ಸೋಮವಾರ, ಡಿಸೆಂಬರ್ 12, 2011

ಕನ್ನಡ ಪ್ರಭ ಮತ್ತು ನನ್ನ ಓಲೆ

ಈ ವರ್ಷದ ನವೆಂಬರ್ ೧ ರಂದು ಕನ್ನಡ ಪ್ರಭ ಪತ್ರಿಕೆಯಲ್ಲಿ ಹಿಂದಿಯನ್ನು ರಾಷ್ಟ್ರಭಾಷೆ ಎಂಬ ಉಲ್ಲೇಖದ ಲೇಖನಕ್ಕೆ ಪ್ರತಿಕ್ರಿಯೆ ನೀಡಲಾಗಿತ್ತು, ಅದಕ್ಕೆ ಉತ್ತರವಾಗಿ ಸಂಪಾದಕರು ಕೂಡ ತಮ್ಮ ನಿಲುವನ್ನು ನವೆಂಬರ್ ೩ ರ ಪತ್ರಿಕೆಯಲ್ಲಿ ಪ್ರಕಟಿಸಿದ್ದರು.
ಅವರ ನಿಲುವಿಗೆ ಮತ್ತೊಮ್ಮೆ ನಾನು ಪ್ರತ್ತ್ಯುತ್ತರ ನೀಡಿದ್ದೆ ಆದರೆ ಆ ಪ್ರತ್ತ್ಯುತ್ತರಕ್ಕೆ ಇಂದಿನವರೆಗೂ ಮಾರುತ್ತರವಿಲ್ಲ!!! ಆ ಎಲ್ಲ ಪತ್ರಗಳನ್ನು ಇಲ್ಲಿ ನೀಡಿದ್ದೇನೆ, ನೀವೂ ಓದಿ....


ಸಂಪಾದಕರ ಮೇಲಿನ ಉತ್ತರಕ್ಕೆ ನನ್ನ ಪ್ರತ್ತ್ಯುತ್ತರ:

ನೆಲ್ಮೆಯ ಸಂಪಾದಕರೆ,
ನವೆಂಬರ್ ೧ ರ ಪತ್ರಿಕೆಯಲ್ಲಿ ಪ್ರಕಟವಾದ ವಿಷಯದ ಮೇಲೆ ನನ್ನ ಅನಿಸಿಕೆಗೆ ನೀವು ನವೆಂಬರ್ ೩ ರಂದು 'ತಪ್ಪಾಯ್ತು ತಿದ್ಕೊತಿವಿ' ವಿಭಾಗದಲ್ಲಿ ನಿಮ್ಮ ಉತ್ತರವನ್ನು ನೀಡಿದ್ದೀರಿ (ಪ್ರತಿಯನ್ನು ಲಗತಿಸಿದ್ದೇನೆ). ಇದರ ವಿಷಯವಾಗಿ ನಾನು ನನ್ನ ಅನಿಸಿಕೆಯನ್ನು ಮತ್ತೊಮ್ಮೆ ನಿಮ್ಮ ಬಳಿ ಹಂಚಿಕೊಳ್ಳಬೇಕೆಂದು ಬಹಳ ಹಿಂದೆಯೇ ಆಲೋಚಿಸಿದ್ದೆ ಆದರೆ ಹಲವು ವೈಯಕ್ತಿಕ ಕಾರಣಗಳಿಂದಾಗಿ ನಿಮಗೆ ಉತ್ತರ ಬರೆಯಲು ಕಾಲಾವಕಾಶ ದೊರೆಯಲಿಲ್ಲ. ತಡವಾದರೂ ತೊಂದರೆಯಿಲ್ಲ ಎಂದು ನಿಮ್ಮ ಉತ್ತರಕ್ಕೆ ನನ್ನ ಅಭಿಪ್ರಾಯಗಳನ್ನು ಬರೆದಿದ್ದೇನೆ.
ಮೊದಲನೆಯದಾಗಿ, 'ಆಡಳಿತ ಭಾಷೆಯಾದ ಹಿಂದಿಯನ್ನು ರಾಷ್ಟ್ರ ಭಾಷೆಯೆಂದು ಕರೆಯವುದರಲ್ಲಿ ತಪ್ಪಿಲ್ಲ ಎಂದು ಮಂಡಿಸಿದ್ದೀರಿ', ಸಂವಿಧಾನ ರಚನೆಯಾದ ಸಂದರ್ಭದಲ್ಲಿ ಹಿಂದಿಯ ಜೊತೆ ಜೊತೆ ಮೊದಲ ೧೫ ವರ್ಷಕ್ಕೆ ಇಂಗ್ಲೀಷನ್ನು ಆಡಳಿತ ಭಾಷೆಯಾಗಿ ಬಳಸ ಬಹುದೆಂದು ಉಲ್ಲೇಖವಾಗಿದೆ ಎಂಬ ವಿಷಯ ನನಗೆ ನನ್ನ  ಸಮಾಜಶಾಸ್ತ್ರದ ಅಧ್ಯಾಪಕರು ನನಗೆ ಪ್ರೌಢಶಾಲೆಯಲ್ಲಿ ಹೇಳಿಕೊಟ್ಟ ವಿಷಯ ( ೧೯೬೫ರಲ್ಲಿ ಇಂಗ್ಲಿಷ್ ಮೇಲಿನ ನಿರ್ಭಂಧವನ್ನು ತೆಗೆದು ಹಾಕಿದ್ದಾರೆ), ಹಾಗಾದರೆ ನಾವು ಇಂಗ್ಲೀಷನ್ನು ರಾಷ್ಟ್ರಭಾಷೆ ಎಂದು ಪರಿಗಣಿಸ ಬಹುದಲ್ಲವೇ? ನೇವು ನಿಮ್ಮ ಉತ್ತರದಲ್ಲಿ ತಿಳಿಸಿದಂತೆ ಸಂವಿಧಾನದ ೭೧ನೆ ತಿದ್ದುಪಡಿಯ ೮ನೆ ಪರಿಚ್ಹೇದದಲ್ಲಿ ೧೮ ಭಾಷೆಗಳನ್ನು ಗುರಿತಸಲಾಗಿದೆ, ಅವು ಕೂಡ ನಮ್ಮ ರಾಷ್ಟ್ರದ ಭಾಷೆಗಳಲ್ಲವೇ, ಅವನ್ನು ಕೂಡ ನಾವು ರಾಷ್ಟ್ರ ಭಾಷೆ ಅನ್ನ ಬಹುದಲ್ಲವೇ? ಕೇವಲ ಅತಿ ಹೆಚ್ಚು ಮಾತನಾಡುವ ಜನರಿದ್ದಾರೆ ಎಂದ ಮಾತ್ರಕ್ಕೆ ನಾವು ಒಂದು ಭಾಷೆಯನ್ನ ರಾಷ್ಟ್ರ ಭಾಷೆ ಎಂದರೆ ಉಳಿದ ಭಾಷಿಕರ ಜೊತೆ ಸಮಾನತೆಯನ್ನು ಹೇಗೆ ಕಾಪಾಡಲು ಸಾಧ್ಯ? ರಾಷ್ಟ್ರ ಭಾಷೆ ಹಾಗು ಆಡಳಿತ ಭಾಷೆಗೂ ಇರುವ ವ್ಯತ್ಯಾಸವನ್ನು ಒಂದು ಪತ್ರಿಕೆಯ ಸಂಪಾದಕರಾದ ನಿಮಗೆ ಸಾಮಾನ್ಯ ಓದುಗನಾದ ನಾನು ತಿಳಿಸಿಕೊಡುವ ಅವಶ್ಯಕತೆ ಇಲ್ಲ ಅಂದು ಭಾವಿಸಿದ್ದೇನೆ.
ಎರಡನೆಯದು, 'ಚಿಕ್ಕವರಿರುವಾಗ ಪಟ್ಯದಲ್ಲಿ ಹಿಂದಿಯನ್ನು ರಾಷ್ಟ್ರ ಭಾಷೆ ಎಂದಿದೆ, ನಾವು ಸಾಮಾನ್ಯವಾಗಿ ಯಾರನ್ನು ಕೇಳಿದರು ಹಿಂದಿ ರಾಷ್ಟ್ರ ಭಾಷೆ ಎಂದು ಹೇಳುತ್ತಾರೆ' ಎಂದು ಹೇಳಿದ್ದೀರಿ, ಸಾಮಾನ್ಯವಾಗಿ ಕನ್ನಡಿಗರಲ್ಲಿ ಹಿಂದಿ ರಾಷ್ಟ್ರ ಭಾಷೆ ಎಂದು ತಪ್ಪು ತಿಳುವಳಿಕೆ ಇರುವುದು ಸತ್ಯ ಆದರೆ ನನಗೆ ತಿಳಿದ ಮಟ್ಟಿಗೆ ಇತ್ತೀಚಿಗೆ ಕನ್ನಡಿಗರು ಈ ವಿಷಯವಾಗಿ ಎಚ್ಚೆತ್ತು ಕೊಳ್ಳುತ್ತಿರುವುದು ಕೂಡ ಅಷ್ಟೇ ಸತ್ಯ. ನನಗೆ ತಿಳಿದ ಮಟ್ಟಿಗೆ ನಾನು ಯಾವ ಪಾಟದಲ್ಲೂ ಈ ರೀತಿ ಓದಿಲ್ಲ, ಹಾಗೇನಾದರೂ ಇದ್ದಲ್ಲಿ ನನಗೆ ಅದರ ಬಗ್ಗೆ ದಯವಿಟ್ಟು ತಿಳಿಸಿ. ನಮಗೆ ಚಿಕ್ಕಂದಿನಿಂದ ಯಾರಾದರು ಕತ್ತೆಯನ್ನು ಕುದುರೆ ಎಂದು ಹೇಳಿಕೊಟ್ಟ ತಕ್ಷಣ ಕತ್ತೆ ಎಂದಾದರು ಕುದುರೆ ಆಗವುದೇ? ದೊಡ್ಡವರಾದ ಮೇಲಾದರೂ ನಮಗೆ ಬುದ್ದಿ ಬರಬೇಡವೇ?
ಮೂರನೆಯದು, 'ಹಿಂದಿಯನ್ನು ರಾಷ್ಟ್ರ ಭಾಷೆ ಎಂದಾಗ ಉಳಿದ ಭಾಷೆಗಳಿಗೆ ಎಂದು ಹಾನಿ ಎಂದು ಕೇಳಿದ್ದೀರಾ.' ಇದು ಸ್ವಲ್ಪ ಗಂಭೀರ ವಿಷಯ ಎಂದು ನನ್ನ ಅನಿಸಿಕೆ, ಇತ್ತೆಚಿಗಷ್ಟೇ ನಿಮ್ಮದೋ ಅಥವಾ ಯಾವ್ದೋ ಒಂದು ಪತ್ರಿಕೆಯಲ್ಲಿ ಪ್ರಕಟವಾದ ಒಂದು ವಿಷಯ ಏನೆಂದರೆ ಸುಮಾರು ೬೫ ಲಕ್ಷ ಕೇಂದ್ರ ಸರ್ಕಾರೀ ಕೆಲಸಗಳಲ್ಲಿ ಕನ್ನಡಿಗರ ಸಂಖ್ಯೆ ಕೇವಲ ಸುಮರ ೬೫ ಸಾವಿರಗಳಷ್ಟು ಎಂದು, ಇಷ್ಟು ಕಡಿಮೆ ಸಂಖ್ಯೆಗೆ ಕಾರಣ ಇತರೆ ಭಾಷಿಕರಿಗೆ ತಮ್ಮ ಮಾತೃ ಭಾಷೆಯಲ್ಲಿ ನೇಮಕಾತಿ ಪರೀಕ್ಷೆಗಳನ್ನು ಬರೆಯುವ ಅವಕಾಶ ಇಲ್ಲದಿರುವುದು. ಹಿಂದಿಯನ್ನು ಮಾತೃಭಾಷೆಯಾಗಿ ಹೊಂದಿರುವ ಒಬ್ಬ ಭಾರತೀಯ ಕೇಂದ್ರ ಸರ್ಕಾರೀ ನೇಮಕಾತಿ ಪರೀಕ್ಷೆಗಳನ್ನು ತನ್ನ ಮಾತೃ ಭಾಷೆಯಲ್ಲೇ ಬರೆದು ಕೆಲಸ ಗಿಟ್ಟಿಸ ಬಹುದು ಆದರೆ ಉಳಿದ ಭಾಷಿಕರು ಮಾತ್ರ ಒಂದು ಭಾಷೆಯನ್ನು ಕಲಿತು ಆ ಭಾಷೆಯಲ್ಲಿ ಪರೀಕ್ಷೆ ಸ್ಪರ್ಧಿಸ ಬೇಕು, ಮಾತೃ ಭಾಷೆಯಲ್ಲಿ ಕಲಿತು ಪರೀಕ್ಷೆ ಬರೆಯುವುದಕ್ಕೂ ಹೊಸ ಭಾಷೆಯನ್ನು ಕಲಿತು ಬರೆಯುವುದಕ್ಕೂ ಇರುವ ವ್ಯತ್ಯಾಸ ನನಗಿಂತ ನಿಮಗೆ ಚೆನ್ನಾಗಿ ಅರಿವಿದೆ. ಹಾಗಾದರೆ ಹಿಂದಿಯನ್ನು ಗೊತ್ತಿದ್ದರೆ ಮಾತ್ರ ನಾನೊಬ್ಬ ಭಾರತೀಯನೇ? ಇತರೆ ಭಾಷಿಕರಿಗೆ ಸಮಾನ ಹಕ್ಕು ದೊರಕಿದೆಯೇ? ನಾವು ತೆರಿಗೆ ಪಾವತಿಸುವಾಗ ಹಿಂದಿ ಭಾಷಿಕರಷ್ಟೇ ಪಾವತಿಸುತ್ತೇವೆ ಹಾಗಿದ್ದರು ಈ ತಾರತಮ್ಯವೇಕೆ?
ಇದು ಕೇವಲ ಒಂದು ಉದಾಹರಣೆಯಷ್ಟೇ ಇಂತಹ ಅನೇಕ ವಿಷಯಗಳಿಂದ ಹಿಂದಿಯೇತರರಿಗೆ ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ. ಕೇವಲ ಆಡಳಿತ ಭಾಷೆ ಎಂದು ಇಟ್ಟುಕೊಂಡು ಇಷ್ಟೆಲ್ಲಾ ಅನ್ಯಾಯವಾದಾಗ ಇನ್ನು ರಾಷ್ಟ್ರ ಭಾಷೆಯಾದರೆ ಗತಿ?
ನಾನು ಯಾವುದೇ ಭಾಷೆಯ ವಿರೋಧಿಯಲ್ಲ, ನನ್ನ ಭಾಷೆಯನ್ನು ಪ್ರೀತಿಸುತ್ತೇನೆ ಇತರ ಭಾಷೆಗಳನ್ನು ಗೌರವಿಸುತ್ತೇನೆ. ನೀವೇ ಹೇಳಿದ ಹಾಗೆ, ಸ್ವತಂತ್ರ ಭಾರತದಲ್ಲಿ ಯಾರು ಯಾವ ಭಾಷೆಯನ್ನು ಬೇಕಾದರೂ ಬಳಸಬಹುದು, ಆದರೆ ಇನ್ನೊಂದು ಭಾಷೆಯನ್ನು ಸುಖಾಸುಮ್ಮನೆ ಹೇರುವ ಹಕ್ಕು ಯಾರಿಗೂ ಇಲ್ಲ ಎಂದು ಭಾವಿಸುತ್ತೇನೆ. ಭಾರತ ಒಂದು ಒಕ್ಕೂಟ ವ್ಯವಸ್ಥೆ, ಆಯಾ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಭಾಷೆಯೇ ಸಾರ್ವಭೌಮ, ಕೇಂದ್ರದ ವಿಚಾರಕ್ಕೆ ಬಂದರೆ ಅಲ್ಲಿ ಎಲ್ಲ ಭಾಷೆಗಳಿಗೂ ಹಾಗು ಭಾಷಿಕರಿಗೂ ಸಮಾನತೆ ಇರಬೇಕು.
ಇದನ್ನೆಲ್ಲಾ ತಿಳಿದ ನೀವು ಕೂಡ ಒಂದು ಭಾಷೆಯನ್ನು ಯಾವ ಖರ್ಚಿಲ್ಲದೆ ರಾಷ್ಟ್ರ ಭಾಷೆ ಎಂದು ಬಿಂಬಿಸಿ ನಿಮಗೆ ಗೊತ್ತಿಲ್ಲದೇ ಕನ್ನಡಕ್ಕೆ ಕೊಡಲಿ ಪೆಟ್ಟು ನೀಡುವುದು ಎಷ್ಟು ಸರಿ? ಮಾದ್ಯಮದವರಾದ ನೀವು ಜನರ ಅಭಿಪ್ರಾಯಗಳನ್ನು ಬದಲಿಸುವ ಹಾಗು ಗಟ್ಟಿಗೊಳಿಸುವ ಶಕ್ತಿಯನ್ನು ಹೊಂದಿರುವವರು, ಹೀಗೆ ತಪ್ಪು ಮಾಹಿತಿಗಳ ಮೂಲಕ ಜನರಿಗೆ ತಪ್ಪು ಸಂದೇಶ ರವಾನಿಸುವ ಕೆಲಸ ಮಾಡಬೇಡಿ. ಪರಭಾಷೆ ಧಾಳಿಯಿಂದ ಈಗ ಕನ್ನಡ ಶಾಲೆಗಳನ್ನು ಮುಚ್ಚಿ ಎಂದು ಸರ್ಕಾರ ಹೇಳುತ್ತಿದೆ ಇದು ಹೀಗೆ ಮುಂದುವರಿದರೆ ಒಂದು ದಿನ ಕನ್ನಡ ಪತ್ರಿಕೆಗಳನ್ನು ಮುಚ್ಚಿ ಎಂದು ಹೇಳುತ್ತದೆ, ಆಗ ಮುಚ್ಚಲಿರುವ ಕನ್ನಡ ಪತ್ರಿಕೆ ನಿಮ್ಮದಾಗದಿರಲಿ ಎಂಬುದೇ ನನ್ನ ಆಸೆ.
ಇಂತಿ ನಿಮ್ಮವ,
ರತೀಶ 

ಮಂಗಳವಾರ, ಅಕ್ಟೋಬರ್ 4, 2011

ಕನ್ನಡಿಗರ ತೆರಿಗೆ ಹೊರನಾಡಿಗರ ಕಿಸೆಗೆ!

ಪಾರಂಪರಿಕ, ಅಭೂತ ಪೂರ್ವ, ವಿಶ್ವ ವಿಖ್ಯಾತ ಎಂದೆಲ್ಲ ಅನೇಕ ಬಿರುದುಗಳನ್ನು ಹೊತ್ತ ನಮ್ಮ ಮೈಸೂರು ದಸರಾವನ್ನು ಪೂರ್ಣ ೧೦ ದಿನಗಳ ಕಾಲ ಕಣ್ಣಾರೆ ಕಂಡು ಸವಿಯಬೇಕು ಎಂದು ಮಹದಾಸೆ ಹೊತ್ತು ಮೈಸೂರಿನ ಮೂಲೆ ಮೂಲೆ ತಿರುಗುತ್ತಿರುವ ನನಗೆ ಈ ದಸರಾ ಅತಿ ದೊಡ್ಡ ನಿರಾಶೆ ತಂದಿಟ್ಟಿದೆ!!! ಮೊದಲೆನೆಯದಾಗಿ ಇದನ್ನ 'ನಾಡಹಬ್ಬ' ಎಂದು ಏಕೆ ಕರೆಯುತ್ತಾರೆ ಎಂದು ನನಗೆ ಇನ್ನೂ ತಿಳಿಯುತ್ತಿಲ್ಲ, ನನ್ನ ಹಿರಿಯರು, ಅಂದಿನ ದಸರಾ ವೈಭವನ್ನು ಕಣ್ಣಾರೆ ಕಂಡವರು ನನಗೆ ಹೇಳಿದ ಪ್ರಕಾರ ಕರ್ನಾಟಕದ ಶ್ರೀಮಂತ ಹಾಗು ಸಮೃದ್ದ ಸಂಸ್ಕೃತಿಯ ಅನಾವರಣ ನಮ್ಮ ದಸರಾದಲ್ಲಿ ನಡೆಯುತ್ತಿತ್ತು, ಅರಮನೆ ಕಾರ್ಯಕ್ರಮಗಳು, ಆಹಾರ ಮೇಳ, ಜಂಬೂ ಸವಾರಿ, ಸಾಂಸ್ಕೃತಿಕ ಸಂಜೆ ಹಾಗು ಇತರೆ ಹತ್ತು ಹಲವು ಕಾರ್ಯಕ್ರಮಗಳು ರಾಜ್ಯದ ವಿವಿಧ ಕಡೆಯಿಂದ ಬಂದ ವಿಶಿಷ್ಟ ಪ್ರತಿಭೆಗಳಿಂದ ಜರುಗುತ್ತಿತ್ತು, ಈ ಮೂಲಕ ಕನ್ನಡ ಸಂಸ್ಕೃತಿ ಹಾಗು ಕನ್ನಡಿಗರ ಪ್ರತಿಭೆಯನ್ನು ವಿಶ್ವಕ್ಕೆ ಪರಿಚಯ ಮಾಡಿಕೊಡಲಾಗುತ್ತಿತ್ತು. ಅದಕ್ಕಾಗಿಯೇ ಅನಿಸುತ್ತದೆ ದಸರಾವನ್ನು 'ನಾಡಹಬ್ಬ' ಎಂದು ಕರೆಯುತ್ತಿರುವುದು. 


ಹೀಗೆ, ಕಣ್ಣಲ್ಲಿ ಅನೇಕ ನಿರೀಕ್ಷೆಗಳನ್ನು ತುಂಬಿಟ್ಟುಕೊಂಡು ಮೈಸೂರು ತಿರುಗುತ್ತಿರುವ ನನಗೆ ಕಾಣ ಸಿಗುತ್ತಿರುವುದು ಕೇವಲ ಪರಭಾಷಾ ಹಾಗು ಪರಭಾಷಿಕರ ವೈಭವ! ಒಬ್ಬ ಸಂಗೀತಗಾರನಿಗೆ ಮೈಸೂರಿನ ಅರಮನೆ ಮೈದಾನದಲ್ಲಿ ದಸರಾ ಸಂದರ್ಭದಲ್ಲಿ ನಡೆಸಿಕೊಡುವ ಮುಖ್ಯ ಕಾರ್ಯಕ್ರಮವು ಅತ್ಯಂತ ಗೌರವನ್ವಿತವಾದ ಹಾಗು ಆತನ ಜೀವನದ ಶ್ರೇಷ್ಠ ಕಾರ್ಯಕ್ರಮಗಳಲ್ಲಿ ಒಂದಾಗಿರುವುದು, ನಮ್ಮ ದಸರಾ ಆಯೋಜಕರಿಗೆ ಈ ಅರ್ಹತೆ ಉಳ್ಳ ವ್ಯಕ್ತಿಗಳು ಕನ್ನಡ ನಾಡಿನಲ್ಲಿ ಸಿಗದಿರುವುದು ಆಶ್ಚರ್ಯ! ಅರಮನೆಯ ಮುಖ್ಯ ಕಾರ್ಯಕ್ರಮಗಳು ಮುಂಬೈ ಹಾಗು ಪುಣೆಯವರಿಂದಲೇ ನಡೆಯುತ್ತಿವೆ. ಇನ್ನು ನನ್ನ ಅತಿ ಪ್ರಿಯವಾದ ಮೇಳವಾದ 'ಆಹಾರ ಮೇಳ'ದಲ್ಲಿ ಪಂಜಾಬಿ, ಬೆಂಗಾಲಿ ಹಾಗು ಇತರೆ ಹೊರನಾಡಿನ ಊಟಗಳೇ ಮುಖ್ಯದ್ವಾರದಲ್ಲಿ, ಕರ್ನಾಟಕ ಖಾದ್ಯಗಳಿಗೆ ಸ್ವಲ್ಪ ಕಷ್ಟಪಟ್ಟು ಹುಡುಕಬೇಕಾಗಿದೆ. ಹಾಗೆ ದಸರಾ ವಿಶೇಷ ಊಟದ ಹೆಸರು 'ದಸರಾ ಥಾಲಿ' ಅಂತೆ, ಪಾಪ, ಕನ್ನಡದಲ್ಲಿ ಈ ಊಟಕ್ಕೆ ಹೆಸರೇ ಸಿಕ್ಕಿಲ್ಲ ಇವರಿಗೆ! ಇನ್ನು ಇತ್ತೀಚಿನ ಮಹತ್ತಾಕರ್ಷಣೆಯ ಕಾರ್ಯಕ್ರಮ 'ಯುವ ದಸರಾ'ದಲ್ಲಿ ಕನ್ನಡಿಗರಿಂದ ಕೇವಲ ಒಂದು ದಿನ ಮಾತ್ರ ಸಂಗೀತ ರಸಸಂಜೆ, ಉಳಿದ ದಿನಗಳೆಲ್ಲ ಪರಭಾಷಿಕರಿಗೆ ಮೀಸಲು! ಅಲ್ಲಾ ಸ್ವಾಮೀ, ಹಿಂದಿ ಹಾಡು ಕೇಳೋಕೆ ಯಾರಾದ್ರೂ ಕರ್ನಾಟಕದ ಮೈಸೂರು ದಸರಾಕ್ಕೆ ಬರ್ತಾರ? ಅಥವಾ ಕನ್ನಡ ಕಾರ್ಯಕ್ರಮಗಳನ್ನು ಸವಿಯೋಕೆ ಬರ್ತಾರ?

ಮೈಸೂರು ದಸರಾಕ್ಕೆ ಲಕ್ಷ ಲಕ್ಷಗಟ್ಟಲೆ ಹಣ ಸರ್ಕಾರದಿಂದ ಹರಿದು ಬರುತ್ತದೆ, ಅದು ಕನ್ನಡಿಗರು ಕಟ್ಟುವ ತೆರಿಗೆಯ ಹಣ ಎಂದು ನಾನು ಬಿಡಿಸಿ ಹೇಳಬೇಕಾಗಿಲ್ಲ, ಆದರೆ ಈ ಹಣ ಇಲ್ಲಿ ವ್ಯಯವಾಗುತ್ತಿರುವುದು ಹೊರನಾಡಿಗರ ಕಲ್ಯಾಣ ಹಾಗು ಪ್ರಸಿದ್ದಿಗಳಿಗೆ, ಅವರು ಕೇಳಿದಷ್ಟು ಹಣ ಕೊಟ್ಟು ಇಲ್ಲಿಗೆ ಕರೆತಂದು ಅವರ ಹಾಡುಗಳನ್ನು ನಮ್ಮ ಹಬ್ಬದಲ್ಲಿ ಹಾಡಿಸುವ ಬದಲು ನಮ್ಮ ಪ್ರತಿಭೆಗಳಿಗೆ ಪ್ರಾಮುಖ್ಯತೆ ನೀಡಿದ್ದರೆ 'ನಾಡಹಬ್ಬ' ಎಂದು ಕರೆದಿದ್ದಕ್ಕೂ ಸಾರ್ಥಕವಗುತ್ತಿತ್ತೇನೋ. ಕನ್ನಡಿಗರ ತೆರಿಗೆ ಹೊರನಾಡಿಗರ ಕಿಸೆಗೆ ಎನ್ನುವ ಹಾಗೆ ನಮ್ಮ ಆಯೋಜಕರು ಅವರಿಗೆ ರತ್ನಗಂಬಳಿ ಹಾಸಿರುವುದು ವಿಷಾದವೇ ಸರಿ.ಈ ಆಯೋಜಕರಂತು ನನ್ನ ಕಣ್ಣಿಗೆ ಅನ್ಯ ಭಾಷೆಯ ಅಧಿಕೃತ ಪ್ರವಾದಿಗಳಂತೆ ಕಂಡು ಬರುತ್ತಾರೆ.

ಕರ್ನಾಟಕದಲ್ಲಿ ನಡೆಯುವ ದಸರಾದಲ್ಲಿ ಕನ್ನಡ ಹಾಗು ಕನ್ನಡಿಗರಿಗೆ ಪ್ರಾಮುಖ್ಯತೆ ನೀಡಿ ಈ ಮೂಲಕ ನಮ್ಮ ಭಾಷೆ ಹಾಗು ಸಂಸ್ಕೃತಿಯನ್ನ ವಿಶ್ವಕ್ಕೆ ಪ್ರಸ್ತುತ ಪಡಿಸುವ ಸಾಮಾನ್ಯ ಜ್ಞಾನ ನಮ್ಮ ಆಯೋಜಕರಲ್ಲಿ ಇರದಿರುವುದು ಬೇಸರದ ಸಂಗತಿ.  "ನಮ್ಮ ಮನೆಯಲ್ಲೇ ನಮಗೆ ಬೇಕಾದಷ್ಟು ತಿನ್ನಲು ಊಟ ಇರುವಾಗ ಬೇರೆಯವರ ಎಂಜಲನ್ನು ತಿನ್ನುವ ಬುದ್ದಿ" ಇವರಿಗೆ ಏಕೆ ಬಂದಿದಿಯೋ ನಾ ಕಾಣೆ? ಜೊತೆಗೆ ಆ ಎಂಜಲನ್ನು ಉಳಿದವರಿಗೂ ತಿನ್ನಿಸುವ ಕೆಲಸಕ್ಕೆ ಯಾರ ಕ್ಕುಮ್ಮಕ್ಕು ಇದೆಯೋ ದೇವರೇ ಬಲ್ಲ. ಇದೆನ್ನಲ್ಲಾ ಕಣ್ಣಾರೆ ಕಂಡು, ಕಿವಿಯಾರೆ ಕೇಳಿಸಿಕೊಂಡು, ಕೈ ಕಟ್ಟಿ - ಬಾಯಿಮುಚ್ಚಿ ಕುಲಿತುಕೊಳ್ಳುವ ಅಭಿಮಾನ ಶೂನ್ಯ ಪ್ರಜೆಯಾಗಲು ನನಗೆ ಇಷ್ಟವಿಲ್ಲ, ಈ ಎಲ್ಲಾ ಅವ್ಯವಸ್ಥೆಗಳಿಗೆ ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ ಕಾರಣರಾದವರಿಗೆ ನನ್ನ ಧಿಕ್ಕಾರವಿದೆ, ಇನ್ನಾದರೂ ದಸರಾ ಸಂಪೂರ್ಣ ನಾಡಹಬ್ಬ ಆಗಬೇಕೆಂಬ ಒತ್ತಯವಿದೆ. ಸಾಮಾನ್ಯ ಹಾಗು ಸ್ವಾಭಿಮಾನಿ ಕನ್ನಡಿಗನಾಗಿ ನನಗೆ 'ಇನ್ನೊಬ್ಬರ' ಹಾಗೆ ಎಂಜಲು ತಿನ್ನುವ ಆಸೆ ಇಲ್ಲ ನಮ್ಮ ಹಬ್ಬಕ್ಕೆ ನಮ್ಮ ಮನೆಯ ಅಡುಗೆಯೇ ನಮಗೆ ಸಾಕಷ್ಟಿದೆ, ಬರುವ ಅತಿಥಿಗಳಿಗೂ ಬಡಿಸುವಷ್ಟು ಉಳಿದಿದೆ.  

ಸೋಮವಾರ, ಸೆಪ್ಟೆಂಬರ್ 26, 2011

ಕನ್ನಡಕ್ಕೊಂದು ಕಾಫೀ ತೋಟ ಬೆಳೆಯಲಿ !

ರಜೆಗೆ ಊರಿಗೆ ಹೋದ ನನಗೆ ಮಾಡಲು ಬೇರೆ ಕೆಲಸವಿಲ್ಲದೇ, ನಮ್ಮ ಕಾಫಿ ತೋಟವನ್ನು ಒಂದು ಸುತ್ತು ಹಾಕಿ ಬರೋಣವೆಂದು ತಂದೆಯ ಹಿಂದೆ ನಡೆದ ನನಗೆ ಅವರು ಹೇಳಿದ ಹಿಂದಿನ ಕಥೆ ಈ ಅವಲೋಕನಕ್ಕೆ ದಾರಿ ಮಾಡಿತು! 
ಸುಮಾರು ೧೯೬೦ ಹಾಗು ೭೦ರ ದಶಕದಲ್ಲಿ ನಾವು ಈಗಿರುವ ಊರಿಗೆ ಇನ್ನೊಂದು  ಹತ್ತಿರದ ಊರಿಂದ ವಲಸೆ ಬಂದ ನಮ್ಮ ಪೂರ್ವಜರು ಹಾಗು ಅವರ ಕೆಲ ಸ್ನೇಹಿತ ಕುಟುಂಬಗಳು ಬಂದು ನೆಲಸಿದ್ದು ಆಗಿದ್ದ ದಟ್ಟ ಕಾಡಿನಲ್ಲಿ. ಹೊತ್ತಿನ ತುತ್ತಿಗೂ ಆಪತ್ತಿದ್ದ ಕಾರಣದಿಂದ ವಲಸಿಗ ಕುಟುಂಬಗಳು  ಕೂಳಿಗಾಗಿ ಹಿಡಿದಿದ್ದು ಇನ್ನೊಬ್ಬರ ಮನೆಯ ಹಾಗು ತೋಟದ ಕೆಲಸವನ್ನು, ಆ ಕೆಲಸದಲ್ಲಿ ಸಿಗುತ್ತಿದ್ದದ್ದು ಬರೆ ಉಂಡು ಊಟ ತುಂಡು ಕಂಬಳಿ!

ಈ ನಡುವಿನಲ್ಲಿ ಕೆಲವು ಬುದ್ದಿವಂತರು ಕೆಲಸಕ್ಕೆ ಹೋಗುವ ಜೊತೆಗೆ ಬಿಡುವಿನ ಸಮಯದಲ್ಲಿ ದಟ್ಟ ಕಾಡನ್ನು ಕಡಿದು ತೋಟ ಮಾಡಿ, ಬದುಕಿಗೆ ದಾರಿ ಮಾಡಿಕೊಳ್ಳುವ ಭಗೀರಥ ಪ್ರಯತ್ನಕ್ಕೆ ಕೈ ಹಾಕಿದರು, ಉಳಿದವರು ಕೂಲಿ ಮಾಡುತ್ತಲೇ ಉಳಿದರು. ಆರಂಭದಲ್ಲಿ ಹಲವು ಎಡರು ತೊಡರುಗಳು ಎದುರಾದರು 'ಭೂಮಿ ತಾಯಿ ಬಂಜೆ ಅಲ್ಲ ಅನ್ನುವ ಹಾಗೆ ಆಕೆ ಬೆವರು ಹರಿಸಿದ ಜನರಿಗೆ ಫಲ ಕೊಟ್ಟೆ ಬಿಟ್ಟಳು! ಹೀಗೆ ಉದ್ದಾರ ಆದ ಹಲವಾರು ಕುಟುಂಬಗಳ ಹೆಸರನ್ನು ನನ್ನ ತಂದೆ ನನಗೆ ಹೇಳಿದರು, ಸ್ವಂತ ಜಾಗ, ಮನೆ ಮಾಡಿಕೊಂಡು ಉತ್ತಮ ಬದುಕು ಕಟ್ಟಿ ಕೊಳ್ಳಬೇಕೆಂಬ ಹಟವಿಲ್ಲದವರು ಇಂದು ಇವರ ಮನೆಗಳಿಗೆ ಕೂಲಿಗೆ ಬರುತ್ತಿದ್ದಾರೆ!

ಈ ಕಥೆಲಿ ಏನ್ ಮಹಾ ಅವಲೋಕನ ಮಾಡಿದ್ಯಪ್ಪ ಅಂತ ನೀವು ಕೇಳ್ತಾ ಇದ್ದೀರಾ ಅಲ್ವಾ? ಹೇಳ್ತೀನಿ ಕೇಳಿ, 
ಇವತ್ತು ನಮ್ಮ ಮನಸ್ಥಿತಿಯಲ್ಲಿ ಬರೆ ಇನ್ನೊಂದು ಭಾಷೆಯನ್ನು ಕಲಿತು (ಅದು ಇಂಗ್ಲಿಷ್, ಹಿಂದಿ, ಫ್ರೆಂಚ್, ಜರ್ಮನ್... ಇತ್ಯಾದಿ  ಆಗಿರಬಹುದು) ಅದರ ಮೇಲೆ ಕೆಲಸ ಮಾಡಿ ಬದುಕನ್ನು ಕಟ್ಟಿ ಕೊಳ್ಳುವ ಭಗೀರಥ ಪ್ರಯತ್ನದಲ್ಲೇ ಇದ್ದೇವೆ, ಜೊತೆಗೆ ನಮ್ಮ ಮುಂದಿನ ಪೀಳಿಗೆಯನ್ನು ಈ ಹುಚ್ಚು ಕುದೆರೆಯ ಸವಾರಿಗೆ ಅಣಿ ಮಾಡುತ್ತಿದ್ದೇವೆ. ನಮ್ಮದೇ ಭಾಷೆಯಲ್ಲಿ ನಮಗೆ ಅನುಕೂಲವಾಗುವ ಸ್ವಂತಿಕೆಯ ಸಮಾಜವನ್ನು ಕಟ್ಟುವ ಮನೋಭಾವಗಳೇ ಮಾಯವಾಗಿದೆ. ಇಂದು ಕರ್ನಾಟಕದಲ್ಲಿ ಇಂಗ್ಲಿಷ್, ಫ್ರೆಂಚ್, ಜರ್ಮನ್ ಕಲಿಕಾ ಕೇಂದ್ರ ಗಳಿವೆ, ಜೊತೆಗೆ ಕೇಂದ್ರ ಸರ್ಕಾರ ಕೃಪಾಪೋಷಿತ ಹಿಂದಿ ಕಲಿಕಾ ಕೇಂದ್ರಗಳು ಇವೆ ಆದರೆ ಕನ್ನಡ ಕಲಿಕಾ ಕೇಂದ್ರಗಳು ಬೇರೆ ರಾಜ್ಯ ಹಾಗು ದೇಶಗಳಲ್ಲಿ ಎಷ್ಟಿವೆ?? ಹೋಗಲಿ ಕರ್ನಾಟಕದಲ್ಲಿರುವ ಎಲ್ಲ ಶಾಲೆಗಳು ಕನ್ನಡ ಕಲಿಸುತ್ತಾವ? ಇದಕ್ಕೆ ಕಾರಣಗಳೇನು?

ಕಾರಣ ಇಷ್ಟೇ, ಇದು ಕನ್ನಡಿಗರ ಇಚ್ಚಾಶಕ್ತಿಯ ಕೊರತೆ,ಬರಿ ಇನ್ನೊಂದು ಭಾಷೆ ಮೇಲೆ ಕೂಲಿ ಮಾಡುವ ಬುದ್ದಿ ನಮದು, ಕನ್ನಡವೆಂಬ ಫಲವತ್ತಾದ ನೆಲದಲ್ಲಿ ಸ್ವಂತಿಕೆಯ ಕೃಷಿ ಮಾಡಿ, ಸಮೃದ್ದ ಕರುನಾಡು ಎಂಬ ಬೆಳೆ ತೆಗೆಯುವ ಹಠ ಇಲ್ಲದಿರುವುದು. ನಮ್ಮ ಧೈನಿಂದನ ಕೆಲಸಗಳಲ್ಲಿ, ಗ್ರಾಹಕರಾಗಿ ಸೇವೆ ಪಡೆಯುವ ಎಷ್ಟೋ ಕಡೆಗಳಲ್ಲಿ ನಾವು ನಮ್ಮ ಭಾಷೆಯನ್ನು ಬಳಸ ಬಹುದು, ಇದರಿಂದ ಕನ್ನಡಕ್ಕೊಂದು ಮಾರುಕಟ್ಟೆ ದೊರೆಯುತ್ತದೆ (ಸ್ವಂತ ಜಾಗ), ಕನ್ನಡವೂ ಬೆಳೆಯುತ್ತದೆ (ಸಮೃದ್ದ ಬೆಳೆ ), ಕನ್ನಡದ ಬೇಡಿಕೆ ಏರುತ್ತದೆ (ಬೆಳೆಗೆ ಸಿಗುವ ಬೆಲೆ)  ಜೊತೆ ಜೊತೆಗೆ ಕನ್ನಡಿಗರು ಬೆಳೆಯುತ್ತಾರೆ (ಸ್ವಾಭಿಮಾನಿ ಹಾಗು ಶ್ರೀಮಂತ ರೈತ) 

ಅದಕ್ಕೆ ನಾನೊಂದು ಕೊಂಡಿದ್ದು "ಕನ್ನಡಕ್ಕೊಂದು" ಕಾಫಿ ತೋಟ ಇರಲಿ, "ಕನ್ನಡ"ಕೊಂದು ಕಾಡು ಬೆಳೆಯದಿರಲಿ!!! 




ಗುರುವಾರ, ಆಗಸ್ಟ್ 11, 2011

ಅತಿ ವಿಶೇಷ ಎನಿಸಿದ ಆ ಒಂದು ದಿನ!!


ಮಲಗಿದರೆ ಕುಂಭಕರ್ಣನಿಗೂ ಮೀರಿಸುವ ನಿದ್ದೆ ಮಾಡುವ ನನಗೆ ಈ ಶ್ರಾವಣ ಮಾಸದ ಶುಕ್ಲಪಕ್ಷದ ಶುಭ ಶುಕ್ರವಾರ ಶುರುವಾಗುವ ಮೊದಲನೇ ಕ್ಷಣ ಅಂದರೆ ೧೨.೦೦ ಗಂಟೆಗೆ ನನ್ನ ನಡೆಯುಲಿ ಹೊಡೆದು ಕೊಳ್ಳಲು ಶುರು ಮಾಡಿತಂತೆ! ಕೊನೆಗೂ ಸುಮಾರು ಅರ್ಧ ಗಂಟೆಗಳ ನಂತರ ಒಂದು ಕರೆಗೆ ಅರೆ ಬರೆ ನಿದ್ದೆಯಲ್ಲಿ ನನ್ನ ಕಿವಿ ಕೊಟ್ಟೆ, ಅತ್ತ ನನ್ನ ಸ್ನೇಹಿತನಿಂದ 'ಹುಟ್ಟು ಹಬ್ಬದ ಶುಭಾಶಯಗಳ' ಹಾರೈಕೆ !!! ನಿದ್ದೆಯಲ್ಲೇ ಧನ್ಯವಾದ ತಿಳಿಸಿದ ನಾನು ಮತ್ತೆ ಮರಳಿ ನಿದ್ರಾದೇವಿ ಮಡಿಲಿಗೆ!
ಅಂತು ಇಂತೂ ಬೆಳಗಾಯಿತು, ನಿದ್ರೆ ಕಳೆಯಿತು, ಹಾಗೆಯೇ ನನ್ನ ನಡೆಯುಲಿ ಮೇಲೆ ಕಣ್ಣಾಡಿಸಿದಾಗ ಕಂಡಿದ್ದು ಸುಮಾರು ೧೯ ತಪ್ಪಿದ ಕರೆಗಳು ಹಾಗು ಹಲವು ಸಂದೇಶಗಳು, ಯಾವ ಬೆಳಗು ನನಗೆ ಇಷ್ಟೊಂದು ಹೊತ್ತು ನಡೆಯುಲಿಯಲ್ಲಿ ಕಳೆಯಲು ಅವಕಾಶ ಕೊಟ್ಟಿರಿಲಿಲ್ಲ ಆದರೆ ಅಂದು ಎಲ್ಲ ಸಂದೇಶಗಳಿಗೆ ಉತ್ತರಿಸುತ್ತ, ಕರೆಗಳಿಗೆ ಕಿವಿಗೊಡುತ್ತಾ ನನಗೆ ಏನೋ ಒಂದು ವಿಶೇಷ ಅನುಭವ ನೀಡಿತು.
ನಿತ್ಯ ಕರ್ಮಗಳನ್ನು ಮುಗಿಸಿ, ತಯಾರಾಗಿ ಆಫೀಸ್ ಹೋದ ನನಗೆ ಸಹೋದ್ಯೋಗಿಗಳ ಸಿಹಿಯಾದ ಹಾರೈಕೆಗಳು, ಜೊತೆಗೆ ಸಿಹಿಗಾಗಿ ಕೋರಿಕೆಗಳು, ಅದಲ್ಲದೆ ನಾನು ನಿರೀಕ್ಷೆಯೇ ಮಾಡದಿದ್ದ ಸಂಧರ್ಭದಲ್ಲಿ ನನ್ನನ್ನು ಕರೆದು ಕೇಕ್ ಕತ್ತರಿಸುವ ಸಾಹಸಕ್ಕೆ ನನ್ನನ್ನು ದೂಡಿ ನನ್ನೊಂದಿಗೆ ಅವರೂ ಸಂಭ್ರಮಿಸಿದ್ದು.

ದಿನವೆಲ್ಲ ನನ್ನ ನಡೆಯುಲಿಗೆ ಎಂದು ಕೊದದ್ದಿಅಷ್ಟು ಕೆಲಸ ಅಂದು ಕೊಟ್ಟಿದ್ದೆ. ಬಹಳ ಅಪರೂಪಕ್ಕೆ ಅನ್ನುವಂತೆ ಕರೆ ಮಾಡಿದ ಸ್ನೇಹಿತರು, ಫೆಸೆಬುಕ್ ನಲ್ಲಿ ಶುಭಾಶಯಗಳ ಹೊಳೆಯನ್ನೇ ಹರಿಸಿದ ಗೆಳೆಯರು, ಮನೆಯವರು, ಹತ್ತಿರದ ನೆಂಟರ ಕರೆಗಳು ಹಾಗು ಹಾರೈಕೆಗಳು, ಕೆಲ ಗೆಳೆಯರ ಉಡುಗೊರೆಗಳು, ಮತ್ತೆ ಕೆಲವರ ಮುಖತಃ ಮಾತುಗಳು.... ಹೀಗೆ ಹೇಳಿದಷ್ಟು ಇರುವ ಕತೆಗಳು...ಇದೆಲ್ಲದರ ಜೊತೆಯಲ್ಲಿ ನನಗೆ ಆ ದಿನ ಬಹಳ ವಿಶೇಷ ಎನಿಸಿತು, ವರ್ಷಕ್ಕೆ ಒಮ್ಮೆಯಾದರು ಇಂತಹ ದಿನ ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸಿ, ಬದುಕಲು ಹೊಸ ಚೈತನ್ಯ ನೀಡುತ್ತದೆ ಎಂದರೆ ಸುಳ್ಳಲ್ಲ.

ಈ ಸುಂದರ ಹುಟ್ಟಿದ ದಿನದ ಹುಟ್ಟಿಗೆ ಕಾರಣರಾದ ನನ್ನ ತಂದೆ ತಾಯಿಗೆ , ತಮ್ಮ 'ಶುಭ ಹಾರೈಕೆಗಳ ಮೂಲಕ' ದಿನಕ್ಕೆ ಮತ್ತಷ್ಟು ಮೆರಗು ತಂದ ಎಲ್ಲ ಬಂಧು ಮಿತ್ರರಿಗೆ ಅದೆಷ್ಟು ವಂದನೆ ಸಲ್ಲಿಸಿದರು ಕಡಿಮೆಯೇ... ಆದರು ಇದೋ ನನ್ನ ವಂದನೆಗಳು!!!

ಬುಧವಾರ, ಜುಲೈ 20, 2011

ಮಕ್ಕಳಿರಲವ್ವ ಮನೆತುಂಬ !

ಕಳೆದ ವಾರವಷ್ಟೇ ವಿಶ್ವ ಜನಸಂಖ್ಯಾ ಆಚರಿಸಿದ ಇಡೀ ವಿಶ್ವ ಅನೇಕ ಅಂಕಿ ಅಂಶ ಹಾಗು ಮಾರಕಗಳ ಬಗ್ಗೆ ಪೂರ್ಣ ಒಂದು ವಾರ ತಲೆ ಕೆಡಿಸಿಕೊಂಡು ಈಗ ತಣ್ಣಗಾಗಿದೆ. ಭಾರತದಲ್ಲೂ ಏನು ಕಮ್ಮಿ ಇಲ್ಲ, ಪತ್ರಿಕೆಗಳಲ್ಲಿ, ಭಾಷಣಗಳಲ್ಲಿ, ದೂರದರ್ಶನ ಹಾಗು ಬಾನುಲಿಗಳಲ್ಲಿ ವಿವಿಧ "ಪಂಡಿತ"ರಿಂದ ಭಾರತದ ಜನಸಂಖ್ಯಾ ಮಾರಕಗಳ ಬಗ್ಗೆ ಉದ್ದುದ್ದ ಮಾತುಗಳೋ ಮಾತುಗಳು. ವಿಶ್ವದ ಹಾಗು ಇಡೀ ಭಾರತದ ಜನಸಂಖ್ಯಾ ಬೆಳವಣಿಗೆಯ ಬಾಧಕ ಹಾಗು ಸಾಧಕಗಳ ಬಗ್ಗೆ ಪೂರ್ಣವಾಗಿ ವಿವರಿಸುವಷ್ಟು ಸಾಧನಗಳು ನನ್ನಲ್ಲಿ ಇಲ್ಲ, ಆದರೆ ಆ ಒಂದು ವಾರದಲ್ಲಿ ಬಾರದ ಕೆಲವು ವಿಚಾರಗಳ ಅವಲೋಕನ ಈ ಲೇಖನದಲ್ಲಿ ಮಾಡುವ ಪ್ರಯತ್ನ ಮಾಡಿದ್ದೇನೆ. 

೨೦೧೧ ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ ಸುಮಾರು ೧೨೦ ಕೋಟಿ, fertility rate ೨.೬ (೨.೬ ಮಕ್ಕಳು/೧ ಮಹಿಳೆಗೆ), death  ರೇಟ್ 6.4 deaths/1,000 population  ಹಾಗು ನಮ್ಮಲ್ಲಿ ಶೇಕಡಾ ೬೫ರಷ್ಟು  ಜನರು ೩೫ ವರ್ಷ ವಯಸ್ಸಿನ ಒಳಗಿನವರು ಅದರಲ್ಲಿ ಸುಮಾರು ೩೫ ಕೋಟಿ ೦-೧೪ ವಯಸ್ಸಿನ ಮಕ್ಕಳು (ಮೂಲ: http://en.wikipedia.org/wiki/Demographics_of_india) . ಈ ಅಂಕಿ ಅಂಶಗಳನ್ನು ನೋಡಿದರೆ ನನಗೆ ಈಗಿನ ಜನಸಂಖ್ಯಾ ಬೆಳವಣಿಗೆ ಅಂಥಹ ಮಹಾವೇಗದಲ್ಲಿ ಇಲ್ಲ ಎಂದೆನಿಸುತ್ತದೆ.
 
ಹಾಗಾದರೆ ಜನಸಂಖ್ಯೆ ಬೆಳವಣಿಗೆಯನ್ನು ನಿಯಂತ್ರಣ ಮಾಡುವ ಅವಶ್ಯಕತೆ ಇಲ್ಲವಾ? ಎಂದು ನನ್ನ ಕೇಳಿದರೆ 'ನಿಯಂತ್ರಣ ಮಾಡಲೇ ಬೇಕು' ಎಂಬುದೇ ನನ್ನ ಉತ್ತರ, ಆದರೆ ದೇಶ ಅಥವಾ ವಿಶ್ವದ ಯಾವ ಭಾಗದಲ್ಲಿ ನಿಯಂತ್ರಣವಾಗಬೇಕು ಎಂಬುದು ನಾವು ಅರಿತಿರಬೇಕು. ನಮ್ಮ ಭಾರತದ ವಿಷಯಕ್ಕೆ ಬರುವುದಾದರೆ ಉತ್ತರದ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಹೀಗೆ ಹಲವು ರಾಜ್ಯಗಳ ಜನಸಂಖ್ಯೆಯ ಜೊತೆಗೆ ಅಲ್ಲಿನ fertility rate ಕೂಡ ಹೆಚ್ಚು ( ಈ ಕೊಂಡಿಯನ್ನು ಗಮನಿಸಿ http://en.wikipedia.org/wiki/Indian_states_ranking_by_fertility_rate ) ಉತ್ತರದ ರಾಜ್ಯಗಳಲ್ಲಿ ಖಂಡಿತವಾಗಿಯೂ ಜನಸಂಖ್ಯೆಯ ನಿಯಂತ್ರಣ ಆಗಬೇಕಿದೆ, ಇಂದಿಗೂ ಅಲ್ಲಿನ ರಾಜ್ಯ ಸರ್ಕಾರಗಳು ಇದರ ಬಗ್ಗೆ ತಲೆ ಕೆಡಿಸಿಕೊಂಡಂತೆ ಅನಿಸುತ್ತಿಲ್ಲ. 

ನಮ್ಮ ದಕ್ಷಿಣದ ರಾಜ್ಯಗಳ fertility rate ಗಣನೀಯವಾಗಿ ಕಡಿಮೆ ಆಗುತ್ತಿದೆ (ಸುಮಾರು ೨.೧ ) ಅದರಲ್ಲೂ ನಮ್ಮ ಕರ್ನಾಟಕದ ಜನಸಂಖ್ಯೆ ಮುಂದಿನ ದಿನಗಳಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಕಡಿಮೆ ಆಗುವ ಸಾಧ್ಯತೆಗಳಿವೆ. ಹೀಗಿರುವಾಗ ಕೇಂದ್ರ ಸರ್ಕಾರ ಇಡೀ ದೇಶಕ್ಕೆ 'ಜನಸಂಖ್ಯಾ ಕಾಯಿದೆ' ಮಾಡಿರುವುದು ಅಸಮಂಜಸವೆ ಸರಿ. 'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ', ದೇಶದ ಯಾವ ಭಾಗದಲ್ಲಿ ಯಾವ ರೀತಿಯ ನಿಯಂತ್ರಣ ತರಬೇಕು ಎಂದು ತಿಳಿಯದ ಕೇಂದ್ರ ಸರ್ಕಾರ ಸುಖಾ ಸುಮ್ಮನೆ ನಮ್ಮ ಮೇಲೆ ಹರಿ ಹಾಯುತ್ತದೆ. ಇದನ್ನೆಲ್ಲಾ ನೋಡಿದರೆ ಕನ್ನಡಿಗರು ವಿನಾಶದ ಅಂಚಿನಲ್ಲಿ ಇರುವ ಜನಾಂಗ, ಮುಂದಿನ ಹಲವು ವರ್ಷಗಳಲ್ಲಿ "ಒಂದಾನೊಂದು ಕಾಲದಲ್ಲಿ 'ಕನ್ನಡಿಗರು ಎಂಬ ಜನಾಂಗ ಕನ್ನಡ ಎಂಬ ಭಾಷೆಯನ್ನು ಮಾತನಾಡುತ್ತಿದರು' ಎಂದು ಯಾವುದೊ ವೀಕಿಪೀಡಿಯ ಅಥವಾ ಪುಸ್ತಕದಲ್ಲಿ ನಮ್ಮ ವಲಸಿಗರು ಅಥವಾ  ಪರ ರಾಜ್ಯದ ಜನರು ಓದುವ ಸಂದರ್ಭ ಬಂದರೆ ಆಶ್ಚರ್ಯವೇನಲ್ಲ!

ಒಂದು ರಾಜ್ಯದ ಅಥವಾ ರಾಷ್ಟ್ರದ fertility rate ಅನ್ನೋದು ೨.೦ ಕ್ಕಿಂತ ಕಡಿಮೆ ಹೋದರೆ ಅದು ಆ ಜನಾಂಗದ ವಿನಾಶದ ಮುನ್ನುಡಿ,  ಅದಾಗಲೇ ದಕ್ಷಿಣದ ರಾಜ್ಯಗಳು ಈ ವಿನಾಶದ ಅಂಚಿಗೆ ಅಡಿಯನ್ನು ಇಡುತ್ತಿವೆ. ಹಾಗಾಗಿ ತಿಳುವಳಿಕೆಯಿಲ್ಲದೆ ಬೇರೆ ರಾಜ್ಯದವರು ಮಾಡುತ್ತಿರುವ ಅಚಾತುರ್ಯಕ್ಕೆ ಕನ್ನಡಿಗರು ತಮ್ಮ ವಂಶವನ್ನು ಬಲಿ ಕೊಡುತ್ತಿರುವುದು ಎಷ್ಟು ಸರಿ? ಕನ್ನಡಿಗರಿಗೆ ಇರುವ ಅಭಿಮಾನದ ಕೊರತೆಯಿಂದ ಕನ್ನಡದ ಮೇಲೆ ನಡೆಯುತ್ತಿರುವ ಪರಭಾಷಾ ಧಾಳಿಯನ್ನು ಇಂದು ತಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇಂದು ಒದಗಿದೆ, ಇನ್ನು ಕನ್ನಡಿಗರ ಕೊರತೆಯಿಂದ ಕನ್ನಡಿಗರ ಮೇಲೆ ನಡೆಯುವ ಧಾಳಿಯನ್ನು  ಮುಂದೆ ತಡೆಯಲು ಭಗೀರಥ ಪ್ರಯತ್ನ ಮಾಡಿದರು ಸಾಧ್ಯವಿಲ್ಲ.

ಹಾಗಾದರೆ ನಾವೇನು ಮಾಡಬೇಕು ಎನ್ನುತ್ತೀರಾ? ಏನು ಇಲ್ಲ ಸ್ವಾಮೀ, ಮಾನಸಿಕವಾಗಿ, ಆರ್ಥಿಕವಾಗಿ ಹಾಗು ದ್ಯಹಿಕವಾಗಿ ನಿಮಗೆ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಸಾಕುವ ಧ್ಯರ್ಯವಿದ್ದರೆ, ದಯವಿಟ್ಟು ನಿಮ್ಮ ವಂಶೋದ್ದಾರಕರ ಸಂಖ್ಯೆಯನ್ನು ೨ ಅಥವಾ ೩ಕ್ಕೆ ಹೆಚ್ಚಿಸಿಕೊಳ್ಳಿ ಅವರಿಗೂ ನೀವು ಈ ಮಾತನ್ನು ಹೇಳಿ. 'ಕನ್ನಡಿಗರು ನಶಿಸಿದ ಕಥೆ ಬೇರೆ ಯಾವುದೊ ಭಾಷೆಯಲ್ಲಿ ಸಿನಿಮಾ ಆಗಿ ಬರುವುದನ್ನು ತಪ್ಪಿಸುವ ಕೆಲವು ಮಾರ್ಗಗಳಲ್ಲಿ ಇದು ಒಂದು'.  ಅದಕ್ಕೆ ಅಲ್ಲವೇ ನಮ್ಮ ಹಿರಿಯರು ಹೇಳಿದ್ದು "ಮಕ್ಕಲಿರಲ್ಲವ್ವ ಮನೆತುಂಬ" ಎಂದು. ಅಂದು ಅನಕ್ಷರಸ್ಥರಾಗಿ ಅವರಿಗಿದ್ದ ದೂರದೃಷ್ಟಿ ಇಂದು ನಮಗಿಲ್ಲವಾಯಿತಲ್ಲ!.   



ಜನಸಂಖ್ಯೆ ಬೆಳವಣಿಗೆ ಮಾರಕವಲ್ಲ ಎಂಬ ವಿಚಾರದ ಮೇಲೆ ಮತ್ತಷ್ಟು ಅರಿಯಲು ಇಲ್ಲಿ ನೋಡಿ: http://www.overpopulationisamyth.com/

ಮಂಗಳವಾರ, ಜುಲೈ 5, 2011

ತಾವು ಕುಳಿತ ಮರದ ಕೊಂಬೆಯನ್ನು ತಾವೇ ಕಡಿದು ಕೊಳ್ಳುವ ನಮ್ಮ ಸ್ಯಾಂಡಲ್ ವುಡ್ ಮಂದಿ

ನಮ್ಮ ಕನ್ನಡ ಚಿತ್ರರಂಗಕ್ಕೆ ನೇರ ಅಥವಾ ದೂರ ಸಂಪರ್ಕ ಹೊಂದಿರುವ  ಯಾರದರನ್ನು ಒಬ್ಬರನ್ನು 'ನಮ್ಮ ಸ್ಯಾಂಡಲ್ ವುಡ್ ಸಮಸ್ಯೆ ಏನು?' ಎಂದು ಕೇಳಿ, 'ಪರಭಾಷೆ ಚಿತ್ರಗಳ ಧಾಳಿ, ಕನ್ನಡಿಗರು ಚಿತ್ರಮಂದಿರಕ್ಕೆ ಬರವುದಿಲ್ಲ, ಕನ್ನಡ ಚಿತ್ರಗಳನ್ನು ನೋಡುವುದಿಲ್ಲ....' ಎಂದೆಲ್ಲ ಉದ್ದುದ್ದ ಭಾಷಣ ಬಿಗಿಯುತ್ತಾರೆ. ಅವರು ಹೇಳುವ ಮಾತು ಸರಿಯಾಗಿಯೇ ಇರಬಹುದು ಹಾಗೆಯೇ ಅದಕ್ಕೆ ಕಾರಣಗಳು ಹಲವಿರಬಹುದು ಆದರೆ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ನನಗೆ ತೋಚುವುದು ಏನೆಂದರೆ ಈ ಎಲ್ಲ ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಚಿತ್ರರಂಗದವರೇ ಹೊಣೆ! ಅದು ಪ್ರತ್ಯಕ್ಷವಾಗಿರಬಹುದು ಅಥವಾ ಪರೋಕ್ಷವಾಗಿರಬಹುದು.

ನಿನ್ನೆ ನಾನು ಸುವರ್ಣ ಟಿವಿಯಲ್ಲಿ, ಸುವರ್ಣ ಫಿಲಂ ಅವಾರ್ಡ್ಸ್ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ, ಬಹಳ ಅಪರೂಪಕ್ಕೆ ಅನ್ನುವಂತೆ ಕನ್ನಡಿಗರಿಗೆ ಇಂಥಹ ಕಾರ್ಯಕ್ರಮಗಳನ್ನು ನೋಡಲು ಅವಕಾಶ ಸಿಗುವುದು. ಜೊತೆಗೆ ಕನ್ನಡ ಚಿತ್ರರಂಗದವರಿಗೆ ಇದು ಅತಿ ಮುಖ್ಯ ಹಾಗು ಅತಿ ವಿರಳವಾಗಿ ದೊರಕುವಂತಹ ಅವಕಾಶ, ಇಲ್ಲಿ ಕನ್ನಡ ಚಿತ್ರರಂಗದ ವಿಶೇಷಗಳನ್ನು, ಸಾಧನೆಗಳನ್ನು, ಮುಂದಿನ ಗುರಿಗಳನ್ನು ಹಾಗು ಚಿತ್ರರಂಗದ ಹಿರಿಮೆಯನ್ನು ಜನರಿಗೆ ಹತ್ತಿರವಾಗುವಂತೆ ತಿಳಿಸುವ ಬಹುದಾದಂಥಹ ಬಹು ದೊಡ್ಡ  ವೇದಿಕೆ ನಿರ್ಮಾಣವಾಗಿತ್ತು, ಆದರೆ ನಮ್ಮವರು ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾಗಿದ್ದು ಬೇಸರದ ಸಂಗತಿ.

ಸಾಮಾನ್ಯವಾಗಿ ಇಂಥಹ ಕಾರ್ಯಕ್ರಮಗಳು ನಮಗೆ ಬಾಲಿವುಡ್, ಕಾಲಿವುಡ್ ಹಾಗು ಟಾಲಿವುಡ್ ಗಳಲ್ಲಿ ಹೆಚ್ಹಾಗಿ ಕೇಳಿರಿತ್ತೇವೆ ಅಥವಾ ನೋಡಿರುತ್ತೇವೆ, ಅಲ್ಲಿನ ಕಾರ್ಯಕ್ರಮದ ಮನರಂಜನೆ ಕೇವಲ ಅವರ ಭಾಷೆಯ ಚಿತ್ರಗಳ ಹಾಡುಗಳಿಗೆ ಅಥವಾ ತುಣುಕುಗಳಿಗೆ ಮೀಸಲಾಗಿರುತ್ತದೆ, ಆ ಮೂಲಕ ಅವರು ಪ್ರೇಕ್ಷಕರನ್ನು ಪ್ರೇಕ್ಷಕರಿಗೆ ಗೊತ್ತಿಲ್ಲದ ಹಾಗೆ ಆ ಭಾಷೆಯ ಪರಿಧಿಯೊಳಗೆ ಕಟ್ಟಿ ಹಾಕಿರುತ್ತಾರೆ, ಅದರ ಫಲಿತಾಂಶ ಏನೆಂದು ನಾನೇನು ಬೇರೆಯಾಗಿ ಹೇಳಬೇಕಿಲ್ಲ ಅದು ಎಲ್ಲರಿಗು ಗೊತ್ತಿರುವ ವಿಷಯ.

ಆದರೆ ನಮ್ಮಲ್ಲಿ ನಡೆದದ್ದೇನು? "ಸಾಲು ಸಾಲು ಪರಭಾಷೆಯ ಹಾಡುಗಳಿಗೆ ಕುಣಿತ", (ವಿಪರ್ಯಾಸವೆಂದರೆ ಕನ್ನಡ ಚಿತ್ರ ನಟನೆಗಾಗಿ ಎರೆಡೆರೆಡು ಫಿಲಂ ಫೇರ್ ಪ್ರಶಸ್ತಿ ಪಡೆದ ನಟಿಯರಿಂದ, ಬೇರೆ ಭಾಷೆ ಚಿತ್ರದ ಹಾಡುಗಳಿಗೆ ನರ್ತನ, ಅವರ ಮುಂದಿನ ಚಿತ್ರಗಳಿಗೆ ಕನ್ನಡ ಚಿತ್ರ ರಂಗ ಮತ್ತು ಕನ್ನಡಿಗರು ಬೇಡವೇನೋ?) ಈ ಮೂಲಕ ಅವರು ಅನ್ಯ ಭಾಷೆಯ ಚಿತ್ರಗಳಿಗೆ ಯಾವುದೇ ಖರ್ಚಿಲ್ಲದೆ ನಮ್ಮ ನಾಡಿನಲ್ಲಿ ಮಾರುಕಟ್ಟೆ ಒದಗಿಸಿ ಕೊಡುತ್ತಿದ್ದಾರೆ. 'ನಮ್ಮ ಸಿನಿಮಾ ಹಾಡುಗಳು ಯಾವದಕ್ಕೂ ಕಮ್ಮಿ ಇಲ್ಲ,  ನೋಡಿ, ಕೇಳಿ ಎಂಥೆಂಥಹ ಹಾಡುಗಳಿವೆ ನಮ್ಮಲ್ಲಿ, ಇನ್ನು ಮುಂದೆ ಇವೆಲ್ಲಕ್ಕೂ ಮೀರಿದ ಹಾಡು, ಚಿತ್ರಗಳು ಬರುತ್ತವೆ. ಕನ್ನಡ ಚಿತ್ರರಂಗ ಮನರಂಜನೆಯ ಗಣಿ' ಎಂಬ ಸೂಕ್ಷ್ಮ ಸಂದೇಶವನ್ನು ಈ ಕಾರ್ಯಕ್ರಮದಲ್ಲಿ ಎಲ್ಲ ಕನ್ನಡಿಗರಿಗೆ ನೀಡಬಹುದಿತ್ತು. ಆದರೆ ಅವರು ಮಾಡಿದ್ದು, 'ಕನ್ನಡ ಚಿತ್ರಗಳಿಗೆ ಅನ್ಯ ಭಾಷೆಯ ಹೆಸರುಗಳು, ಕನ್ನಡ ಕಾರ್ಯಕ್ರಮಗಳ ನಡುವೆ  ಅನ್ಯ ಭಾಷೆಯ ಕುಣಿತಗಳು.' ಇನ್ನು ಜನರನ್ನು ಹೇಗಪ್ಪ ಕಟ್ಟಿ ಹಾಕಲು ಸಾಧ್ಯ? ಪರಭಾಷೆಯ ಹಾಡುಗಳಿಗೆ ನೃತ್ಯ ಮಾಡುತ್ತಾ, ಅವರಿಗೆ ಪುಕ್ಕಟೆ ಮಾರುಕಟ್ಟೆಯನ್ನು ನಮ್ಮ ನಾಡಿನಲ್ಲಿ ನೀಡುತ್ತ, ಕನ್ನಡ ಚಿತ್ರರಂಗಕ್ಕೆ  ಕನ್ನಡಿಗರೇ ಅನ್ಯರ ಧಾಳಿಯನ್ನು ಆಹ್ವಾನಿಸಿರುವುದು ಬೇಸರದ ವಿಷಯ.
ಇಷ್ಟು ಸಾಮನ್ಯ ಜ್ಞಾನ ಇಲ್ಲದ ಇವರು ಕನ್ನಡ ಚಿತ್ರ ರಂಗದ ದುಸ್ತಿತಿಗೆ ಕನ್ನಡಿಗರನ್ನು ಆಕ್ಷೇಪಣೆ ಮಾಡುವ ಯಾವ ಅಧಿಕಾರವು ಹೊಂದಿಲ್ಲ. ಸುವರ್ಣ ಫಿಲಂ ಅವಾರ್ಡ್ಸನಲ್ಲಿ ನಡೆದ ಪ್ರಮಾದಗಳು ಮರುಕಳಿಸಿದರೆ ಪರಭಾಷೆ ಚಿತ್ರಗಳಿಗೆ ನೀವೇ ರತ್ನಗಂಬಳಿ ಹಾಸಿ ಕೊಟ್ಟಹಾಗೆ, ನಿಮ್ಮ ಹೊಂಡವನ್ನು ನೀವೇ ತೆಗೆದು ಕೊಂದ ಹಾಗೆ, ನೀವು ಕುಳಿತ ಮರದ ಕೊಂಬೆಯನ್ನು ನೀವೇ ಕಡಿದ ಹಾಗೆ! ಕನ್ನಡಿಗರನ್ನು ಸೆಳೆಯಲು ಕನ್ನಡೇತರ ಮನರಂಜನೆಯ ಅಗತ್ಯವಿಲ್ಲ.
"ಕನ್ನಡ ಚಿತ್ರರಂಗವನ್ನು ಮೊದಲು ಕನ್ನಡವಾಗಿಸಿ"

ನಮಗಿದು ಬೇಕಾ??

ಇದು ಸುಮಾರು ೫ ರಿಂದ ೬ ವರ್ಷಗಳ ಹಿಂದಿನ ಕಥೆ, ನಮ್ಮ ಬೆಂಗಳೂರಿನಲ್ಲಿ ಎಫ್ ಎಂ ರೇಡಿಯೋ ಗಳು ಅಂಬೆಗಾಲು ಇಡುತ್ತ ನಾ ಮುಂದು, ತಾ ಮುಂದು ಎನ್ನುತ್ತಾ ತಮ್ಮ ಉಳಿವಿಗಾಗಿ ಹಾಗು 'ನಂ. ೧' ಸ್ಥಾನಕ್ಕಾಗಿ ಹೋರಾಡುತ್ತಿದ್ದ ಕಾಲ. ಆಗ ಬೆಂಗಳೂರಿನಲ್ಲಿ ಇದ್ದ ಕೆಲವೇ ಕೆಲವು ಎಫ್. ಎಂ ಪ್ರಸರ ಕೇಂದ್ರಗಳು ಬರಿ ವಲಸಿಗರನ್ನು ತೃಪ್ತಿ ಪಡಿಸುವ ಸಲುವಾಗಿಯೋ ಅಥವಾ ಬೆಂಗಳೂರಿನವರ ಅಭಿರುಚಿಯನ್ನು ಸರಿಯಾಗಿ ತಿಳಿಯದೆ ಮಾಡಿದ ಪ್ರಮಾದವೋ, ಏನೋ? ಬರಿ  ಹಿಂದಿ ಹಾಗು ಇಂಗ್ಲಿಷ್ ಹಾಡುಗಳನ್ನು ಪ್ರಸಾರ ಮಾಡುತ್ತಾ ಅತಿ ದೊಡ್ಡ ಕೇಳುಗರ ಗುಂಪಿನಿಂದ ಎಫ್. ಎಂ. ಎನ್ನುವುದು ದೂರ ಉಳಿದಿತ್ತು. ಆಗ ಬಂದ ಕೆಲವು ಹೊಸ ಚಾನೆಲ್ಗಳಿಗೆ ಯಾರು ಹೇಳಿ ಕೊಟ್ಟರೋ ಏನೋ ಗೊತ್ತಿಲ್ಲ 'ಬರಿ ಕನ್ನಡ ಹಾಡು ಹಾಕಿ ಮತ್ತೆ ಕೇಳುಗರ ಸಂಖ್ಯೆ ನೋಡಿ' ಎಂದು, ಅವು ಅದನ್ನೇ ಮಾಡಿದವು. ಅದರ ಫಲಿತಾಂಶ ಈಗ ಆ ಚಾನೆಲ್ಲುಗಳು 'ಟಾಪ್ ೫' ಸ್ತಾನದಲ್ಲಿವೆ. ಜೊತೆಗೆ ಆದ ಮತ್ತೊಂದು ಬದಲಾವಣೆ ಅಂದರೆ 'ಬರಿ ಹಿಂದಿ ಹಾಗು ಇಂಗ್ಲಿಷ್ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದ ಚಾನೆಲ್ಲಗಳು ಕೂಡ ಕನ್ನಡ ಹಾಡುಗಳನ್ನು ಹಾಕಿ ಟಾಪ್ ೫ ಸ್ಥಾನಕ್ಕೆ ಸೆಣೆಸುತ್ತಿವೆ. 

ಹೀಗೆ ಹೊಸದನ್ನು ಮಾಡಿ ಈಗ ನಂಬರ್ ಒನ್ ಸ್ಥಾನದಲ್ಲಿ ಇರುವ ಚಾನೆಲ್ ಎಂದರೆ ಅದು ಬಿಗ್ ಎಫ್. ಎಂ. ೯೨.೭. ( ಒಂದು ಕಾಲದ, ನನಗೆ ಅತ್ಯಂತ ಇಷ್ಟವಾದ ಎಫ್. ಎಂ. ಚಾನೆಲ್!), ಆಗ ಬರಿ ಕನ್ನಡ ಹಾಡುಗಳನ್ನು ಮಾತ್ರ ಹಾಕಿ ಜನರನ್ನು ತನ್ನತ್ತ ಸೆಳೆದ ಇವರು ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಹಾಗು ಮೈಸೂರು ಪ್ರಸಾರ ಕೇಂದ್ರಗಳಲ್ಲಿ, ಸುಂದರ ಕನ್ನಡ ಹಾಡುಗಳ ಮಧ್ಯೆ ಹಿಂದಿ ಹಾಡುಗಳನ್ನು ಹಾಕಲು ಶುರು ಮಾಡಿದ್ದರೆ, ಈಗ ಮೈಸೂರಿನಲ್ಲಿ ಇರುವ ನನಗೆ ಅನಿಸಿದ್ದು ಏನೆಂದರೆ ಇವರು ಕನ್ನಡಕ್ಕಿಂತ ಹೆಚ್ಹಾಗಿ ಹಿಂದಿ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದಾರೆ ಎಂದು.

ಸಿಹಿಯಾದ, ಮೃದುವಾದ ಜಾಮೂನನ್ನು ಬಾಯಿ ತುಂಬ ತಿನ್ನುವಾಗ ಒರಟಾದ ಕಲ್ಲು ಸಿಕ್ಕರೆ ಹೇಗೆ ಹೇಳಿ? ನಾನು ಕೆಲ ದಿನಗಳು ಸಹಿಸಿದೆ, ಅತಿ ಹೆಚ್ಹು ಇಷ್ಟ ಪಡುವ ಚಾನೆಲ್ ಆಗಿದ್ದರಿಂದ ಕೆಲ ದಿನ ಇಷ್ಟವಿಲ್ಲದಿದ್ದರೂ ಕನ್ನಡ ಹಾಡುಗಳ ಮಧ್ಯೆ ಪ್ರಸಾರವಾಗುವ ಹಿಂದಿ ಹಾಡುಗಳನ್ನ ಕೇಳುತ್ತಿದ್ದೆ. ಅತಿ ಪ್ರಿಯವಾದ ನನ್ನ ಬಿಗ್ ಎಫ್ ಎಂ ಚಾನೆಲ್ ಅನ್ನು ಬಿಟ್ಟು ಹೋಗಲು ಮನಸಾಗದೆ, ನನ್ನ ಕಷ್ಟದ ಬಗ್ಗೆ ನಿಲಯದ ವ್ಯವಸ್ಥಾಪಕರಿಗೆ ತಿಳಿಸಿ, ಬರಿ ಕನ್ನಡ ಹಾಡುಗಳನ್ನು ಪ್ರಸಾರ ಮಾಡಿ ಎಂದು ಪ್ರಾರ್ಥಿಸಲು, ಹೇಗೋ ಮಾಡಿ ಮೈಸೂರಿನ ಎಫ್. ಎಂ. ನಿಲಯದ ದೂರವಾಣಿ ಸಂಖ್ಯೆಯನ್ನು  ಸಂಪಾದಿಸಿ ಕರೆ ಮಾಡಿದೆ.

ನಾನು ಅಂದು ಮಾತನಾಡಿದ್ದು ಬಿಗ್ ಎಫ್ ಎಂ ನ ಮೈಸೂರಿನ ಕಾರ್ಯಕ್ರಮಗಳನ್ನು ನೋಡಿಕೊಳ್ಳುವ ವ್ಯಸ್ಥಾಪಕರ (ಪ್ರೋಗ್ರಾಂ ಕೋಆರ್ಡಿನೆಟರ) ಹತ್ತಿರ, 'ನಿಮ್ಮ ಚಾನೆಲ್ಲಿನಲ್ಲಿ ಆರಾಮಾಗಿ ಕನ್ನಡ ಹಾಡು ಕೇಳುತ್ತಿದ್ದ ನನಗೆ ಮಧ್ಯ ಮಧ್ಯ ಹಿಂದಿ ಹಾಡನ್ನು ಯಾಕೆ ಕೇಳಿಸ್ತೀರ  ಸ್ವಾಮೀ, ಬರಿ ಕನ್ನಡ ಹಾಡುಗಳನ್ನು ಯಾಕೆ ಹಾಕಬಾರದು ನೀವು?'. ಎಂಬ ನನ್ನ ಪ್ರಶ್ನೆಗೆ ಅವರಿಂದ ಬಂದ ಉತ್ತರಗಳು ಹೇಗಿದ್ದವು, "ಹಿಂದಿ ನಮ್ಮ ರಾಷ್ಟ್ರ ಭಾಷೆ, ಮೈಸೂರಿನಲ್ಲಿ ಹಿಂದಿ ಬಾರದ ೨೦ ಜನರನ್ನು ನನಗೆ ತೋರಿಸಿ, ನಾವು ಎಲ್ಲ ಭಾಷೆಯ ಜನರನ್ನು ಮನರಂಜಿಸ ಬೇಕು, ನಮ್ಮ ಕಾರ್ಯಕ್ರಮಗಳ ರೂಪುರೇಷೆ ಗಳೇ ಹಾಗೆ....". ನಾನಂತು ಸುಸ್ತು ಆಗಿಬಿಟ್ಟೆ, ಅವರ ಉತ್ತರಕ್ಕಲ್ಲ ಅವರ ಅಜ್ಞಾನಕ್ಕಾಗಿ.

ಮೊದಲನೆಯದಾಗಿ, ಭಾರತ ವ್ಯವಿದ್ಯತೆಗಳ ತವರೂರು, ಅದರಲ್ಲೂ ಭಾಷಾ ವ್ಯವಿದ್ಯತೆ ನಮ್ಮ ಹಿರಿಮೆ, ಇಂತಹ ದೇಶದಲ್ಲಿ ಯಾವುದೇ ಒಂದು ಭಾಷೆಯನ್ನು ಹೇಗೆ ರಾಷ್ಟ್ರ ಭಾಷೆ ಎಂದು ಪರಿಗಣಿಸಿ ಉಳಿದ ಭಾಷೆಗಳನ್ನು ಕಡೆಗಣಿಸಲು ಹೇಗೆ ಸಾಧ್ಯ? ಎಲ್ಲಾ ರಾಜ್ಯಗಳ ಭಾಷೆಗೂ ಅದರದೇ ಆದ ನೆಲೆಗಟ್ಟು, ಇತಿಹಾಸ, ಸಂಸ್ಕೃತಿ ಇದೆ, ಇವುಗಳ ನಡುವೆ ನಾವು ಯಾವುದೇ ಒಂದು ಭಾಷೆಗೆ ಮನ್ನಣೆ ನೀಡಿದೆರೆ ನಮ್ಮ ವ್ಯವಿದ್ಯತೆಯನ್ನು ನಾವೇ ಕೊಂದುಹಾಕಿದಂತೆ ಅಲ್ಲವೇ? ಅದೆಲ್ಲಕ್ಕಿಂತ ಹೆಚ್ಹಾಗಿ ನಮ್ಮ ದೇಶಕ್ಕೆ 'ರಾಷ್ಟ್ರ ಭಾಷೆ' ಅನ್ನುವುದೇ ಇಲ್ಲ ಎಂಬ ವಿಚಾರ ಇವರಿಗೆ ತಿಳಿದಿಲ್ಲ ಎಂಬುದೇ ನನಗೆ ಆಶ್ಚರ್ಯದ ವಿಷಯ.. ಇವರಿಗೆ ಈ ವಿಷಯವನ್ನು ತಿಳಿಸಲು ನಾನು ಕೆಳಗಿನ ಕೊಂಡಿಯನ್ನು ಉದಾಹರಣೆಯಾಗಿ ನೀಡ ಬೇಕಾಗಿ ಬಂತು.
 http://articles.timesofindia.indiatimes.com/2010-01-25/india/28148512_1_national-language-official-language-hindi

http://www.mid-day.com/news/2011/jun/240611-RTI-Manoranjan-Roy-Home-Ministry-official-name-passport.htm

ಎರಡನೆಯದು, ಮೈಸೂರಿನಲ್ಲಿ ಹಿಂದಿ ಬಾರದ ೨೦ ಜನ ಬೇಕಂತೆ ಹಾಗು ಅವರು ಎಲ್ಲ ಭಾಷೆಯ ಜನರನ್ನು ರಂಜಿಸ ಬೇಕಂತೆ, ಸ್ವಾಮಿ, ಮೈಸೂರನ್ನು ಒಂದು ಸುತ್ತು ಸರಿಯಾಗಿ ಹೊಡೆದು ನೋಡಿದ್ದರೆ ಅವರು ಈ ಮಾತನ್ನು ನನಗೆ ಹೇಳುತ್ತಿರಲಿಲ್ಲ, ' ಜನರ ಭಾಷೆ ಹಾಗು ಅಭಿರುಚಿಗಳನ್ನು ತಿಳಿಯದೆ ಅದು ಹೇಗೆ ಕಾರ್ಯಕ್ರಮಗಳನ್ನು ರೂಪಿಸುತ್ತರೋ ನಾನರಿಯೆ?'. ಕನ್ನಡಿಗರೇ ತುಂಬಿರುವ ಮೈಸೂರಿನಲ್ಲಿ ಕೇವಲ ಕೆಲವು ವಲಸಿಗರಿಗೊಸ್ಕರ ಅಷ್ಟು ಜನ ಕನ್ನಡಿಗರು ಕನ್ನಡೇತರ ಹಾಡುಗಳನ್ನು ಕೇಳಬೇಕಾ? ಇವರು ಎಲ್ಲ ಭಾಷೆಯ ಜನರನ್ನು ರಂಜಿಸುತ್ತಾರೆ ಅನ್ನವುದಾದರೆ ನಾವು ಚೆನ್ನೈ, ಮುಂಬೈ, ದೆಹಲಿ ಅಂಥಹ ಮುಂತಾದ ನಗರಗಳಲ್ಲಿ ಕನ್ನಡ ಹಾಡುಗಳನ್ನು ಬಿಗ್ ಎಫ್. ಎಂ . ಏಕೆ ಪ್ರಸಾರ ಮಾಡುವುದಿಲ್ಲ? ಅಲ್ಲಿಯೂ ಕನ್ನಡಿಗರಿದ್ದಾರೆ, ಅವರಿಗೂ ಮನರಂಜನೆ ಬೇಕಲ್ಲವೇ? ಇದು ಯಾವ ನ್ಯಾಯ?

ಇನ್ನು ಅವರ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ನನ್ನ ಯಾವುದೇ ಪ್ರತಿಕ್ರಿಯೆ ಇಲ್ಲ, ಅವರು ಹಿಂದಿ ಹಾಡುಗಳನ್ನು ಹಾಕುವ ರೂಪುರೇಷೆಗಳನ್ನು ರಚಿಸಿ ಕೊಂಡಿದ್ದಾರೆ, ಕೆಳುಗರಾದ ನಾವು ನಮಗೆ ಇಷ್ಟವಾದ ಕನ್ನಡ ಹಾಡುಗಳನ್ನು ಪ್ರಸಾರ ಮಾಡುವ ಚಾನೆಲ್ಲುಗಳಿಗೆ ವಾಲುತ್ತೇವೆ. ನಾನೀಗ ಅದನ್ನೇ ಮಾಡುತ್ತಿದ್ದೇನೆ,  ಕರ್ನಾಟಕದಲ್ಲಿ ಯಾವ ಭಾಷೆಯಲ್ಲಿ ಮನರಂಜನೆ ನೀಡಬೇಕು ಎಂದು ತಿಳುದು ಕೊಳ್ಳದ ಹಾಗು ನಮ್ಮ ಅಭಿರುಚಿಗಳಿಗೆ ಸ್ಪಂದಿಸದ ಬಿಗ್ ಎಫ್ ಎಂ ಅನ್ನು ಕೇಳುವ ಗೋಜಿಗೆ ನಾನು ಹೋಗುತ್ತಿಲ್ಲ, ನನ್ನ ರೇಡಿಯೋದಲ್ಲಿ ೯೨.೭ ತರಂಗಾಂತರವನ್ನು ನಾನು ತೆಗೆದು ಹಾಕಿದ್ದೇನೆ.
ಜೊತೆಗೆ ನಾನು ಇದನ್ನು ಓದಿದವರಿಗೆ ಕೇಳುವ ಪ್ರಶ್ನೆ '೨೪ ಗಂಟೆ ಕನ್ನಡ ಹಾಡುಗಳನ್ನು ಹಾಕುವ ಎಷ್ಟೋ ಪ್ರಸಾರ ಕೇಂದ್ರ ಗಳು ನಮ್ಮ ನಡುವೆ ಇರುವಾಗ ಇಂಥಹ ಅರೆಬೆರಕೆ ಮನರಂಜನೆ ಬೇಕಾ? ನಮಗಿದು ಬೇಕಾ??'