ಶುಕ್ರವಾರ, ಮಾರ್ಚ್ 30, 2012

ಕ್ಷಮಿಸಿ ಎಲ್ಲಾ, ನಾನು ಕನ್ನಡಾಭಿಮಾನಿ ಅಲ್ಲ!

(ಈ ಕೆಳಗಿನ ಬರವಣಿಗೆಯಲ್ಲಿ ಬಳಸಿರುವ 'ಗೆಳೆಯರು/ನೆಂಟರು' ಎಂಬ ಪದ ಎಲ್ಲಾ ಓದುಗರಿಗೆ ಅನ್ವಯಿಸುವುದಿಲ್ಲ)

ಇತ್ತೀಚಿನ ದಿನಗಳಲ್ಲಿ ಗ್ರಾಹಕನಾಗಿ ನನ್ನ ಅನುಕೂಲಕ್ಕಾಗಿ ಕನ್ನಡವನ್ನು ಕೇಳುತ್ತಿರುವ, ಕರ್ನಾಟಕದಲ್ಲಿ ಎಲ್ಲೇ ಹೋದರು ಕನ್ನಡ ಸೇವೆಗೆ ಒತ್ತಾಯಿಸುತ್ತಿರುವ ಮತ್ತು ಕನ್ನಡದ ಮೇಲೆ ಬೇರೆ ನುಡಿಯ ಹೇರಿಕೆಯನ್ನು ವಿರೋಧಿಸುತ್ತಿರುವ ನನಗೆ ನನ್ನ ಗೆಳೆಯರು ಹಾಗು ನೆಂಟರು ಇಟ್ಟ ಬಿರುದು 'ಕನ್ನಡಾಭಿಮಾನಿ'! ಇದು ನನಗೆ ಬೆರಗು ಗೊಳಿಸಿದ ವಿಷಯ, ಏಕೆಂದರೆ ವಾಸ್ತವವಾಗಿ ನಾನು ಕನ್ನಡಾಭಿಮಾನಿಯಲ್ಲ! ಇದೇನಾದರು ನಿಮಗೆ ಬೆರಗುಗೊಳಿಸಿದ್ದರೆ ಕೆಳಗಿನ ಅಂಶಗಳನ್ನು ನೋಡಿ

೧.  ತಿಂಗಳು ಪೂರ್ತಿ ದುಡಿದರು ನಿಮ್ಮ ಕಂಪನಿಯವರು ನಿಮಗೆ ಸಂಬಳ ನೀಡಿಲ್ಲ ಅಂದುಕೊಳ್ಳಿ, ಆಗ ನೀವು ನಿಮ್ಮ ಸಂಬಳಕ್ಕಾಗಿ ಕಂಪನಿಯವರನ್ನು ಒತ್ತಾಯಿಸಿದರೆ ಅದು ನಿಮಗೆ ಸಂಬಳದ ಮೇಲಿನ ಅಭಿಮಾನವೋ ಅಥವಾ ನಿಮಗೆ ಸಂಬಳದ ಅಗತ್ಯತೆಯೋ?
೨. ನಿಮ್ಮ ದೇಹಕ್ಕೆ ಯಾವುದೋ ಒಂದು ಕಾಯಿಲೆ ಚಿಕ್ಕದಾಗಿ ಶುರುವಾಗುತ್ತದೆ, ಅದು ಇಡೀ ದೇಹವನ್ನು ಆವರಿಸಿ ನಿಮ್ಮನ್ನು ಬಲಿ ತೆಗೆದು ಕೊಳ್ಳದಿರುವಂತೆ ಮದ್ದನ್ನು ತೆಗೆದು ಕೊಂಡರೆ ಅದು ನಿಮಗೆ ನಿಮ್ಮ ದೇಹದ ಮೇಲೆ ಇರುವ ಅಭಿಮಾನವೋ ಅಥವಾ ನಿಮ್ಮ ಬದುಕಿನ ಮೇಲಿರುವ ಕಾಳಜಿಯೋ?
೩. ಸುಡು ಬೇಸಿಗೆಯಲ್ಲಿ ಆರಾಮಾಗಿ ಹತ್ತಿ ಬಟ್ಟೆ ಹಾಕಿಕೊಂಡು ಕೆಲಸಕ್ಕೆ ಹೋಗುತ್ತಿದ್ದ ನಿಮಗೆ, ದಪ್ಪಗಿರುವ, ಗಾಳಿಯು ಸುಳಿದಾಡದಂತಹ ಬಟ್ಟೆಯನ್ನು ಹಾಕಲು ನಿಮ್ಮ ಕಂಪನಿಯವರು ಹೇಳುತ್ತಾರೆ ಅಂದುಕೊಳ್ಳಿ, ನೀವು ಅದರ ವಿರುದ್ದ ಸೊಲ್ಲೆತ್ತಿದರೆ ಅದು ನಿಮಗೆ ಹತ್ತಿ ಬಟ್ಟೆಯ ಮೇಲಿರುವ ಅಭಿಮಾನಕ್ಕಾಗೋ ಅಥವಾ ನಿಮ್ಮ ಅನುಕೂಲಕ್ಕಾಗೋ?
೪. ನಿಮ್ಮ ಮನೆಯ ಸಂಸಾರದೊಳಗೆ ಪಕ್ಕದ ಮನೆಯವರು ಮೂಗು ತೂರಿಸಿದರೆ, ಇಲ್ಲವೇ ನಿಮ್ಮ ಮನೆಯ ಮೇಲೆ ಆಳ್ವಿಕೆ ನಡೆಸ ಹೋದರೆ ನೀವು ಸುಮ್ಮನಿರುವಿರೆ? ಅವರನ್ನು ಒದ್ದು ಓಡಿಸೋದಿಲ್ಲವೇ? ಹಾಗಾದರೆ ಅದು ನಿಮಗೆ ನಿಮ್ಮ ಮನೆಯ ಮೇಲಿನ ಅಭಿಮಾನವೋ ಅಥವಾ ನಿಮ್ಮ ಮನೆಯಲ್ಲಿ ನಿಮ್ಮ ಸಾರ್ವಬೌಮತ್ವದ ಪ್ರೆಶ್ನೆಯೋ?

.... ಹೀಗೆ ಹೇಳುತ್ತಾ ಹೋದರೆ ನೊರೆಂಟು ಉಂಟು, ಕರ್ನಾಟಕದಲ್ಲಿ ಕನ್ನಡದಲ್ಲಿ ಸೇವೆ ನೀಡಿದರೆ ಕನ್ನಡ ಬಾರದಿರುವರು ಏನು ಮಾಡಬೇಕು ಎಂದು ಎಷ್ಟೋ ಗೆಳೆಯರು ನನ್ನ ಕೇಳಿದ್ದಾರೆ, ನನಗೆ ತುಂಬಾ ಸೋಜಿಗ ಅನಿಸೋದು ಇದೇ, ಹೀಗೆ ಪ್ರಶ್ನೆ ಕೇಳಿದ ಇವರು 'ಕರ್ನಾಟಕದಲ್ಲಿ ಕನ್ನಡದಲ್ಲಿ ಸೇವೆ ನೀಡದಿದ್ದರೆ ಕೇವಲ ಕನ್ನಡ ಬಲ್ಲ ನಮ್ಮ ಕನ್ನಡಿಗರು ಏನು ಮಾಡಬೇಕು' ಎಂಬುದನ್ನು ಯಾಕೆ ಯೋಚಿಸುವುದಿಲ್ಲ ಎಂದು. ಹೀಗೆ ಕೇಳಿದ ಎಷ್ಟೋ ಗೆಳೆಯರ ತಂದೆ, ತಾಯಿ ಅಥವಾ ಅವರ ನೆಂಟರಿಗೆ ಕನ್ನಡ ಬಿಟ್ಟು ಬೇರೆ ಯಾವ ನುಡಿಯು ಬಾರದು. ಕನ್ನಡ ಬಾರದ ಹೊರಗಿನವರು, ಕನ್ನಡ ಮಾತ್ರ ಬರುವ ಇವರ ಮನೆಯವರಿಗಿಂತ ಮೇಲಾದರೆ?  ಅವರು ಅವರ ಮೂಗಿನ ನೇರಕ್ಕೆ ಯೋಚಿಸುವುದನ್ನು ಬಿಟ್ಟರೆ ಖಂಡಿತ ಬದಲಾವಣೆ ಸಾಧ್ಯ ಅನಿಸುತ್ತದೆ.

ಮತ್ತೆ ಕೆಲವರು ಹೇಳ್ತಾರೆ, 'ನೀನು ಕನ್ನಡಾಭಿಮಾನಿ ಅಲ್ಲವಾ ಯಾಕೆ ಇಂಗ್ಲಿಷ್ ಪದಗಳನ್ನು ಮಾತಿನ ಮಧ್ಯದಲ್ಲಿ ಬಳಸುತ್ತಿಯ? ನೀನು ಕನ್ನಡವನ್ನೇ ಮಾತನಾಡಬೇಕು'. ನಿಜವಾಗಲು ಇಂತಹ ಬಾಲಿಶ ಕೇಳ್ವಿಗಳಿಗೆ ನನಗೆ ಮರುನುಡಿಗಳು ತಿಳಿದಿಲ್ಲ. ನನ್ನ ಮಾತಿನಲ್ಲಿರುವ ಅನ್ಯ ನುಡಿಪದಗಳ ಧಾಳಿಗೆ ನಾನು ಕಾರಣನೆ?  'ನಾನು ಊಟ ಮಾಡುವ ಎಲೆಯಲ್ಲಿ 'ನೊಣ' ಬಿದ್ದಿರುವುದನ್ನು ತೋರಿಸುತ್ತಿರುವ ಈ ಗೆಳೆಯರು ಅವರ ಎಲೆಯಲ್ಲಿ 'ಹೆಗ್ಗಣ' ಬಿದ್ದಿರುವುದನ್ನು ಗಮನಿಸಲೇ ಇಲ್ಲವಲ್ಲ !? ನನ್ನ ಮಾತಿನಲ್ಲಿ ಇಂಗ್ಲಿಶ್ ಹುಡುಕುವ ಬದಲು ಕನ್ನಡ ಸೇವೆ ಎಲ್ಲಿ ಸಿಗುತ್ತಿಲ್ಲ ಎಂದು ಹುಡುಕಿದರೆ, ಮುಂದೆ ಕನ್ನಡವನ್ನು ಕರ್ನಾಟಕದಲ್ಲಿ ಹುಡುಕುವ ಪರಿಸ್ತಿತಿ ಬರುವುದಿಲ್ಲ. ಇದು ನಮ್ಮ ನಾಡಿನ ದುರಂತ ಅನಿಸುತ್ತದೆ, ಬೆನ್ನು ತಟ್ಟುವರಿಗಿಂತ ಕಾಲು ಎಳೆಯುವರೆ ಹೆಚ್ಚು.
        
ಗ್ರಾಹಕನಾಗಿ ಕನ್ನಡಕ್ಕಾಗಿ ಒತ್ತಾಯ ಮಾಡುವುದು, ನಮ್ಮ ನುಡಿಯನ್ನು ನಾವು ಪ್ರೋತ್ಸಾಹಿಸುವುದು ನನ್ನ ಜೊತೆ ಉಳಿದ ಕನ್ನಡಿಗರ ಅನುಕೂಲಕ್ಕಾಗಿ, ಅಗತ್ಯತತೆಗಾಗಿ, ಕಾಳಜಿಗಾಗಿ ಮತ್ತು  ಕರ್ನಾಟಕದಲ್ಲಿ ಕನ್ನಡದ ಸಾರ್ವಬೌಮತ್ವಕ್ಕಾಗಿ. ಹಾಗೆಂದ ಮಾತ್ರಕ್ಕೆ ಅಭಿಮಾನ ಎಂಬುದು ಸೊನ್ನೆ ಎಂಬ ಹುರುಳಲ್ಲ, ಅಭಿಮಾನಕ್ಕಿಂತ ಮೊದಲು ನಾನು ಈ ಮೊದಲು ಹೇಳಿದ ಕಾರಣಗಳು ಬಂದು ನಿಲ್ಲುತ್ತವೆ.     

ಗೆಳೆಯರೆ/ನೆಂಟರೆ, ನಿಮ್ಮ ಚುಚ್ಚು, ಬಿಚ್ಚು ನುಡಿಗಳು ನನಗೆ ಮೆಚ್ಚುಗೆಯಾಗಿವೆ. ಹೀಗೆ ಆಡುತ್ತಿರಿ, ಆ ಮೂಲಕ ನನ್ನನ್ನು ನಾನು ನೋಡಿಕೊಳ್ಳುತ್ತೇನೆ. ಯಾವುದೇ ಹಣ ಪಡೆಯದೇ ನನ್ನ ಹಿಂದೆ ಬಿದ್ದು ನನ್ನ ಸರಿ-ತಪ್ಪುಗಳನ್ನು ಕಂಡು ಹಿಡಿದು ತೋರಿಸಿಕೊಡುತ್ತಿದ್ದೀರೀ  ಆ ಮೂಲಕ ನನ್ನ ತಪ್ಪುಗಳು ನನಗೆ ತಿಳಿಯುತ್ತಿವೆ ನಿಮಗೆ ನನ್ನ ವಂದನೆಗಳು. ನಿಮ್ಮ ಮಾತುಗಳು ತುಪ್ಪವಿದ್ದಂತೆ ಅದರಿಂದ ಕನ್ನಡ ದೀಪ ಬೆಳಗಲಿ. 

ಮಂಗಳವಾರ, ಮಾರ್ಚ್ 27, 2012

ಕ.ರಾ.ರ.ಸಾ.ಸಂ.ನ ತಪ್ಪಿಗೆ ಕನ್ನಡಿಗ ಪ್ರಯಾಣಿಕನಿಗೆ ದಂಡ !

ಅಂತರ್ಜಾಲದಲ್ಲಿ ಈ ಅಂಕಣವನ್ನು ನೀವು ಓದುತ್ತಿದ್ದೀರ ಎಂದರೆ ನಿಮಗೆ ಅಂತರ್ಜಾಲ ಬಳಸಿ ನಮ್ಮ ಕ.ರಾ.ರ.ಸಂಸ್ತೆಯ ಬಸ್ಸಿಗೆ ಯಾವುದಾದರು ಊರಿಗೆ ಮುಂಗಡ ಚೀಟಿಯನ್ನು ಪಡೆದು ಕೊಳ್ಳುವ ಕುರಿತು ಗೊತ್ತಿರಲೇಬೇಕು. ಈ ಸಂಸ್ತೆಯ ಮಿಂಬಲೆ ತಾಣವಾಗಲಿ (ವೆಬ್ ಸೈಟ್) ಹಾಗು ಅದರಲ್ಲಿ ದೊರಕುವ ಮುಂಗಡ ಚೀಟಿಗಳಾಗಲಿ (ಇ- ಚೀಟಿ) ಕನ್ನಡದಲ್ಲಿ ಸಿಗುವುದು ಗಗನ ಕುಸುಮವಾಗಿದೆ. ಕನ್ನಡದಲ್ಲಿ ಸೇವೆ ಸಿಗದಿದ್ದರೆ ಏನ್ ಹೋಗಬಾರದು ಹೋಗುತ್ತೆ ಎಂದು ನೀವು ಕೇಳೋದಾದ್ರೆ ಈ ಕೆಳಗಿನ ಒಂದು ನೈಜ ಘಟನೆ ಓದಿ;
ಇದು ನಡೆದದ್ದು ೨೦೧೧ರ ಆಗಸ್ಟಿನಲ್ಲಿ, ನನ್ನವರೊಬ್ಬರು ಬೆಂಗಳೂರಿನಿಂದ ಚಿಕ್ಕಮಗಳೂರಿನ ಆಲ್ದೂರಿಗೆ ಪ್ರಯಾಣ ಮಾಡ ಬೇಕಿತ್ತು, ಮೈಸೂರಿನಲ್ಲಿ ಕುಳಿತು, ಅವರಿಗಾಗಿ ಕ.ರಾ.ರ.ಸಾ.ಸಂಸ್ತೆಯ ಮಿಂಬಲೆ ತಾಣದಲ್ಲಿ ಮುಂಗಡ ಚೀಟಿ ಕೊಂಡುಕೊಂಡ ನಾನು ನನ್ನ ಸ್ನೇಹಿತನ ಮೂಲಕ ಆ ಚೀಟಿಯ ಪ್ರತಿಯನ್ನು (ಇ- ಟಿಕೆಟ್) ನನ್ನವರಿಗೆ ತಲುಪಿಸಿದೆ. ಅನಂತರ ನನ್ನ ದಿನದ ಕೆಲಸದಲ್ಲಿ ನಾನು ಮುಳುಗಿ ಹೋದೆ. ಆ ದಿನ ರಾತ್ರಿ ಸುಮಾರು ೧೦.೩೦ರ ಹೊತ್ತಿಗೆ ನನ್ನ ಅಲೆಯುಲಿಗೆ ನನ್ನವರಿಂದ ಕರೆ ಬಂತು, ಕರೆ ಪಡೆದಾಗ ಆ ತುದಿಯಿಂದ "ಹೇಯ್ ರತಿ, ನೀ ಕಳಿಸಿದ ಚೀತಿನ ಕಂಡಕ್ಟರ್ ಒಪ್ಪಿ ಕೊಳ್ತಾ ಇಲ್ಲಪ್ಪ, ಇದರ ಜೊತೆಗೆ ಫೋಟೋ ಇರೋ ಗುರುತಿನ ಚೀಟಿ ಬೇಕಂತೆ, ಅದು ನನಗೆ ಗೊತ್ತಿರ್ಲಿಲ್ಲ, ಈಗ ಯಾವ ಗುರುತಿನ ಚೀಟಿನು ನನ್ನ ಹತ್ತಿರ ಇಲ್ಲ, ಬಸ್ಸಿಗೆ ನಾವು ಹತ್ತಿ ಆಗಿದೆ. ಕಂಡಕ್ಟರ್, ಬಸ್ಸಿಂದ ಇಳಿಯಿರಿ ಇಲ್ಲ ಬೇರೆ ಚೀಟಿ ಮಾಡಿಸಿ ಅಂತಿದ್ದಾರೆ, ಏನು ಮಾಡೋದು ಈಗ?" ಅಯ್ಯೋ, ನಾನೇ ದೊಡ್ಡ ತಪ್ಪು ಮಾಡಿದೆ ಎಂದು ನನಗನಿಸಿತು, 'ನನ್ನ ಕೆಲಸದ ಒತ್ತಡದ ನಡುವೆ ನಿಮಗೆ 'ಗುರುತಿನ ಚೀಟಿ'ಯನ್ನು ಅದರೊಟ್ಟಿಗೆ ತೆಗೆದುಕೊಂಡು ಹೋಗಬೇಕೆಂಬುದನ್ನು ಹೇಳುವುದ ಮರೆತೆ' ಎಂದು ನಾ ಅವರಿಗೆ ಹೇಳಿದೆ.
ಆ ಕಡೆಯಿಂದ ಅವರೆಂದರು, "ಇಲ್ಲಪ್ಪ, ಹೊರಡೋ ಮುಂಚೆನೇ ನಾನು ಈ ಚೀಟಿನ ಓದೋಕೆ ನೋಡ್ದೆ, ಆದ್ರೆ ಅದು ಬರಿ ಇಂಗ್ಲಿಷಲ್ಲಿ ಇತ್ತು, ಅದು ನನಗೆ ಬರೋದಿಲ್ಲವಲ್ಲ." ಆಮೇಲೆ ಅವರು ಅದೇ ಬಸ್ಸಿಗೆ ಮೊತ್ತೊಮ್ಮೆ ಬೇರೆ ಚೀಟಿ ಪಡೆದು ಪ್ರಯಾಣ ಮಾಡಿದರು. ( ಆ ದಿನದ ಮುಂಗಡ ಚೀಟಿಯನ್ನು ಕೆಳಗೆ ಲಗತ್ತಿಸಿದ್ದೇನೆ).
ನಾನು ಹೇಳ ಬಯಸುವುದು: ಮೇಲಿನ ಘಟನೆಯಲ್ಲಿ ಒಬ್ಬ ಕನ್ನಡಿಗ, ಕರ್ನಾಟಕದ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ, ಕರ್ನಾಟಕ ರಾಜ್ಯದ ಬಸ್ಸಿನಲ್ಲೇ ಪ್ರಯಾಣಿಸುವಾಗ ಕೇವಲ ನಮ್ಮದಲ್ಲದ ಇಂಗ್ಲಿಷಿನ ಕಾರಣದಿಂದಾಗಿ ಗೊಂದಲ ಉಂಟಾಗಿ ಹಣ ಹಾಗು ಪ್ರಯಾಣದ ನೆಮ್ಮದಿ ಎರಡನ್ನು ಕಳೆದುಕೊಳ್ಳ ಬೇಕಾಯ್ತು. 
ಮುಂಗಡವಾಗಿ ಪಡೆದ ಇ -ಚೀಟಿಯಲ್ಲಿ "Important " ಎಂಬ ಹಣೆಪಟ್ಟಿಯ ಕೆಳಗೆ  ನೀಡುವ ಮಾಹಿತಿ ಪೂರ್ತಿಯಾಗಿ ಇಂಗ್ಲಿಷಿನಲ್ಲಿದೆ (ಕೆಳಗೆ ಅದರ ಪ್ರತಿ ಲಗತ್ತಿಸಿದೆ), ಇದು ನಿಜವಾಗಿಯೂ ಎಲ್ಲಾ ಕನ್ನಡಿಗರಿಗೆ ತಲುಪುತ್ತದೆಯೇ? ಅತಿ ಮುಖ್ಯವೆನಿಸುವ ಮಾಹಿತಿಗಳನ್ನು ಕರ್ನಾಟಕದಲ್ಲಿ ಕನ್ನಡಿಗರಿಗೆ ಕನ್ನಡದಲ್ಲಿ ನೀಡಬೇಕೆಂಬ ಸಾಮಾನ್ಯ ಜ್ಞಾನ ನಮ್ಮ ಸಂಸ್ತೆಗೆ ಇಲ್ಲವಾಯಿತೇ? ಒಂದು ವೇಳೆ ಆ ಮುಂಗಡ ಚೀಟಿ ಕನ್ನದಲ್ಲಿ ದೊರೆತಿದ್ದರೆ ನನ್ನವರು ಹಣವನ್ನು ಜೊತೆಗೆ ನೆಮ್ಮದಿಯನ್ನು ಕಳೆದುಕೊಳ್ಳುತ್ತಿರಲಿಲ್ಲ. ತಾವು ಮಾಡದ ತಪ್ಪಿಗೆ ದಂಡ ತೆರಬೇಕಾಗಿದ್ದು ವಿಷಾದ.
ಕ.ರಾ.ರ.ಸಾ.ಸಂಸ್ತೆಯ ಬೇಜವಾಬ್ದಾರಿಯಿಂದಾಗಿ ಹೀಗೆ ಎಷ್ಟು ಜನ ಕನ್ನಡಿಗರು ತೊಂದರೆಗೆ ಒಳಗಾಗುತ್ತಿದ್ದರೋ ಗೊತ್ತಿಲ್ಲ. ಕ.ರಾ.ರ.ಸಾ.ಸಂಸ್ಥೆ ರಾಜ್ಯ ಸರ್ಕಾರದ ಅಧೀನದ್ದು ಅದರ ಬಳಕೆದಾರರು ಬಹುಭಾಗ ಕನ್ನಡಿಗರೇ ಆಗಿದ್ದಾರೆ, ಆದರೆ ಸಾರಿಗೆಯ ಕೊಡುಗೆಗಳ ಜಾಹಿರಾತುಗಳು, ಗ್ರಾಹಕ ಸೇವಾ ಕೇಂದ್ರದ ಐವಿಅರ್ ಗಳು, ಬಸ್ಸಿನ ಚೀಟಿಗಳು (ಕೆಲವು ಕಡೆ), ಮಿಂಬಲೆ ತಾಣಗಳು ಹಾಗು  ಬಸ್ಸಿನ ಮನರಂಜನೆಗಳು ಪ್ರಾಥಮಿಕವಾಗಿ ಕನ್ನಡದಲ್ಲಿ ಇಲ್ಲದಿರಿವುದು ಹಲವು ಅನಾನುಕೊಳಕ್ಕೆ ದಾರಿ ಮಾಡಿದೆ. ಕ.ರಾ.ರ.ಸಾ.ಸಂ ನಲ್ಲಿ ಕನ್ನಡ ಪ್ರಾಥಮಿಕ ಭಾಷೆಯಾಗಿರಲಿ, ಮಿಂಬಲೆ ತಾಣಗಳಲ್ಲಿ, ಜಾಹಿರಾತುಗಳಲ್ಲಿ, ಬಸ್ಸಿನ ಮನರಂಜನೆಗಳಲ್ಲಿ ಹಾಗು ಗ್ರಾಹಕ ಸೇವಾ ಕೇಂದ್ರದಲ್ಲಿ ಕನ್ನಡಲ್ಲೇ ಮೊದಲು ಸೇವೆ ನೀಡಿದಲ್ಲಿ ಹೆಚ್ಚು ಹೆಚ್ಚು ಅನುಕೂಲಕರವಾಗಿರುವುದು.

ಕ.ರಾ.ರ.ಸಾ.ಸಂಗೆ ಕನ್ನಡದಲ್ಲಿ ಪ್ರಾಥಮಿಕ ಸೇವೆ ನೀಡಬೇಕೆಂದು ಒತ್ತಾಯ ಮಾಡೋ ಮನಸಾದಲ್ಲಿ ಒತ್ತಿ ನಿಮ್ಮ ಅನಿಸಿಕೆ ಬರೆಯಿರಿ, ಗ್ರಾಹಕರ ಅನುಕೂಲಕ್ಕಾಗಿ ಕನ್ನಡದಲ್ಲಿ ಮೊದಲು ಸೇವೆ ನೀಡಬೇಕೆಂದು ಕೇಳಿ,  ಇಲ್ಲವಾದರೆ ಈ ದೂರವಾಣಿಗೆ ಕರೆ ಮಾಡಿ ಕನ್ನಡ ಸೇವೆ ನೀಡಲು ಕೇಳಿಕೊಳ್ಳಿ -080-22873377, 080-22870099, 7760990560

http://www.ksrtc.in/site/feedback

ಬುಧವಾರ, ಮಾರ್ಚ್ 21, 2012

ಒತ್ತಾಯಿಸಿದ ಗ್ರಾಹಕನಿಗೆ ಒಲಿದ ಕನ್ನಡ ಸೇವೆ: ಭಾರತಿ -ಎಕ್ಸಾ ಮತ್ತು ನಾನು!

ಸುಮಾರು ಮೂರು ವರ್ಷಗಳಿಂದ ಭಾರತಿ- ಎಕ್ಸಾ ಎಂಬ ಕಂಪನಿಯ ಜೀವ ವಿಮೆಯ ಗ್ರಾಹಕನಾದ ನನಗೆ ಕಳೆದ ತಿಂಗಳು ನನ್ನ ವಿಮೆಯ ಕಂತಿನ ವಿಚಾರಾವಾಗಿ ಒಂದು ಸಣ್ಣ ಗೊಂದಲ ಉಂಟಾಗಿತ್ತು. ಗೊಂದಲವನ್ನು ಪರಿಹರಿಸುವ ಸಲುವಾಗಿ ಅವರ ಗ್ರಾಹಕ ಸೇವೆಯ ದೂರವಾಣಿಗೆ ಕರೆ ಮಾಡಿದರೆ ನನಗೆ ಬೆರಗು ಕಾದಿತ್ತು! ಗ್ರಾಹಕ ಸೇವೆಯ ಐವಿಅರ್ ನಲ್ಲಿ ಇಂಗ್ಲಿಷ್ ಮತ್ತು ಹಿಂದಿಯನ್ನು ಬಿಟ್ಟರೆ ಬೇರೆ ಆಯ್ಕೆಗಳಿಲ್ಲ! ಹೋಗಲಿ, ಕರೆ ಸ್ವೀಕರಿಸಿದ ವ್ಯಕ್ತಿ ಹತ್ತಿರ ಕನ್ನಡ ಮಾತಾನಾಡುವವರಿಗೆ ಕರೆ ವರ್ಗಾಯಿಸಲು ಕೇಳಿದರೆ ಕನ್ನಡ ಸೇವೆಯೇ ಇಲ್ಲ! ಅಲ್ಲಾ, ಈ ಕಂಪನಿಯ ಗ್ರಾಹಕರಾಗಬೇಕಾದರೆ ನಾವು ಇಂಗ್ಲಿಷ್ ಅಥವಾ ಹಿಂದಿಯನ್ನು ಕಲಿಬೇಕಾ? ಕನ್ನಡದಲ್ಲಿ ಸೇವೆ ಸಿಗಲು ಸಾಧ್ಯವೆ ಇಲ್ಲವೇ? ಏನಾದರು ಆಗಲಿ ಒತ್ತಾಯ ಮಾಡಿ ಕನ್ನಡಲ್ಲೇ ಸೇವೆ ಪಡೆಯಬೇಕೆಂದು ನಿರ್ಧರಿಸಿ, ನನ್ನ ಗೊಂದಲ ನಿವಾರಣೆಗೆ ಕನ್ನಡ ಬಲ್ಲವರ ಹತ್ತಿರ ಸುಲಭವಾಗಿ ಮಾತುಕತೆ ನಡೆಸ ಬಹುದು ಎಂದು ಹೇಳಿ ಆ ವ್ಯವಸ್ಥೆ ಮಾಡುವಂತೆ ಅವರನ್ನು ಕೇಳಿಕೊಂಡೆ. ಜೊತೆಗೆ ಒಂದು ಮಿಂಚೆಯನ್ನು ಬರೆದೆ.
ಇದಾದ ಕೆಲವು ದಿನಗಳ ನಂತರ ಪ್ರತಿ ಎರೆಡು ಮೂರು ದಿನಗಳಿಗೊಮ್ಮೆ ಈ ಕಂಪನಿಯ ಗ್ರಾಹಕ ಸೇವಾ ಕೇಂದ್ರದಿಂದ ನನ್ನ ಗೊಂದಲ ನಿವಾರಣೆಗೆಂದು ಕರೆ ಮಾಡುತ್ತಿದ್ದರು, ಆದರೆ ಅವರು ಮಾತನಾದುತ್ತಿದ್ದಿದು ಕೇವಲ ಇಂಗ್ಲೀಷ ಅಥವಾ ಹಿಂದಿಯಲ್ಲಿ. ಆ ಭಾಷೆಗಳಲ್ಲಿ ವ್ಯವಹರಿಸುವುದು ನನಗೆ ಮತ್ತೊಂದು ಗೊಂದಲವಾಗಿದ್ದರಿಂದ ಅನುಕೂಲಕರ ವ್ಯವಹಾರಕ್ಕೆ ನಾನು ನನ್ನ ತಾಯ್ನುಡಿಯಲ್ಲೇ ಸೇವೆ ಬೇಕೆಂದು ಹೇಳಿ ಕರೆ ಮುಗಿಸುತ್ತಿದ್ದೆ.


ಅಂತು ಕಳೆದ ಶನಿವಾರ ಕನ್ನಡ ಬಲ್ಲ ಒಬ್ಬರು ಬೆಂಗಳೂರಿನ ಶಾಖೆಯಿಂದ ಕರೆ ಮಾಡಿ ನನ್ನ ತೊಂದರೆ ನಿವಾರಿಸಿದರು, ನನ್ನ ತೊಡಕುಗಳನ್ನು ಬಹಳ ಸುಲಭವಾಗಿ ಹಂಚಿಕೊಳ್ಳಲು ಅದರಿಂದ ಸಾಧ್ಯವಾಯಿತು ಹಾಗೆಯೇ ಅಧಿಕಾರಿ  ಕೂಡ ಸರಳವಾಗಿ ಮರುನುಡಿ ನೀಡಿ ನನ್ನನ್ನು ಮತ್ಯಾವ ಗೊಂದಲಕ್ಕೆ ಈಡು ಮಾಡದೆ ಸೇವೆ ನೀಡಿದರು.
ಗೆಳೆಯರೆ/ಗೆಳತಿಯರೆ, ಇಲ್ಲಿ ನಾನು ಹಂಚಿಕೊಲ್ಲಬೇಕಾಗಿದ್ದು ಇಷ್ಟೇ, ಕರ್ನಾಟಕದಲ್ಲಿ ಕನ್ನಡಿಗರಿಗೆ ಕನ್ನಡದಲ್ಲಿ ಸೇವೆ ನೀಡ ಬೇಕಾಗಿರುವುದು ಎಲ್ಲ ಕಂಪನಿಗಳಿಗೆ ಮೂಲಭೂತವಾದದ್ದು. ಇದನ್ನು ಮರೆತು, ಕನ್ನಡಿಗರ ಮೇಲೆ ಬೇರೆ ನುಡಿಗಳ ಹೇರಿಕೆಯನ್ನು ಹಲವು ಕಂಪನಿಗಳು ಮಾಡುತ್ತಿವೆ, ಒಬ್ಬ ಗ್ರಾಹಕನಾಗಿ ಈ ಚಿತ್ರಣವನ್ನು ಬದಲು ಮಾಡುವ ಶಕ್ತಿ ಪ್ರತಿಯೋಬ್ಬನಿಗಿದೆ, ಇದಕ್ಕೆ ನನ್ನ ಮೇಲಿನ ಪ್ರಕರಣವೇ ಸಾಕ್ಷಿ. ಇದು ಅಭಿಮಾನದ ದೃಷ್ಟಿಯಿಂದ ಮಾಡಿದ್ದಲ್ಲ ನನ್ನ ಅನುಕೂಲದ ದೃಷ್ಟಿಯಿಂದ, ತಾಯ್ನುಡಿಯಲ್ಲಿ ವ್ಯವಹಾರ ಅತ್ಯಂತ ಸುಲಭ ಹಾಗು ಸರಳವಾಗಿ ಕಾಣುತ್ತದೆ. ಗ್ರಾಹಕನಾಗಿ ಪ್ರತಿಯೊಬ್ಬರೂ ಹೀಗೆ ಕನ್ನಡದಲ್ಲಿ  ಸೇವೆ ಪಡೆದಲ್ಲಿ ಮೋಸ ಹೋಗುವ ಸಂಧರ್ಭಗಳು ಕಡಿಮೆ. ಆದ್ದರಿಂದ ಗ್ರಾಹಕರಾಗಿ ನೀವು ಪಡೆದುಕೊಳ್ಳುವ ಸೇವೆ ಕನ್ನಡದಲ್ಲಿ ಇರಲಿ.  

ನೀವು ಈ ಕಂಪನಿಗೆ ಕನ್ನಡ ಸೇವೆ ನೀಡಿ ಎಂದು ಕೇಳುವ ಮನಸಾದಲ್ಲಿ ಒಂದೈದು ನಿಮಿಷ ಬಿಡುವು ಮಾಡಿಕೊಂಡು  ಈ ವಿಳಾಸಕ್ಕೆ service@bharti-axalife.com  ಒಂದು ಮಿಂಚೆ  ಬರೆದು ಅಥವಾ ೧೮೦೦ -೧೦೨ -೪೪೪೪ ಕರೆ ಮಾಡಿ ಕನ್ನಡ ಸೇವೆಗೆ ಕೇಳಿಕೊಳ್ಳಿ.