ಮಂಗಳವಾರ, ಅಕ್ಟೋಬರ್ 4, 2011

ಕನ್ನಡಿಗರ ತೆರಿಗೆ ಹೊರನಾಡಿಗರ ಕಿಸೆಗೆ!

ಪಾರಂಪರಿಕ, ಅಭೂತ ಪೂರ್ವ, ವಿಶ್ವ ವಿಖ್ಯಾತ ಎಂದೆಲ್ಲ ಅನೇಕ ಬಿರುದುಗಳನ್ನು ಹೊತ್ತ ನಮ್ಮ ಮೈಸೂರು ದಸರಾವನ್ನು ಪೂರ್ಣ ೧೦ ದಿನಗಳ ಕಾಲ ಕಣ್ಣಾರೆ ಕಂಡು ಸವಿಯಬೇಕು ಎಂದು ಮಹದಾಸೆ ಹೊತ್ತು ಮೈಸೂರಿನ ಮೂಲೆ ಮೂಲೆ ತಿರುಗುತ್ತಿರುವ ನನಗೆ ಈ ದಸರಾ ಅತಿ ದೊಡ್ಡ ನಿರಾಶೆ ತಂದಿಟ್ಟಿದೆ!!! ಮೊದಲೆನೆಯದಾಗಿ ಇದನ್ನ 'ನಾಡಹಬ್ಬ' ಎಂದು ಏಕೆ ಕರೆಯುತ್ತಾರೆ ಎಂದು ನನಗೆ ಇನ್ನೂ ತಿಳಿಯುತ್ತಿಲ್ಲ, ನನ್ನ ಹಿರಿಯರು, ಅಂದಿನ ದಸರಾ ವೈಭವನ್ನು ಕಣ್ಣಾರೆ ಕಂಡವರು ನನಗೆ ಹೇಳಿದ ಪ್ರಕಾರ ಕರ್ನಾಟಕದ ಶ್ರೀಮಂತ ಹಾಗು ಸಮೃದ್ದ ಸಂಸ್ಕೃತಿಯ ಅನಾವರಣ ನಮ್ಮ ದಸರಾದಲ್ಲಿ ನಡೆಯುತ್ತಿತ್ತು, ಅರಮನೆ ಕಾರ್ಯಕ್ರಮಗಳು, ಆಹಾರ ಮೇಳ, ಜಂಬೂ ಸವಾರಿ, ಸಾಂಸ್ಕೃತಿಕ ಸಂಜೆ ಹಾಗು ಇತರೆ ಹತ್ತು ಹಲವು ಕಾರ್ಯಕ್ರಮಗಳು ರಾಜ್ಯದ ವಿವಿಧ ಕಡೆಯಿಂದ ಬಂದ ವಿಶಿಷ್ಟ ಪ್ರತಿಭೆಗಳಿಂದ ಜರುಗುತ್ತಿತ್ತು, ಈ ಮೂಲಕ ಕನ್ನಡ ಸಂಸ್ಕೃತಿ ಹಾಗು ಕನ್ನಡಿಗರ ಪ್ರತಿಭೆಯನ್ನು ವಿಶ್ವಕ್ಕೆ ಪರಿಚಯ ಮಾಡಿಕೊಡಲಾಗುತ್ತಿತ್ತು. ಅದಕ್ಕಾಗಿಯೇ ಅನಿಸುತ್ತದೆ ದಸರಾವನ್ನು 'ನಾಡಹಬ್ಬ' ಎಂದು ಕರೆಯುತ್ತಿರುವುದು. 


ಹೀಗೆ, ಕಣ್ಣಲ್ಲಿ ಅನೇಕ ನಿರೀಕ್ಷೆಗಳನ್ನು ತುಂಬಿಟ್ಟುಕೊಂಡು ಮೈಸೂರು ತಿರುಗುತ್ತಿರುವ ನನಗೆ ಕಾಣ ಸಿಗುತ್ತಿರುವುದು ಕೇವಲ ಪರಭಾಷಾ ಹಾಗು ಪರಭಾಷಿಕರ ವೈಭವ! ಒಬ್ಬ ಸಂಗೀತಗಾರನಿಗೆ ಮೈಸೂರಿನ ಅರಮನೆ ಮೈದಾನದಲ್ಲಿ ದಸರಾ ಸಂದರ್ಭದಲ್ಲಿ ನಡೆಸಿಕೊಡುವ ಮುಖ್ಯ ಕಾರ್ಯಕ್ರಮವು ಅತ್ಯಂತ ಗೌರವನ್ವಿತವಾದ ಹಾಗು ಆತನ ಜೀವನದ ಶ್ರೇಷ್ಠ ಕಾರ್ಯಕ್ರಮಗಳಲ್ಲಿ ಒಂದಾಗಿರುವುದು, ನಮ್ಮ ದಸರಾ ಆಯೋಜಕರಿಗೆ ಈ ಅರ್ಹತೆ ಉಳ್ಳ ವ್ಯಕ್ತಿಗಳು ಕನ್ನಡ ನಾಡಿನಲ್ಲಿ ಸಿಗದಿರುವುದು ಆಶ್ಚರ್ಯ! ಅರಮನೆಯ ಮುಖ್ಯ ಕಾರ್ಯಕ್ರಮಗಳು ಮುಂಬೈ ಹಾಗು ಪುಣೆಯವರಿಂದಲೇ ನಡೆಯುತ್ತಿವೆ. ಇನ್ನು ನನ್ನ ಅತಿ ಪ್ರಿಯವಾದ ಮೇಳವಾದ 'ಆಹಾರ ಮೇಳ'ದಲ್ಲಿ ಪಂಜಾಬಿ, ಬೆಂಗಾಲಿ ಹಾಗು ಇತರೆ ಹೊರನಾಡಿನ ಊಟಗಳೇ ಮುಖ್ಯದ್ವಾರದಲ್ಲಿ, ಕರ್ನಾಟಕ ಖಾದ್ಯಗಳಿಗೆ ಸ್ವಲ್ಪ ಕಷ್ಟಪಟ್ಟು ಹುಡುಕಬೇಕಾಗಿದೆ. ಹಾಗೆ ದಸರಾ ವಿಶೇಷ ಊಟದ ಹೆಸರು 'ದಸರಾ ಥಾಲಿ' ಅಂತೆ, ಪಾಪ, ಕನ್ನಡದಲ್ಲಿ ಈ ಊಟಕ್ಕೆ ಹೆಸರೇ ಸಿಕ್ಕಿಲ್ಲ ಇವರಿಗೆ! ಇನ್ನು ಇತ್ತೀಚಿನ ಮಹತ್ತಾಕರ್ಷಣೆಯ ಕಾರ್ಯಕ್ರಮ 'ಯುವ ದಸರಾ'ದಲ್ಲಿ ಕನ್ನಡಿಗರಿಂದ ಕೇವಲ ಒಂದು ದಿನ ಮಾತ್ರ ಸಂಗೀತ ರಸಸಂಜೆ, ಉಳಿದ ದಿನಗಳೆಲ್ಲ ಪರಭಾಷಿಕರಿಗೆ ಮೀಸಲು! ಅಲ್ಲಾ ಸ್ವಾಮೀ, ಹಿಂದಿ ಹಾಡು ಕೇಳೋಕೆ ಯಾರಾದ್ರೂ ಕರ್ನಾಟಕದ ಮೈಸೂರು ದಸರಾಕ್ಕೆ ಬರ್ತಾರ? ಅಥವಾ ಕನ್ನಡ ಕಾರ್ಯಕ್ರಮಗಳನ್ನು ಸವಿಯೋಕೆ ಬರ್ತಾರ?

ಮೈಸೂರು ದಸರಾಕ್ಕೆ ಲಕ್ಷ ಲಕ್ಷಗಟ್ಟಲೆ ಹಣ ಸರ್ಕಾರದಿಂದ ಹರಿದು ಬರುತ್ತದೆ, ಅದು ಕನ್ನಡಿಗರು ಕಟ್ಟುವ ತೆರಿಗೆಯ ಹಣ ಎಂದು ನಾನು ಬಿಡಿಸಿ ಹೇಳಬೇಕಾಗಿಲ್ಲ, ಆದರೆ ಈ ಹಣ ಇಲ್ಲಿ ವ್ಯಯವಾಗುತ್ತಿರುವುದು ಹೊರನಾಡಿಗರ ಕಲ್ಯಾಣ ಹಾಗು ಪ್ರಸಿದ್ದಿಗಳಿಗೆ, ಅವರು ಕೇಳಿದಷ್ಟು ಹಣ ಕೊಟ್ಟು ಇಲ್ಲಿಗೆ ಕರೆತಂದು ಅವರ ಹಾಡುಗಳನ್ನು ನಮ್ಮ ಹಬ್ಬದಲ್ಲಿ ಹಾಡಿಸುವ ಬದಲು ನಮ್ಮ ಪ್ರತಿಭೆಗಳಿಗೆ ಪ್ರಾಮುಖ್ಯತೆ ನೀಡಿದ್ದರೆ 'ನಾಡಹಬ್ಬ' ಎಂದು ಕರೆದಿದ್ದಕ್ಕೂ ಸಾರ್ಥಕವಗುತ್ತಿತ್ತೇನೋ. ಕನ್ನಡಿಗರ ತೆರಿಗೆ ಹೊರನಾಡಿಗರ ಕಿಸೆಗೆ ಎನ್ನುವ ಹಾಗೆ ನಮ್ಮ ಆಯೋಜಕರು ಅವರಿಗೆ ರತ್ನಗಂಬಳಿ ಹಾಸಿರುವುದು ವಿಷಾದವೇ ಸರಿ.ಈ ಆಯೋಜಕರಂತು ನನ್ನ ಕಣ್ಣಿಗೆ ಅನ್ಯ ಭಾಷೆಯ ಅಧಿಕೃತ ಪ್ರವಾದಿಗಳಂತೆ ಕಂಡು ಬರುತ್ತಾರೆ.

ಕರ್ನಾಟಕದಲ್ಲಿ ನಡೆಯುವ ದಸರಾದಲ್ಲಿ ಕನ್ನಡ ಹಾಗು ಕನ್ನಡಿಗರಿಗೆ ಪ್ರಾಮುಖ್ಯತೆ ನೀಡಿ ಈ ಮೂಲಕ ನಮ್ಮ ಭಾಷೆ ಹಾಗು ಸಂಸ್ಕೃತಿಯನ್ನ ವಿಶ್ವಕ್ಕೆ ಪ್ರಸ್ತುತ ಪಡಿಸುವ ಸಾಮಾನ್ಯ ಜ್ಞಾನ ನಮ್ಮ ಆಯೋಜಕರಲ್ಲಿ ಇರದಿರುವುದು ಬೇಸರದ ಸಂಗತಿ.  "ನಮ್ಮ ಮನೆಯಲ್ಲೇ ನಮಗೆ ಬೇಕಾದಷ್ಟು ತಿನ್ನಲು ಊಟ ಇರುವಾಗ ಬೇರೆಯವರ ಎಂಜಲನ್ನು ತಿನ್ನುವ ಬುದ್ದಿ" ಇವರಿಗೆ ಏಕೆ ಬಂದಿದಿಯೋ ನಾ ಕಾಣೆ? ಜೊತೆಗೆ ಆ ಎಂಜಲನ್ನು ಉಳಿದವರಿಗೂ ತಿನ್ನಿಸುವ ಕೆಲಸಕ್ಕೆ ಯಾರ ಕ್ಕುಮ್ಮಕ್ಕು ಇದೆಯೋ ದೇವರೇ ಬಲ್ಲ. ಇದೆನ್ನಲ್ಲಾ ಕಣ್ಣಾರೆ ಕಂಡು, ಕಿವಿಯಾರೆ ಕೇಳಿಸಿಕೊಂಡು, ಕೈ ಕಟ್ಟಿ - ಬಾಯಿಮುಚ್ಚಿ ಕುಲಿತುಕೊಳ್ಳುವ ಅಭಿಮಾನ ಶೂನ್ಯ ಪ್ರಜೆಯಾಗಲು ನನಗೆ ಇಷ್ಟವಿಲ್ಲ, ಈ ಎಲ್ಲಾ ಅವ್ಯವಸ್ಥೆಗಳಿಗೆ ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ ಕಾರಣರಾದವರಿಗೆ ನನ್ನ ಧಿಕ್ಕಾರವಿದೆ, ಇನ್ನಾದರೂ ದಸರಾ ಸಂಪೂರ್ಣ ನಾಡಹಬ್ಬ ಆಗಬೇಕೆಂಬ ಒತ್ತಯವಿದೆ. ಸಾಮಾನ್ಯ ಹಾಗು ಸ್ವಾಭಿಮಾನಿ ಕನ್ನಡಿಗನಾಗಿ ನನಗೆ 'ಇನ್ನೊಬ್ಬರ' ಹಾಗೆ ಎಂಜಲು ತಿನ್ನುವ ಆಸೆ ಇಲ್ಲ ನಮ್ಮ ಹಬ್ಬಕ್ಕೆ ನಮ್ಮ ಮನೆಯ ಅಡುಗೆಯೇ ನಮಗೆ ಸಾಕಷ್ಟಿದೆ, ಬರುವ ಅತಿಥಿಗಳಿಗೂ ಬಡಿಸುವಷ್ಟು ಉಳಿದಿದೆ.