ಸೋಮವಾರ, ಏಪ್ರಿಲ್ 16, 2012

ಗ್ರಾಹಕನಾಗಿ ಉಳಿಸ ಬೇಕಾದ ಕನ್ನಡ

ಕಳೆದ ಇಪ್ಪತ್ತು ವರ್ಷಗಳಿಂದ ನಮ್ಮ ರಾಜ್ಯದ ನಗರ ಪ್ರದೇಶಗಳಲ್ಲಿ ಆದ ದೊಡ್ಡ ಬದಲಾವಣೆಗಳಲ್ಲಿ ಸೂಪರ್ ಮಾರ್ಕೆಟ್, ಮಲ್ಟಿಪ್ಲೆಕ್ಸ್ ಹಾಗು ಬ್ಯಾಂಕಿಂಗ್ ಸೇವೆಗಳು ಕೆಲವು.ಈ ಎಲ್ಲ ಬದಲಾವಣೆಗಳಲ್ಲಿ ಗಮನಿಸಬಹುದಾದ ಮುಖ್ಯವಾದ ಅಂಶವೆಂದರೆ ಅವರು ನೀಡುವ ಸೇವೆಗಳಲ್ಲಿ ಕನ್ನಡದ ಕಡೆಗಣನೆ. ಸುಮ್ಮನೆ ಸೂಪರ್ ಮಾರ್ಕೆಟ್ ಕಡೆ ಹೋಗಿ ಬನ್ನಿ, ಅವರ ಕೊಡುಗೆಗಳ ಜಾಹಿರಾತು, ಸೂಚನಾ ಫಲಕಗಳು, ಸುರಕ್ಷತೆಯ ಸೂಚನೆಗಳು, ರಸೀದಿಗಳು, ಧ್ವನಿ ವರ್ಧಕದಲ್ಲಿ ತೇಲಿ ತೇಲಿ ಬರುವ ಹಾಡುಗಳು ಹೀಗೆ ಅಲ್ಲಿನ ಸಂಪೂರ್ಣ ಪರಿಸರದಲ್ಲಿ ಕನ್ನಡವನ್ನು ಹುಡುಕಬೇಕಾಗಿದೆ. ಇನ್ನು ಮಲ್ಟಿಪ್ಲೆಕ್ಸ್ ಗಳಲ್ಲೂ ಇದೇ ಕಥೆ. ಕನ್ನಡ ಚಿತ್ರದ ಜೊತೆ ಕನ್ನಡವನ್ನು ಅಲ್ಲಿ ಬೂದು ಗಾಜಿನ ಜೊತೆ ಹುಡುಕಬೇಕಾಗಿದೆ. ಮುಂದಿನದು ಬ್ಯಾಂಕಿಂಗ್ ಸೇವೆ, ಆಧುನಿಕ ಸೇವೆಗಳ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯಲು ಇವರು ಮಾಡುವ ಕೆಲಸಗಳೇ ಇಲ್ಲ. ಆದರು ಕರ್ನಾಟಕದ ಜನರನ್ನು ತಲುಪಬೇಕಾದಲ್ಲಿ ಅದು ಕನ್ನಡದಿಂದ ಮಾತ್ರ ಸಾಧ್ಯ ಎಂಬುದನ್ನು ಎಷ್ಟೋ ಹಣಮನೆಗಳು ಮರೆತಂತಿದೆ. ಚಲನ್, ಚೆಕ್ ಹಾಳೆಗಳು, ಜಾಹಿರಾತುಗಳು, ಮಾಹಿತಿಗಳು ಹೀಗೆ ಎಲ್ಲೆಲ್ಲು ಕನ್ನಡ ಮಾಯಾ! ಇನ್ನು ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿದರೆ ಕನ್ನಡವನ್ನು ಬೇಡಿದರು ಸಿಕ್ಕದು.

ಇಂಥಹ ಋಣಾತ್ಮಕ ಬೆಳವಣಿಗೆಗೆ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ನಾವೆಲ್ಲರು ಕಾರಣಕರ್ತರು. ಮೇಲೆ ತಿಳಿಸಿದ ಯಾವುದೇ ಸ್ಥಳಗಳಿಗೆ ಹೋದರು ನಮ್ಮ ತಾಯ್ನುಡಿಯಲ್ಲಿ ಮಾತನಾಡುವುದು ಅಷ್ಟು ಸಮಂಜಸವಲ್ಲ ಎಂಬ ಕೀಳರಿಮೆ ನಮ್ಮಲ್ಲಿ ಬೇರೂರಿದೆ. ಬೆಳಗ್ಗೆ ಎದ್ದು ಹಾಲು ತರಕಾರಿ ತರಲು ಹೋದಾಗ, ಅಂಗಡಿಯವನ ಹತ್ತಿರ 'ಒಂದು ಲೀಟರ್ ಹಾಲು, ಅರ್ಧ ಕೆಜಿ ಆಲೂಗೆಡ್ಡೆ' ಎಂದು ಕೇಳುವ ನಾವು ಇದೇ ಸೂಪರ್ ಮಾರ್ಕೆಟ್ ನಲ್ಲಿ 'ವೇರ್ ಇಸ್ ದಿ ಮಿಲ್ಕ್, ವೇರ್ ಇಸ್ ಪೊಟಾಟೋ ?' ಎಂದು ಕೇಳ್ತಿವಿ. ಯಾವುದಕ್ಕೋ ಚೆಕ್ ಅನ್ನು ಬರೆಯ ಬೇಕಾದಾಗ ಇಂಗ್ಲೀಷಿನಲ್ಲಿ ಬರೆದು ಕೊಡ್ತೀವಿ, ಕ್ರೆಡಿಟ್ ಕಾರ್ಡ್ ವಿಚರಾವಾಗಿ ಬ್ಯಾಂಕಿನ ಗ್ರಾಹಕ ಸೇವಕರ ಹತ್ತಿರ ಮಾತನಾಡುವಾಗ ಇಂಗ್ಲೀಷಿನಲ್ಲಿ ಉಲಿಯುತ್ತೀವಿ. ಮಲ್ಟಿಪ್ಲೆಕ್ಸ್ ಗಳಿಗೆ ಕನ್ನಡೇತರ ಚಿತ್ರಗಳನ್ನು ನೋಡಲು ಮಾತ್ರ ಹೋಗ್ತಿವಿ. ಅಂದರೆ, ನಾವು ಹೆಚ್ಚು ದುಡ್ಡು ಖರ್ಚು ಮಾಡುವ ಜಾಗದಲ್ಲಿ ಕನ್ನಡಕ್ಕೆ ಜಾಗವಿಲ್ಲವೆ? ಇದು ನಾವೇ ಬೆಳೆಸಿಕೊಂಡ ಕೀಳರಿಮೆ ಅಲ್ಲವೇ ? ಗ್ರಾಹಕ ಸೇವೆಗಳಲ್ಲಿ ಕನ್ನಡದ ಅನುಷ್ಠಾನಕ್ಕೆ ಬೇಕಾದ ತಕ್ಕ ಕಾನೂನುಗಳು ಬಲಿಷ್ಟವಾಗಿ ರೂಪುಗೊಳ್ಳಬೇಕಾದರೆ ಗ್ರಾಹಕ ಸೇವೆಯಲ್ಲಿ ನುಡಿಯ ಮಹತ್ವವನ್ನು ಗ್ರಾಹಕರಾದ ನಾವು ಸರಿಯಾಗಿ ತಿಳಿದುಕೊಳ್ಳ ಬೇಕಾಗಿದೆ ಹಾಗು ಗ್ರಾಹಕರಾಗಿ ಕನ್ನಡದ ಬಳಕೆಯನ್ನು ಮಾಡಬೇಕಿದೆ.

ಹಾಗಾದರೆ ನಾವೇನು ಮಾಡಬಹುದು ಎಂದು ಕೇಳಿದರೆ, ನಾವು ಭೇಟಿ ಮಾಡುವ ಪ್ರತಿ ಅಂಗಡಿಗಳಲ್ಲಿ, ಬ್ಯಾಂಕು, ಮಲ್ಟಿಪ್ಲೆಕ್ಸ್ ನಲ್ಲಿ ಕನ್ನಡದಲ್ಲಿ ಸೇವೆ ನೀಡಬೇಕೆಂಬ ಒತ್ತಾಯವಿರಲಿ, ಮೊದಲು ಕನ್ನಡದಲ್ಲೇ ವ್ಯವಹರಿಸಬೇಕೆಂಬ ತಿಳಿವು ನಮ್ಮಲ್ಲಿರಲಿ, ದೊಡ್ಡ ಅಂಗಡಿಗಳಲ್ಲಿ ಕನ್ನಡೇತರ ಹಾಡುಗಳು ತೇಲಿ ಬಂದಾಗ ಕನ್ನಡ ಹಾಡುಗಳ ಪ್ರಸಾರಕ್ಕೆ ಒತ್ತಾಯವಿರಲಿ, ಹೀಗೆ ಹತ್ತು ಹಲವು.... ಇದು ಕರ್ನಾಟಕದಲ್ಲಿ ಕನ್ನಡದ ಸಾರ್ವಭೌಮತ್ವದ ಪ್ರಶ್ನೆ ಒಂದೇ ಅಲ್ಲ ಕನ್ನಡಿಗನ ಉಳಿವಿನ ಪ್ರಶ್ನೆಯು ಆಗಿದೆ. ಅದಕ್ಕೆ ಒಂದು ಚಿಕ್ಕ ಎತ್ತುಗೆ (ಉದಾಹರಣೆ) ಇಲ್ಲಿದೆ, ಯಾವುದೇ ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆಮಾಡಿ ಬ್ಯಾಂಕಿನ ಪ್ರತಿನಿಧಿಯ ಜೊತೆ ಕನ್ನಡಲ್ಲೇ ಸೇವೆ ನೀಡಬೇಕೆಂದು ಒತ್ತಾಯ ಮಾಡಿದಲ್ಲಿ, ಬ್ಯಾಂಕಿನವರು ಕನ್ನಡ ಗೊತ್ತಿರುವರನ್ನೇ ನೇಮಕ ಮಾಡಿಕೊಳ್ಳಬೇಕಾಗುವುದು, ಹಾಗೆ ನೇಮಕಗೊಂಡವರು ಕನ್ನಡಿಗರೇ (ಅಥವಾ ಕನ್ನಡ ಬಲ್ಲವರೇ) ಆಗಿರುವರು, ಇದರಿಂದ ಮಾರುಕಟ್ಟೆಯಲ್ಲಿ ಕನ್ನಡಕ್ಕೆ ಬೇಡಿಕೆ ಹೆಚ್ಚುವುದು, ಹೆಚ್ಚು ಹೆಚ್ಚು ಕನ್ನಡಿಗರಿಗೆ ಉದ್ಯೋಗ ದೊರಕುವುದು. ಅದೇ, ನೀವು ಇಂಗ್ಲೀಷಿನಲ್ಲೋ, ಹಿಂದಿಯಲ್ಲೋ ವ್ಯವಹರಿಸಿದಲ್ಲಿ ಕನ್ನಡಕ್ಕೆ ಯಾವ ಬೇಡಿಕೆಯು ಇರುವುದಿಲ್ಲ, ಜೊತೆಗೆ ಒಬ್ಬ ಕನ್ನಡಿಗ ಹತ್ತಾರು ಪರಭಾಷಿಕ ವಲಸಿಗರೊಂದಿಗೆ ಉದ್ಯೋಗಕ್ಕಾಗಿ ಪೈಪೋಟಿಗೆ ನಿಲ್ಲಬೇಕು. ನಮ್ಮ ರಾಜ್ಯದಲ್ಲಿ ನಮ್ಮವರಿಗೆ ಕೆಲಸ ಪಡೆಯಲು ಎಷ್ಟು ಒದ್ದಾಡಬೇಕು ನೋಡಿ!

ಕನ್ನಡಿಗರ ಬೆಳವಣಿಗೆಯ ದೃಷ್ಟಿಯಿಂದ, ಅಭಿಮಾನಕ್ಕಾಗಿ ಅಲ್ಲವಾದರೂ ನಮ್ಮ ಅನುಕೂಲಕ್ಕಾಗಿ ಕನ್ನಡವನ್ನು ಮಾರುಕಟ್ಟೆಯಲ್ಲಿ ಬಳಸುವುದರಿಂದ ಕನ್ನಡಿಗರ ಏಳಿಗೆ ಸಾಧ್ಯ ಅದರಿಂದ ನಾಡು-ನುಡಿಯ ಏಳಿಗೆ ಸಾಧ್ಯ. ಅಂಗಡಿಯಲ್ಲಿ ಕನ್ನಡ ಮಾತಾಡಿ, ಕನ್ನಡ ಸೇವೆ ದೊರಕದಿದ್ದಾಗ ಒತ್ತಾಯ ಮಾಡಿ, ಅವಶ್ಯಕತೆ ಬಿದ್ದಲ್ಲಿ ಸೂಕ್ತ ಕಾನೂನಿನ ಸಹಾಯ ಪಡೆದುಕೊಳ್ಳಿ. ಇಂದು ನಾವು ಕನ್ನಡ ಸೇವೆ ಕೇಳಿದ ತಕ್ಷಣ ನಾಳೆಯೇ ಬದಲಾವಣೆ ಆಗುವುದು  ಸಾಧ್ಯವಿಲ್ಲ, ಎಲ್ಲರು ಕೈ ಜೋಡಿಸಿದಲ್ಲಿ ಒಂದಲ್ಲ ಒಂದು ದಿನ ಬದಲಾವಣೆ ಖಂಡಿತ. ಈಗಲೇ ಎಚ್ಚೆತ್ತು ಮುಂದಡಿ ಇಟ್ಟಲ್ಲಿ ಕರ್ನಾಟಕವು ಕನ್ನಡಮಯ ಆಗುವುದು ಇಲ್ಲವಾದರೆ ಕನ್ನಡ ಮಾಯಾ ಆಗುವುದು!      
 
=====================================================
ಕನ್ನಡದಲ್ಲಿ ಗ್ರಾಹಕಸೇವೆ ಸಿಕ್ತಿಲ್ವಾ? ಇನ್ಯಾಕೆ ತಡ, ಈ ಗುಂಪಲ್ಲಿ ನಿಮ್ಮ ಅನುಭವ ಹಂಚಿಕೊಳ್ಳಿ:

ಅಂಗಡಿಯಲ್ಲಿ ಕನ್ನಡ ನುಡಿ ಫೇಸ್ ಬುಕ್ ಖಾತೆಯಲ್ಲಿ ನಿಮ್ಮ ಅನುಭವ ಅತ್ಯಂತ ಸುಲಭವಾಗಿ ಹಂಚಿಕೊಳ್ಳಿ:http://www.facebook.com/#!/profile.php?id=100002086395722

ನೀವು ಪಾಲ್ಗೊಳ್ಳಿ, ನಿಮ್ಮ ಗೆಳೆಯರನ್ನು, ಬಂಧುಗಳನ್ನು ಸೇರಿಸಿ !
=====================================================