ಸೋಮವಾರ, ಡಿಸೆಂಬರ್ 12, 2011

ಕನ್ನಡ ಪ್ರಭ ಮತ್ತು ನನ್ನ ಓಲೆ

ಈ ವರ್ಷದ ನವೆಂಬರ್ ೧ ರಂದು ಕನ್ನಡ ಪ್ರಭ ಪತ್ರಿಕೆಯಲ್ಲಿ ಹಿಂದಿಯನ್ನು ರಾಷ್ಟ್ರಭಾಷೆ ಎಂಬ ಉಲ್ಲೇಖದ ಲೇಖನಕ್ಕೆ ಪ್ರತಿಕ್ರಿಯೆ ನೀಡಲಾಗಿತ್ತು, ಅದಕ್ಕೆ ಉತ್ತರವಾಗಿ ಸಂಪಾದಕರು ಕೂಡ ತಮ್ಮ ನಿಲುವನ್ನು ನವೆಂಬರ್ ೩ ರ ಪತ್ರಿಕೆಯಲ್ಲಿ ಪ್ರಕಟಿಸಿದ್ದರು.
ಅವರ ನಿಲುವಿಗೆ ಮತ್ತೊಮ್ಮೆ ನಾನು ಪ್ರತ್ತ್ಯುತ್ತರ ನೀಡಿದ್ದೆ ಆದರೆ ಆ ಪ್ರತ್ತ್ಯುತ್ತರಕ್ಕೆ ಇಂದಿನವರೆಗೂ ಮಾರುತ್ತರವಿಲ್ಲ!!! ಆ ಎಲ್ಲ ಪತ್ರಗಳನ್ನು ಇಲ್ಲಿ ನೀಡಿದ್ದೇನೆ, ನೀವೂ ಓದಿ....


ಸಂಪಾದಕರ ಮೇಲಿನ ಉತ್ತರಕ್ಕೆ ನನ್ನ ಪ್ರತ್ತ್ಯುತ್ತರ:

ನೆಲ್ಮೆಯ ಸಂಪಾದಕರೆ,
ನವೆಂಬರ್ ೧ ರ ಪತ್ರಿಕೆಯಲ್ಲಿ ಪ್ರಕಟವಾದ ವಿಷಯದ ಮೇಲೆ ನನ್ನ ಅನಿಸಿಕೆಗೆ ನೀವು ನವೆಂಬರ್ ೩ ರಂದು 'ತಪ್ಪಾಯ್ತು ತಿದ್ಕೊತಿವಿ' ವಿಭಾಗದಲ್ಲಿ ನಿಮ್ಮ ಉತ್ತರವನ್ನು ನೀಡಿದ್ದೀರಿ (ಪ್ರತಿಯನ್ನು ಲಗತಿಸಿದ್ದೇನೆ). ಇದರ ವಿಷಯವಾಗಿ ನಾನು ನನ್ನ ಅನಿಸಿಕೆಯನ್ನು ಮತ್ತೊಮ್ಮೆ ನಿಮ್ಮ ಬಳಿ ಹಂಚಿಕೊಳ್ಳಬೇಕೆಂದು ಬಹಳ ಹಿಂದೆಯೇ ಆಲೋಚಿಸಿದ್ದೆ ಆದರೆ ಹಲವು ವೈಯಕ್ತಿಕ ಕಾರಣಗಳಿಂದಾಗಿ ನಿಮಗೆ ಉತ್ತರ ಬರೆಯಲು ಕಾಲಾವಕಾಶ ದೊರೆಯಲಿಲ್ಲ. ತಡವಾದರೂ ತೊಂದರೆಯಿಲ್ಲ ಎಂದು ನಿಮ್ಮ ಉತ್ತರಕ್ಕೆ ನನ್ನ ಅಭಿಪ್ರಾಯಗಳನ್ನು ಬರೆದಿದ್ದೇನೆ.
ಮೊದಲನೆಯದಾಗಿ, 'ಆಡಳಿತ ಭಾಷೆಯಾದ ಹಿಂದಿಯನ್ನು ರಾಷ್ಟ್ರ ಭಾಷೆಯೆಂದು ಕರೆಯವುದರಲ್ಲಿ ತಪ್ಪಿಲ್ಲ ಎಂದು ಮಂಡಿಸಿದ್ದೀರಿ', ಸಂವಿಧಾನ ರಚನೆಯಾದ ಸಂದರ್ಭದಲ್ಲಿ ಹಿಂದಿಯ ಜೊತೆ ಜೊತೆ ಮೊದಲ ೧೫ ವರ್ಷಕ್ಕೆ ಇಂಗ್ಲೀಷನ್ನು ಆಡಳಿತ ಭಾಷೆಯಾಗಿ ಬಳಸ ಬಹುದೆಂದು ಉಲ್ಲೇಖವಾಗಿದೆ ಎಂಬ ವಿಷಯ ನನಗೆ ನನ್ನ  ಸಮಾಜಶಾಸ್ತ್ರದ ಅಧ್ಯಾಪಕರು ನನಗೆ ಪ್ರೌಢಶಾಲೆಯಲ್ಲಿ ಹೇಳಿಕೊಟ್ಟ ವಿಷಯ ( ೧೯೬೫ರಲ್ಲಿ ಇಂಗ್ಲಿಷ್ ಮೇಲಿನ ನಿರ್ಭಂಧವನ್ನು ತೆಗೆದು ಹಾಕಿದ್ದಾರೆ), ಹಾಗಾದರೆ ನಾವು ಇಂಗ್ಲೀಷನ್ನು ರಾಷ್ಟ್ರಭಾಷೆ ಎಂದು ಪರಿಗಣಿಸ ಬಹುದಲ್ಲವೇ? ನೇವು ನಿಮ್ಮ ಉತ್ತರದಲ್ಲಿ ತಿಳಿಸಿದಂತೆ ಸಂವಿಧಾನದ ೭೧ನೆ ತಿದ್ದುಪಡಿಯ ೮ನೆ ಪರಿಚ್ಹೇದದಲ್ಲಿ ೧೮ ಭಾಷೆಗಳನ್ನು ಗುರಿತಸಲಾಗಿದೆ, ಅವು ಕೂಡ ನಮ್ಮ ರಾಷ್ಟ್ರದ ಭಾಷೆಗಳಲ್ಲವೇ, ಅವನ್ನು ಕೂಡ ನಾವು ರಾಷ್ಟ್ರ ಭಾಷೆ ಅನ್ನ ಬಹುದಲ್ಲವೇ? ಕೇವಲ ಅತಿ ಹೆಚ್ಚು ಮಾತನಾಡುವ ಜನರಿದ್ದಾರೆ ಎಂದ ಮಾತ್ರಕ್ಕೆ ನಾವು ಒಂದು ಭಾಷೆಯನ್ನ ರಾಷ್ಟ್ರ ಭಾಷೆ ಎಂದರೆ ಉಳಿದ ಭಾಷಿಕರ ಜೊತೆ ಸಮಾನತೆಯನ್ನು ಹೇಗೆ ಕಾಪಾಡಲು ಸಾಧ್ಯ? ರಾಷ್ಟ್ರ ಭಾಷೆ ಹಾಗು ಆಡಳಿತ ಭಾಷೆಗೂ ಇರುವ ವ್ಯತ್ಯಾಸವನ್ನು ಒಂದು ಪತ್ರಿಕೆಯ ಸಂಪಾದಕರಾದ ನಿಮಗೆ ಸಾಮಾನ್ಯ ಓದುಗನಾದ ನಾನು ತಿಳಿಸಿಕೊಡುವ ಅವಶ್ಯಕತೆ ಇಲ್ಲ ಅಂದು ಭಾವಿಸಿದ್ದೇನೆ.
ಎರಡನೆಯದು, 'ಚಿಕ್ಕವರಿರುವಾಗ ಪಟ್ಯದಲ್ಲಿ ಹಿಂದಿಯನ್ನು ರಾಷ್ಟ್ರ ಭಾಷೆ ಎಂದಿದೆ, ನಾವು ಸಾಮಾನ್ಯವಾಗಿ ಯಾರನ್ನು ಕೇಳಿದರು ಹಿಂದಿ ರಾಷ್ಟ್ರ ಭಾಷೆ ಎಂದು ಹೇಳುತ್ತಾರೆ' ಎಂದು ಹೇಳಿದ್ದೀರಿ, ಸಾಮಾನ್ಯವಾಗಿ ಕನ್ನಡಿಗರಲ್ಲಿ ಹಿಂದಿ ರಾಷ್ಟ್ರ ಭಾಷೆ ಎಂದು ತಪ್ಪು ತಿಳುವಳಿಕೆ ಇರುವುದು ಸತ್ಯ ಆದರೆ ನನಗೆ ತಿಳಿದ ಮಟ್ಟಿಗೆ ಇತ್ತೀಚಿಗೆ ಕನ್ನಡಿಗರು ಈ ವಿಷಯವಾಗಿ ಎಚ್ಚೆತ್ತು ಕೊಳ್ಳುತ್ತಿರುವುದು ಕೂಡ ಅಷ್ಟೇ ಸತ್ಯ. ನನಗೆ ತಿಳಿದ ಮಟ್ಟಿಗೆ ನಾನು ಯಾವ ಪಾಟದಲ್ಲೂ ಈ ರೀತಿ ಓದಿಲ್ಲ, ಹಾಗೇನಾದರೂ ಇದ್ದಲ್ಲಿ ನನಗೆ ಅದರ ಬಗ್ಗೆ ದಯವಿಟ್ಟು ತಿಳಿಸಿ. ನಮಗೆ ಚಿಕ್ಕಂದಿನಿಂದ ಯಾರಾದರು ಕತ್ತೆಯನ್ನು ಕುದುರೆ ಎಂದು ಹೇಳಿಕೊಟ್ಟ ತಕ್ಷಣ ಕತ್ತೆ ಎಂದಾದರು ಕುದುರೆ ಆಗವುದೇ? ದೊಡ್ಡವರಾದ ಮೇಲಾದರೂ ನಮಗೆ ಬುದ್ದಿ ಬರಬೇಡವೇ?
ಮೂರನೆಯದು, 'ಹಿಂದಿಯನ್ನು ರಾಷ್ಟ್ರ ಭಾಷೆ ಎಂದಾಗ ಉಳಿದ ಭಾಷೆಗಳಿಗೆ ಎಂದು ಹಾನಿ ಎಂದು ಕೇಳಿದ್ದೀರಾ.' ಇದು ಸ್ವಲ್ಪ ಗಂಭೀರ ವಿಷಯ ಎಂದು ನನ್ನ ಅನಿಸಿಕೆ, ಇತ್ತೆಚಿಗಷ್ಟೇ ನಿಮ್ಮದೋ ಅಥವಾ ಯಾವ್ದೋ ಒಂದು ಪತ್ರಿಕೆಯಲ್ಲಿ ಪ್ರಕಟವಾದ ಒಂದು ವಿಷಯ ಏನೆಂದರೆ ಸುಮಾರು ೬೫ ಲಕ್ಷ ಕೇಂದ್ರ ಸರ್ಕಾರೀ ಕೆಲಸಗಳಲ್ಲಿ ಕನ್ನಡಿಗರ ಸಂಖ್ಯೆ ಕೇವಲ ಸುಮರ ೬೫ ಸಾವಿರಗಳಷ್ಟು ಎಂದು, ಇಷ್ಟು ಕಡಿಮೆ ಸಂಖ್ಯೆಗೆ ಕಾರಣ ಇತರೆ ಭಾಷಿಕರಿಗೆ ತಮ್ಮ ಮಾತೃ ಭಾಷೆಯಲ್ಲಿ ನೇಮಕಾತಿ ಪರೀಕ್ಷೆಗಳನ್ನು ಬರೆಯುವ ಅವಕಾಶ ಇಲ್ಲದಿರುವುದು. ಹಿಂದಿಯನ್ನು ಮಾತೃಭಾಷೆಯಾಗಿ ಹೊಂದಿರುವ ಒಬ್ಬ ಭಾರತೀಯ ಕೇಂದ್ರ ಸರ್ಕಾರೀ ನೇಮಕಾತಿ ಪರೀಕ್ಷೆಗಳನ್ನು ತನ್ನ ಮಾತೃ ಭಾಷೆಯಲ್ಲೇ ಬರೆದು ಕೆಲಸ ಗಿಟ್ಟಿಸ ಬಹುದು ಆದರೆ ಉಳಿದ ಭಾಷಿಕರು ಮಾತ್ರ ಒಂದು ಭಾಷೆಯನ್ನು ಕಲಿತು ಆ ಭಾಷೆಯಲ್ಲಿ ಪರೀಕ್ಷೆ ಸ್ಪರ್ಧಿಸ ಬೇಕು, ಮಾತೃ ಭಾಷೆಯಲ್ಲಿ ಕಲಿತು ಪರೀಕ್ಷೆ ಬರೆಯುವುದಕ್ಕೂ ಹೊಸ ಭಾಷೆಯನ್ನು ಕಲಿತು ಬರೆಯುವುದಕ್ಕೂ ಇರುವ ವ್ಯತ್ಯಾಸ ನನಗಿಂತ ನಿಮಗೆ ಚೆನ್ನಾಗಿ ಅರಿವಿದೆ. ಹಾಗಾದರೆ ಹಿಂದಿಯನ್ನು ಗೊತ್ತಿದ್ದರೆ ಮಾತ್ರ ನಾನೊಬ್ಬ ಭಾರತೀಯನೇ? ಇತರೆ ಭಾಷಿಕರಿಗೆ ಸಮಾನ ಹಕ್ಕು ದೊರಕಿದೆಯೇ? ನಾವು ತೆರಿಗೆ ಪಾವತಿಸುವಾಗ ಹಿಂದಿ ಭಾಷಿಕರಷ್ಟೇ ಪಾವತಿಸುತ್ತೇವೆ ಹಾಗಿದ್ದರು ಈ ತಾರತಮ್ಯವೇಕೆ?
ಇದು ಕೇವಲ ಒಂದು ಉದಾಹರಣೆಯಷ್ಟೇ ಇಂತಹ ಅನೇಕ ವಿಷಯಗಳಿಂದ ಹಿಂದಿಯೇತರರಿಗೆ ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ. ಕೇವಲ ಆಡಳಿತ ಭಾಷೆ ಎಂದು ಇಟ್ಟುಕೊಂಡು ಇಷ್ಟೆಲ್ಲಾ ಅನ್ಯಾಯವಾದಾಗ ಇನ್ನು ರಾಷ್ಟ್ರ ಭಾಷೆಯಾದರೆ ಗತಿ?
ನಾನು ಯಾವುದೇ ಭಾಷೆಯ ವಿರೋಧಿಯಲ್ಲ, ನನ್ನ ಭಾಷೆಯನ್ನು ಪ್ರೀತಿಸುತ್ತೇನೆ ಇತರ ಭಾಷೆಗಳನ್ನು ಗೌರವಿಸುತ್ತೇನೆ. ನೀವೇ ಹೇಳಿದ ಹಾಗೆ, ಸ್ವತಂತ್ರ ಭಾರತದಲ್ಲಿ ಯಾರು ಯಾವ ಭಾಷೆಯನ್ನು ಬೇಕಾದರೂ ಬಳಸಬಹುದು, ಆದರೆ ಇನ್ನೊಂದು ಭಾಷೆಯನ್ನು ಸುಖಾಸುಮ್ಮನೆ ಹೇರುವ ಹಕ್ಕು ಯಾರಿಗೂ ಇಲ್ಲ ಎಂದು ಭಾವಿಸುತ್ತೇನೆ. ಭಾರತ ಒಂದು ಒಕ್ಕೂಟ ವ್ಯವಸ್ಥೆ, ಆಯಾ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಭಾಷೆಯೇ ಸಾರ್ವಭೌಮ, ಕೇಂದ್ರದ ವಿಚಾರಕ್ಕೆ ಬಂದರೆ ಅಲ್ಲಿ ಎಲ್ಲ ಭಾಷೆಗಳಿಗೂ ಹಾಗು ಭಾಷಿಕರಿಗೂ ಸಮಾನತೆ ಇರಬೇಕು.
ಇದನ್ನೆಲ್ಲಾ ತಿಳಿದ ನೀವು ಕೂಡ ಒಂದು ಭಾಷೆಯನ್ನು ಯಾವ ಖರ್ಚಿಲ್ಲದೆ ರಾಷ್ಟ್ರ ಭಾಷೆ ಎಂದು ಬಿಂಬಿಸಿ ನಿಮಗೆ ಗೊತ್ತಿಲ್ಲದೇ ಕನ್ನಡಕ್ಕೆ ಕೊಡಲಿ ಪೆಟ್ಟು ನೀಡುವುದು ಎಷ್ಟು ಸರಿ? ಮಾದ್ಯಮದವರಾದ ನೀವು ಜನರ ಅಭಿಪ್ರಾಯಗಳನ್ನು ಬದಲಿಸುವ ಹಾಗು ಗಟ್ಟಿಗೊಳಿಸುವ ಶಕ್ತಿಯನ್ನು ಹೊಂದಿರುವವರು, ಹೀಗೆ ತಪ್ಪು ಮಾಹಿತಿಗಳ ಮೂಲಕ ಜನರಿಗೆ ತಪ್ಪು ಸಂದೇಶ ರವಾನಿಸುವ ಕೆಲಸ ಮಾಡಬೇಡಿ. ಪರಭಾಷೆ ಧಾಳಿಯಿಂದ ಈಗ ಕನ್ನಡ ಶಾಲೆಗಳನ್ನು ಮುಚ್ಚಿ ಎಂದು ಸರ್ಕಾರ ಹೇಳುತ್ತಿದೆ ಇದು ಹೀಗೆ ಮುಂದುವರಿದರೆ ಒಂದು ದಿನ ಕನ್ನಡ ಪತ್ರಿಕೆಗಳನ್ನು ಮುಚ್ಚಿ ಎಂದು ಹೇಳುತ್ತದೆ, ಆಗ ಮುಚ್ಚಲಿರುವ ಕನ್ನಡ ಪತ್ರಿಕೆ ನಿಮ್ಮದಾಗದಿರಲಿ ಎಂಬುದೇ ನನ್ನ ಆಸೆ.
ಇಂತಿ ನಿಮ್ಮವ,
ರತೀಶ 

3 ಕಾಮೆಂಟ್‌ಗಳು:

  1. ಒಂದು ಕಾಲಕ್ಕೆ ಕನ್ನಡದ ಬಗ್ಗೆ ಮೊದಲು ಧ್ವನಿ ಎತ್ತುತ್ತಿದ್ದ ಪತ್ರಿಕೆ ಕನ್ನಡಪ್ರಭ. ಇಂಥ ಪತ್ರಿಕೆಯಲ್ಲಿ ಇಂಥ ಪ್ರತಿಕ್ರಿಯೆಯೇ.. ಅಬ್ಬಾ ರಾಷ್ಟ್ರಭಾಷೆಯೇ!!!!!!!!!
    ಸಾತ್ವಿಕ್

    ಪ್ರತ್ಯುತ್ತರಅಳಿಸಿ
  2. ತಪ್ಪನ್ನು ತಿದ್ಗೊಳ್ಳೊ ರೀತೀನಾ ಇದು. ಎಷ್ಟೊಂದು ದುರಹಂಕಾರ, ತಾತ್ಸಾರ, ಅಸಡ್ಡೆ, ಇವರು ನಿಜವಾಗೂ ಕನ್ನಡ ತಾಯಿ ಮಗನಾ ಅಂತ ಅನುಮಾನ ಬರುತ್ತೆ?
    ಈವಯ್ಯ ಸ್ವಲ್ಪ ದಿನದ ಕೆಳಗೆ ಶ್ರೀಲಂಕಾ ಪ್ರವಾಸದಿಂದ ಬಂದು, ನನಗೆ ಅದು ಬೇರೆ ದೇಶ ಅಂತ ಅನ್ನಿಸಲೆ ಇಲ್ಲ, ಯಾಕಂದರೆ ಅಲ್ಲಿ ಎಲ್ಲಾರೂ ನಮ್ಮ ಭಾಷೆ ಮಾತಾಡ್ತಾ ಇದ್ದರು ಅಂತ ಹೇಳಿದ್ದು ಕೇಳಿ ನನಗೆ ಅಲ್ಲಿರೋರಿಗೆ ಕನ್ನಡ ಬರ್ತಿತ್ತಾ ಅಂತ ಖುಷಿ, ಆಶ್ಛರ್ಯ ಎರಡೂ ಆಯ್ತು. ಆದರೆ ಈ ಮನುಷ್ಯ ಹಿಂದಿ ಬಗ್ಗೆ ಹೇಳ್ತಾ ಇದ್ದದ್ದು ನೋಡಿದ್ರೆ ಇವರೂರು ಯಾವುದು ಅಂತಲೇ ಅನುಮಾನ ಬರುತ್ತೆ
    - ಹರಿಹರ

    ಪ್ರತ್ಯುತ್ತರಅಳಿಸಿ