ಸೋಮವಾರ, ಜುಲೈ 30, 2012

ಬದಲಾವಣೆ ತರುವತ್ತ ನೀವು ಕೈ ಜೋಡಿಸಿ


"ಬೇಡನೊಬ್ಬ ಹಕ್ಕಿಗಳ ಗುಂಪಿಗೆ ಬಲೆ ಬೀಸಿದ್ದು, ಆ ಬಲೆಯೊಳಗೆ ಹಕ್ಕಿಗಳೆಲ್ಲ ಸಿಕ್ಕಿಕೊಂಡಿದ್ದು, ನಂತರ ಎಲ್ಲ ಹಕ್ಕಿಗಳು ಒಟ್ಟುಕೂಡಿ ಬಲೆಯ ಜೊತೆಗೆ ಆಕಾಶಕ್ಕೆ ಹಾರಿದ್ದು, ಬಲೆ ಬೀಸಿದ ಬೇಡ ಬೆಪ್ಪಾಗಿದ್ದು, ಗೆಳೆಯ ಇಲಿರಾಯ, ಬಲೆ ಕಚ್ಚಿ ಹಕ್ಕಿಗಳಿಗೆ ಬಿಡುಗಡೆ ನೀಡಿದ್ದು..." ಒಗ್ಗಟ್ಟಿನ ಮಹತ್ವವನ್ನು ಸಾರುವ ಈ ಕತೆಯನ್ನು ಒಂದರಲ್ಲೋ ಇಲ್ಲಾ ಎರಡನೇ ತರಗತಿಯಲ್ಲಿ ಕೇಳಿದ ನೆನಪು. ಈ ಹಳೆಯ ನೆನಪು ಮರುಕಳಿಸಲು ಕಾರಣ ಈ ಹೊಸ ಪ್ರಕರಣ.
ಬಿ.ಎಂ.ಟಿ ಎಫ್ (ಬೆಂಗಳೂರು ಮಹಾನಗರ ಕಾರ್ಯಪಡೆ) ಪಾಲಿಕೆಯ ಆಸ್ತಿ ಉಳಿಸುವಿಕೆ ಹಾಗು ಕುಂದು ಕೊರತೆಗಳನ್ನು ಸರಿಪಡಿಸುವ ಸಲುವಾಗಿ ಹುಟ್ಟಿಕೊಂಡ ಪಡೆ. ಇತ್ತೀಚಿಗೆ ಅಂದರೆ ಜುಲೈ 19, 2012 ರಿಂದ ಮಿಂಬಲೆ ಮೂಲಕವೂ (http://bmtf.gov.in/index.htm) ದೂರುಗಳನ್ನು ಸಲ್ಲಿಸುವ ಅವಕಾಶ ಮಾಡಿಕೊಡಲಾಗಿತ್ತು. ಕರ್ನಾಟಕದಲ್ಲಿ ಕನ್ನಡಿಗರ ಕುಂದು ಕೊರತೆಗಳನ್ನು ನೀಗಿಸುವ ಸಲುವಾಗಿ ಹುಟ್ಟಿದ್ದ ಈ ಪಡೆಯ ಮಿಂಬಲೆ, ಕನ್ನಡವಿಲ್ಲದೆ ಕನ್ನಡಿಗರಿಂದ ದೂರವಿತ್ತು. ಕನ್ನಡಿಗರ ಅನುಕೂಲಕ್ಕಾಗಿ ಕನ್ನಡದಲ್ಲಿ ಮಿಂಬಲೆ ಯನ್ನು ನೀಡುವ ಗೋಜಿಗೆ ಈ ಕಾರ್ಯಪಡೆ ಹೋಗಿರಲಿಲ್ಲ.

ಇದನ್ನು ಗಮನಿಸಿದ ನಮ್ಮ ಜಾಗೃತ ಗ್ರಾಹಕ ಗೆಳೆಯರೊಬ್ಬರು ಕನ್ನಡ ಮಿಂಬಲೆ ನೀಡಬೇಕೆಂದು ಕಾರ್ಯಪಡೆಗೆ ಮಿಂಚಂಚೆ ಬರೆದು ಅದನ್ನು ಉಳಿದ ಗೆಳೆಯರೊಡನೆ ಹಂಚಿಕೊಂಡರು, ಇವರೊಬ್ಬರೇ ಪತ್ರ ಬರೆದಿದ್ದರೆ ನಮ್ಮ ಕಾರ್ಯಪಡೆ  ಕಾರ್ಯಪ್ರವ್ರುತ್ತರಾಗುತ್ತಿರಲಿಲ್ಲ ಅನಿಸುತ್ತದೆ. ಒಂದರ ಮೇಲೆ ಒಂದರಂತೆ ಉಳಿದ ಗೆಳೆಯರು ಪತ್ರ ಬರೆದರು , ಕನ್ನಡ ಮಿಂಬಲೆ ಸಿಗದಿದ್ದರೆ ಆಗುವ ಅನಾನುಕೂಲದ ಬಗ್ಗೆ ತಿಳಿಸಿ ಕೊಟ್ಟರು.
ಈ ಮಿನ್ಚೆಗಳಿಗೆ ಉತ್ತರ ಜುಲೈ 29 ರ ವಿಜಯವಾಣಿಯಲ್ಲಿ ಪ್ರಕಟವಾದ ಸುದ್ದಿಯಿಂದ ದೊರೆತಿದೆ. "ಕೇವಲ ಇಂಗ್ಲಿಷಿನಲ್ಲಿ ಮಾತ್ರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ತೊಂದರೆ ಆಗುತ್ತಿದೆ, ಕನ್ನಡದಲ್ಲೂ ದೂರು ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡಬೇಕೆಂಬ ಮನವಿ ಬಂದಿದೆ, ಇನ್ನು 3-4 ದಿನದಲ್ಲಿ ಕನ್ನಡದ ಅನುಷ್ಠಾನ ಆಗುವುದು" ಎಂದು ಅರ. ಪಿ ಶರ್ಮ ಅವರು ತಿಳಿಸಿದ್ದಾರೆ.
ಇದಲ್ಲವೇ ಒಗ್ಗಟ್ಟಿನಿಂದ ಬರೆದ ಪತ್ರಗಳಿಗೆ ಸಿಕ್ಕ ಗೆಲವು.



 ಕನ್ನಡ ಅನ್ನೋದು ಮರೆಯಾಗುತ್ತಿದೆ , ಈಗ ಏನು ಮಾಡಿದರು ಅದನ್ನು ಹಿಂತಿರುಗಿ ಹಳೆಯ ವೈಬವಕ್ಕೆ ಮರಳಿಸಲು ಸಾದ್ಯವಿಲ್ಲ ಎಂದು ಬಾಯಿ ಮಾತಿನಲ್ಲಿ ಹೇಳುವುದಕ್ಕಿಂತ ಕನ್ನಡದ ಸೇವೆ ಸಿಗದಿದ್ದ ಕಡೆ ಕನ್ನಡ ಸೇವೆ ನೀಡ ಬೇಕೆಂದು ಒತ್ತಾಯಿಸಿ ಪಡೆದು ಕೊಂಡರೆ ಬದಲಾವಣೆ ಸಾದ್ಯ. ಹೀಗೆಯೇ ಹಲವಾರು ಬದಲಾವಣೆಗಳಿಗೆ ನಮ್ಮ ಜಾಗೃತ ಗ್ರಾಹಕರು ಕಾರಣರಾಗಿದ್ದಾರೆ, ಇವರಿಗೆಲ್ಲ ನನ್ನ ನನ್ನಿ.

ಬದಲಾವಣೆ ತರುವತ್ತ  ನೀವು ಕೈ ಜೋಡಿಸಿ.

ನಾನು ಕೂಡ ಈ ಕುರಿತು ಪತ್ರ ಬರೆದಿದ್ದೆ ಅದರ ಪ್ರತಿ ಕೆಳಗಿದೆ ನೋಡಿ:

---------- Forwarded message ----------
From: Ratheesha B R <rathishstar@gmail.com>
Date: 2012/7/21
Subject: ಬಿ.ಎಂ.ಟಿ.ಎಫ್. ನಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನ ಆಗಲಿ
To: bmtf.policestation@gmail.com, cm@kar.nic.in
Cc: Kannada Pradhikara <kannadapradhikara@gmail.com>


ನಮಸ್ಕಾರ ಬಿ.ಎಂ.ಟಿ.ಎಫ್.

ಇತ್ತೀಚೆಗಷ್ಟೇ ನಿಮ್ಮ ಬಗ್ಗೆ ಪತ್ರಿಕೆಗಳಿಂದ ಓದಿ ತಿಳಿದೆ. ಹೆಚ್ಹಿನ ಮಾಹಿತಿ ಅರಿಯಲು ನಿಮ್ಮ ಮಿಂದಾಣಕ್ಕೆ (http://bmtf.gov.in/index.htm) ಬೇಟಿ ಕೊಟ್ಟರೆ ನನಗೆ ಆಶ್ಚರ್ಯ ಕಾದಿತ್ತು. ಮೊದಲನೆಯದಾಗಿ, ನಿಮ್ಮ ಮಿಂದಾಣ ಕರ್ನಾಟಕ ರಾಜ್ಯದ ಆಡಳಿತ ನುಡಿಯಾದ ಕನ್ನಡದಲ್ಲಿ ಇಲ್ಲದಿರುವುದು, ಬೆಂಗಳೂರಿನ ಆಸ್ತಿಗಳ ರಕ್ಷಣೆಗೆಂದು ಹುಟ್ಟಿ ಕೊಂಡಿರುವ ಈ ರಾಜ್ಯ ಸರ್ಕಾರದ ಅಂಗ ಈ ರೀತಿ ಕನ್ನಡ ಕಡೆಗಣನೆ ಮಾಡಿರುವುದು ವಿಷಾದದ ಸಂಗತಿ. ನಮ್ಮವರನ್ನು ನಮ್ಮ ನುಡಿಯ ಮೂಲಕ ತಲುಪದ ನೀವು ಇನ್ನೇನು ಸೇವೆ ನೀಡ ಬಲ್ಲಿರಿ? ರಾಜ್ಯದ ಜನತೆಯ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುವುದು ಸರಿ ಕಾಣುವುದಿಲ್ಲ. ದಯವಿಟ್ಟು ನಿಮ್ಮ ಸೇವೆಯನ್ನು ಕನ್ನಡದಲ್ಲಿ ನೀಡಿ, ಮಿಂದಾಣದ ಮಾಹಿತಿಯನ್ನು ಕನ್ನಡದಲ್ಲಿ ಕೊಡಿ.
ಎರಡನೆಯದಾಗಿ, ರಾಜ್ಯ ಸರ್ಕಾರದ ಕಾನೂನಿನ ಪ್ರಕಾರ ಬೆಂಗಳೂರನ್ನು "Bengaluru " ಎಂದು ಬರೆಯ ಬೇಕು ಆದರೆ ನಿಮ್ಮ ಮಿಂದಾಣದಲ್ಲಿ ಅದು "bangalore " ಆಗಿದೆ. ದಯವಿಟ್ಟು ಈ ತಪ್ಪನ್ನು ಸರಿಪಡಿಸಿ.


ಇಂತಿ ನಿಮ್ಮ,
ರತೀಶ