ಸರಿ ಇದ್ರೆ ಸಾಕು ಎಂಬ ತಿರಸ್ಕಾರ
೪. ಕನ್ನಡದಲ್ಲಿ ಸೇವೆ ನೀಡದಿದ್ದರೆ ಕನ್ನಡಿಗರೇನು ಮಾತನಾಡುವುದಿಲ್ಲ ಎಲ್ಲದಕ್ಕೂ ಬಾಯಿ ಮುಚ್ಚಿಕೊಂಡು ಇರುತ್ತಾರೆ. ಹಾಗೇನಾದರು ಬಾಯಿ ತೆರೆದರೆ ಅದು ಕೇವಲ ಕೆಲವರು ಮಾತ್ರ, ಹಾಗಾಗಿ ಅವರ ಮಾತಿಗೆ ತಲೆ ಕೆಡಿಸಿ ಕೊಳ್ಳದ್ದಿದ್ದರಾಯಿತು ಎಂಬ ಆಲೋಚನೆ. (ಇವರ ಈ ಆಲೋಚನೆಗೆ ಒಂದು ವಿಧದಲ್ಲಿ ಪ್ರಯಾಣಿಕರೆ ಹೊಣೆ. ಎತ್ತುಗೆಗೆ, ಬಸ್ಸಿನಲ್ಲಿ ಹಿಂದಿ ಹಾಡು ತೇಲಿ ಬರುತ್ತಿದ್ದಾಗ ಎಷ್ಟು ಮಂದಿ ವಿರೋಧಿಸಿದ್ದಾರೆ?)
.... ಇನ್ನು ಬೇರೆ ಕಾರಣಗಳಿರಬಹುದು. ಆದರೆ ನಮ್ಮ ಕಣ್ಣಿಗೆ ನೇರವಾಗಿ ಕಾಣುವುದು ಇವುಗಳು.

ನಾವೇನು ಮಾಡ ಬಹುದು?
ನಿಗಮದ ತಪ್ಪು ಕಲ್ಪನೆಗಳನ್ನು ತಪ್ಪು ಎಂದು ತೋರಿಸ ಬೇಕು, ಅದು ಸಾಧ್ಯವಿರುವುದು ಕೇವಲ ಸಾರಿಗೆಯ ಬಳಕೆದಾರರಿಗೆ. ಬಸ್ಸಿನಲ್ಲಿ ಕನ್ನಡೇತರ ಹಾಡು ಕೇಳಿ ಬಂದಲ್ಲಿ ಕನ್ನಡ ಹಾಡನ್ನು ಹಾಕುವಂತೆ ಒತ್ತಾಯಿಸ ಬೇಕಾಗಿದೆ. ಸಾರಿಗೆ ವ್ಯವಸ್ತೆಯ ಬಳಕೆ ಮಾಡುವಾಗ, ಚೀಟಿ ಕೊಳ್ಳುವುದರಿಂದ ಹಿಡಿದು (ನೇರವಾಗಿ ಅಥವ ಮುಂಗಡವಾಗಿ ) ಪ್ರಯಾಣದ ಕೊನೆಯವರೆಗೂ ಕನ್ನಡದಲ್ಲಿ ಸೇವೆ ಪಡೆದುಕೊಳ್ಳಬಹದು, ದೊರಕದಿದ್ದಲ್ಲಿ ಕನ್ನಡ ಸೇವೆಗೆ ಒತ್ತಾಯ ಮಾಡಬಹುದು. ಸಾರಿಗೆಯ ಕೊಡುಗೆಗಳ, ಜಾಹಿರಾತುಗಳ ಹಾಗು ಇತರೆ ಮಾಹಿತಿಗಳು ಕನ್ನಡದಲ್ಲಿ ಮೊದಲು ದೊರೆಯುದೇ ತಿಳಿದು,ಇಲ್ಲವಾದಲ್ಲಿ ಒತ್ತಾಯ ಮಾಡಿ ಪಡೆದುಕೊಳ್ಳಬಹುದು. ಹನಿ ಹನಿ ಕೂಡಿದರೆ ಹಳ್ಳ ಎಂಬುವಂತೆ ಪ್ರತಿಯೊಬ್ಬರೂ ಇದನ್ನು ವಿರೋಧಿಸಿದರೆ ನಿಗಮವು ತಾನಾಗಿಯೇ ದಾರಿಗೆ ಬರುತ್ತದೆ.
ಈಗಲೇ ಕಾರ್ಯಪ್ರವೃತ್ತರಾಗ ಬೇಕೆನಿಸಿದರೆ ಕೆಳಗೆ ನೀಡಿರುವ ಕ. ರಾ.ರ.ಸಾ.ನಿಗಮದ ಮಿಂಚಂಚೆ ವಿಳಾಸಗಳಿಗೆ ಮಿಂಚೆ ಬರೆದು ಸಂಪೂರ್ಣ ಕನ್ನಡ ಅನುಷ್ಠಾನಕ್ಕೆ ಒತ್ತಾಯಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ