ಪದಕಟ್ಟು

******************************************************************************************

ಅಪ್ಪಟ ಒಲವಿನ ಜೋಡಿಗಳಿಗಾಗಿ ಬರೆದ ಕೆಲವು ಸಾಲುಗಳು. ನಾಲ್ಕು ದಿನದ ಹರಟೆಗೆಂದು ಪ್ರೀತಿಸದೆ ಬಾಳಿನ ಕೊನೆವರೆಗು ಒಟ್ಟಿಗೆ ಇರುವ ಬಯಕೆಯಿಂದ ಪ್ರೀತಿಸುವ ನಿಜವಾದ ಜೋಡಿಗಳಿಗಾಗಿ ಬರೆದ್ ಸಾಲುಗಳು.


ನೋಡಿ, ಹೀಗಿದೆ ಒಲವ ಜೋಡಿ 

ಕಣ್ ನೋಟ ಎಡತಾಕಿ ನಗು ಎದುರು ಬದರಾಗಿ 
ಎದೆಗೂಡು ನುಡಿದಿದೆ ಪಿಸುಮಾತಿನಲ್ಲಿ  
ಅಡಿಗಡಿಗೆ ಜೊತೆಯಿರುವ ತುಡಿತಗಳು ಹೆಚ್ಚಾಗಿ 
ಕಟ್ಟು ಬಿದ್ದವು ಇವು ಒಲವೆಂಬ ನಂಟಲ್ಲಿ। 

ಕಚಗುಳಿಯ ಮಾತುಗಳು ಹಸಿಬಿಸಿಯ ಮುತ್ತುಗಳು 
ಹಬ್ಬವಿದೊ ನಡೆಯುತಿದೆ ಹರೆಯದ ಬಯಕೆಗೆ 
ಅವನಿಗಾಗಿಯೇ ನಾನು ನನಗಾಗಿಯೇ ಅವಳು 
ಬರೆಯದೊಪ್ಪಂದವಿದೆ ಬಿಡಿಸದ ಬೆಸುಗೆಗೆ । 

ಬೆಚ್ಚನೆಯ ಇಳಿಹೊತ್ತು, ಮೆಚ್ಚುಗೆಯ ಕಯ್ ತುತ್ತು 
ತುಸುಕೋಪ, ಮತ್ತೆಲ್ಲೋ ಅಪರೂಪದ ತಪ್ಪು 
ಹೊಂದಿಕೆಯ ಅಂದಕ್ಕೆ ಜಗಳ ಮರೆಯಾಗಿತ್ತು 
ಇರಬೇಕಿವೆ ಇವು ಬಾಳ ಸಿಹಿ ಕಾರ ಹುಳಿ ಉಪ್ಪು।  

ಮಂದಿಗಂಟಿದೆ ಇಂದು ತಳಿ-ಬಳಿಯ ಜಡ್ಡುಗಳು
ಇದರ ಹುಟ್ಟಡಗಿಸಲೆಂದೆ ಹುಟ್ಟಿದೆಯೊ ಒಲವು 
ಈ ಕಾಳಗದಲ್ಲೀಗ ಜೋಡಿಗಳೆ ಕಟ್ಟಾಳು
ಮಡಿದಿಹವು ಕೆಲವು ಮೆರೆದಿಹವು ಹಲವು । 

ಒಲವು ಚಿಗುರಾಗಿಹುದು ವಯಸು ಹಣ್ಣಾದರು 
ನಂಬುಗೆಯ ತಾಯ್ ಬೇರು ಅಲುಗಾಡದಿರಲು 
ಉಸಿರುರುವವರೆಗೂ ಹಸಿರಾಗಿ ಒಲವಿದ್ದರು
ಹೆಸರ್ ಹೇಳುವಂತಿಹುದು ಉಸಿರಾದಮೇಲು । 

*********************************************************************************************
||ನಗು||
ನನ್ನವರದೊಂದೇ ತೊಂದರೆ ಅದು ನಾ ನಗುತಿರಬೇಕು
ಏನಾದರು ಆಗಲಿ ಏನಾದರು ಹೋಗಲಿ ಈ ಮೋರೆ ಮಾತ್ರ ನಗಲಿ
ಅದು ಅಂದು ನಗುತ್ತಿತ್ತು ಇಂದು ನಗುತಿದೆ ಆದರೆ ಕಾರಣಗಳು ಬೇರೆ

ಅಂದು ನಕ್ಕಿತ್ತು ನಲಿವ ಮೂಟೆಗಳ ಹೊತ್ತು
ತನ್ನವರ, ತನ್ನೊಳಗಿನ ಚಿಕ್ಕ ಪುಟ್ಟ ನೆಪಗಳ ಹುಡುಕಿ,
ಕೆಲವೊಮ್ಮೆ ಕಾರಣವೇ ಬೇಡಿತ್ತು, ನೆಮ್ಮದಿಯೇ ಸಾಕಿತ್ತು.
ಎದೆಯೊಳಗೆ ನಗುವಿತ್ತು, ಹೊರ ಕೆನ್ನೆ ಬಿರಿದಿತ್ತು
ಬಿಡಲಾಗದೆ ಹಿಡಿದು ಅದುಮಿಟ್ಟರು ಕೂಡ
ಕಣ್ಣರಳಿ ಚಿಮ್ಮಿತ್ತು ನಗು ಚಿಲುಮೆ ಮೋರೆಯಲಿ

ಇಂದೂ ನಗುತಿದೆ ನೋವು ಕಾಟಗಳ ಹೊತ್ತು
ಮುಪ್ಪನಪ್ಪದೆ ಸಾವನಪ್ಪಿದ ಎದೆಯೊಳಗಿನ ಎಳೆಯೊಲವ ಕಂಡು,
ಬದುಕ ತಿರುವುಗಳ ಕಂಡು, ಮರೆತ ನಲಿವುಗಳ ಕಂಡು.
ಯಾರೋ ಎದೆಯೊಳಗೆ ನೆನಪ ಒನಕೆಯ ಹಿಡಿದು,
ಚಿಂತೆ ಬತ್ತವ ಕುಟ್ಟಿ ನೋವಿನಕ್ಕಿಯ ಚೆಲ್ಲುತಿಹರು
ಅದೋ ನೋಡು, ಈ ಮೋರೆ ನಗುತಿದೆ ನನ್ನ ಹೀಯ್ಯಾಳಿಸಿ

ಬಾಳ ಕಾಳಗವ ಸೋತಿರುವೆ ತಲೆಬಾಗಿ ಕುಳಿತಿರುವೆ
ಕಯ್ ಲ್ಲಿನ ಕತ್ತಿಯನು ಹೊತ್ತಿಗೆ ಕೊಟ್ಟಿರುವೆ
ಹಳೆ ನೆನಪ ನೆತ್ತರನು ತೊಳೆದು ತಿರುಗಿ ಕತ್ತಿಯನು ಕೊಟ್ಟಲ್ಲಿ
ಹೊಸ ಹೆಜ್ಜೆಯನ್ನಿಕ್ಕಿ ಮಟ್ಟ ಹಾಕುವೆನು ನೋವುಗಳ
ಆದರೆ ಹೊತ್ತಿಗೆ ನನ್ನ ಕಾಲನ್ನೆ ಕಡಿಯೊ ಹುನ್ನಾರವಿದೆ!
ಮತ್ತೊಮ್ಮೆ ನೋಡು, ಈ ಮೋರೆ ನಗುತಿದೆ ಕಯ್ ಲಾಗದವನೆಂದೆನಿಸಿ|

 ***************************************************************************************
ಹುಡುಗ ತುಂಬ ಬಯಸುವ ಹೆಣ್ಣು ಅವನನ್ನು ಬಿಟ್ಟು ಕೆಲ ದಿನಗಳಿಗೆ ಅಂತ ಬೇರೆ ಕಡೆಗೆ ಹೋದರೆ ಪಾಪ ಆ ಹುಡುಗನ ಗತಿ ಹೇಗಿರುತ್ತೆ ಆಲ್ವಾ? ಅದು ಹೆಂಡತಿಯು ಆಗಿರ ಬಹುದು ಗೆಳತಿಯು ಇರಬಹುದು.  ನನಗೇನು ಇದರ ಅನುಬವ ಇಲ್ಲ, ಆದರೆ ಉಹೆ ಮಾಡ್ಕೊಂಡು ಗೀಚೋಕೆ ದುಡ್ಡೇನು ಕೊಡೋದು ಬೇಡ ಆಲ್ವಾ ಅದಕ್ಕೆ ಬರೆದೆ. ಬರೆಯುವ ಮುಂಚೆ ಒಂದು ಗುರಿ ಇತ್ತು ಹುಡುಗನ ಅನಿಸಿಕೆಗಳನ್ನ ತೀರ ಗಟ್ಟಿಯಾಗಿ, ಒತ್ತರವಾಗಿ ಹೇಳುವ ಬದಲು ತುಂಬ ತೆಳುವಾಗಿ ಹೇಳಬೇಕು ಅಂತ. ಅನುಬವಕ್ಕೆ ಮಿತಿಯುಂಟು ಆದರೆ ಊಹೆಗೆ ಮಿತಿಯಿಲ್ಲ ನೋಡಿ.  ಬಿಟ್ಟರೆ ನರಕ ಯಾತನೆಯನ್ನು ನರಕವೇ ಓದಿ ನರಕಪಡುವಂತೆ ಈ ಊಹೆ ಬರೆಸಿ ಬಿಡುತ್ತದೆ!   
ನನಗೆ ಬೆರಗು ಆಗುವಂತಹ ಇನ್ನೊಂದು ಸುದ್ದಿ ನಡೆಯಿತಿಲ್ಲಿ. ಬಳಸಿರುವ ಎಲ್ಲ ಪದಗಳು ಕನ್ನಡದ ಬೇರಿನ ಪದಗಳು!!! ಈ ಗುರಿಯನ್ನು ನಾನು ಹೊಂದಿರಲಿಲ್ಲ ಆದರು ನಡೆದು ಹೊಗಿದೆ. 

ಗೆಳತಿ, ನೀ ಇಲ್ಲದ ಹೊತ್ತು. 
     
ನೀ ದೂರ ಹೋದಾಗ ಹಾಕಲು ಮೆಲುಕು 
ಬಿಟ್ಟು ಹೋಗಿರುವೆಯಾ ಇಲ್ಲಿ ನಿನ್ನೆನಪ ಗುಟುಕು?
ಅಗಲಿಕೆಯ ಚಿಂತೆಗೆ ಒಳ ಹರುಕು ಮುರುಕು 
ನನ್ನೊಡತಿ, ಸಾಕು ನೀ ಹೋಗಿದ್ದು ಹಿಂತಿರುಗಿ ಬಾ ಚುರುಕು

ಹೊತ್ತಿಲ್ಲ ಗೊತ್ತಿಲ್ಲ ಬರುತಿರುವೆ ಕನಸಿನಲಿ 
ಮುತ್ತಿಟ್ಟು ಮರೆಯಾದೆ ಸಿಗದಂತೆ ನಸುಕಿನಲಿ 
ಮೋರೆಯ ಬಳಿ ಬಾಯಿ ತರುತಿರುವೆ ಮಬ್ಬಿನಲಿ  
ಹೆಣ್ಣೇ, ಮಿಡುಕೆದ್ದೆ ನೀ ಕೆನ್ನೆ ಕಚ್ಚುವ ಮುನ್ನದಲಿ 

ತಿರುಗುವುದ ಮರೆತಿದೆಯ ಈ ನೆಲವು ಅನಿಸುತಿದೆ 
ನೊಗ ಹೊತ್ತ ಎತ್ತಂತೆ ಈ ಹೊತ್ತು ಸಾಗುತಿದೆ 
ದೂರವನು ಜರಿಯುತ್ತ ನಲಿವಿದೋ ಕೊರಗುತಿದೆ 
ಹುಡುಗಿ, ಈ ಪಾಡು ನನ ಬಿಟ್ಟು ಇನ್ನಾರಿಗು ತಿಳಿಯದೆ 

ಮಂಜಿರುವ ಮುಂಜಾವು ಉಲ್ಲಾಸ ಎನಿಸದು 
ಕೆಮ್ಮುಗಿಲ ನೋಡುತಿರೆ ಕರಿಮೋಡ ಕಂಡಿಹುದು
ಎಳೆ ಬಿಸಿಲ ತಿಳಿ ಹಗಲು ಮಬ್ಬಾಗಿ ಹೋಗಿಹುದು 
ನನ್ನುಸಿರೆ, ಕೇಳಿಸುವ ಕಿವಿಗಳಿಗೆ ಈಗ ಕಿರುಚಿದರು ಕೇಳಿಸದು 

ಕಣ್ತುಂಬ ನೋಡುವ ತವಕವನು ತಾಳೆನು 
ಹತ್ತಿ ಬರಲೇನು ಕೈಗೆ ಸಿಕ್ಕಂತ ಗಾಡಿಯನು 
ನಡುವಿರುಳ ಮುನ್ನವೇ ನಿನ ಮನೆಯ ಸೇರುವೆನು 
ಒಲವೆ, ಕಣ್ತುಂಬಿಸಿ ಕೊಂಡು ಕೂಡಲೇ ಹೊರಡುವೆನು

ಯಾರಾರು ಕೂಗಿದರೆ, ಅಲೆಯುಲಿಯು ಅಲುಗಿದರೆ 
ನೀ ಕರೆದೆ ಎಂದೆನಿಸಿ ಚಡಪಡಿಸಿ ನೋಡುತಿರೆ 
ತಂಗಾಳಿ ನಸುನಕ್ಕು ಎನಗೆ ನಿನ ಹಿತವ ತಿಳಿಸುತಿರೆ 
ಗೆಳತಿ, ತಲ್ಲಣವು ತುಸುಮಾಸಿ ಚಿಂತೆಯಾಗಿದೆ ಮರೆ 

ನಾ, ಬೀಳ್ಕೊಟ್ಟು ಬಂದಲ್ಲೇ ನಿನ್ನೆದುರು ನೋಡುವವ 
ನೀ ಬಳಿಯಲಿರದಾಗ ನಿನ್ನನ್ನೆ ನೆನೆಯುವವ 
ನಿನಗೆಂದೆ ಒಲವಿನ ಓಲೆಯನು ಬರೆಯುವವ 
ಇಂತಿ ನಿನ್ನ, ನಿನಗಾಗಿ ಸಾಯುವ ನಿನಗೆಂದೆ ಬದುಕಿರುವವ |
****************************************************************************************
ಯಾವಾಗಲು ನಮಗೆ ಹೀಗೆ ಆಗುವುದು, ನಾವು ಅಂದುಕೊಂಡಂತೆ ನಮ್ಮ ಬಾಳು ಸಾಗದು. ಅದರಲ್ಲು ಒಲವಿನ ಸುದ್ದಿಯಲ್ಲಿ ಅದು ಬಹಳಶ್ಟು ನಿಜ. ಮನಸಿಟ್ಟು ಪ್ರೀತಿಸಿದ ಮೇಲೆ ಓಲ್ಲೆ ಎಂದ ಹುಡಿಗಿಯ ನೆನಪಿನಲ್ಲೆ ಇಂದಿಗೂ ಬದುಕನ್ನು ಸವೆಸುತ್ತಿರುವ ಎದೆಯೊಡೆದ ಪ್ರೇಮಿಗಳಿಗಾಗಿ ಬರೆದ ಕೆಲವು ಸಾಲುಗಳು.

ಒಲವಾಯ್ತು ನನಗೆ ಗೊತ್ತಿಲ್ಲ ಹೇಗೆ?

ತಿಂಗಳಿಗೆ ಬೆಳದಿಂಗಳ ಸಾಲ ಕೊಡುವಂತವಳು
ಹೂಗಳಿಗೆ ಪರಿಮಳವ ಹರಡುವಂತವಳು
ಚೆಂದವೇ ಇವಳಂದ ಬಯಸುವಂತಿರುವವಳು
ನಗುವಲ್ಲಿ ಚೆಲುವ ಚೆಲ್ಲಾಡುವಂತವಳು
ಈಕೆ ಕಂಡದ್ದು ಹೀಗೆ, ಜೊಂಪಾಯ್ತು ನನಗೆ, ಗೊತ್ತಿಲ್ಲ ಹೇಗೆ?

ಚಿಟಪಟನೆ ನೆಲಬಡಿವ ಮಳೆಯಂತೆ ಮಾತು
ಮನಸಂತು ಮಗುವನ್ನು ಮೀರಿ ಮೆರೆದಿತ್ತು
ತುಂಬಿದ ಹರೆಯದೊಳು ಬಯಕೆ ನೂರಿತ್ತು
ನಡತೆಯು ಎಡುವದ ಹಾಗೆ ನಡೆಯಿತ್ತು
ಈಕೆ ಇದ್ದದ್ದು ಹೀಗೆ, ಮನಸಾಯ್ತು ನನಗೆ, ಗೊತ್ತಿಲ್ಲ ಹೇಗೆ?

ಪರಿಚಯವು ಮೊದಲಾಗಿ ಒಡನಾಟ ಹೆಚ್ಚಾಗಿ
ನನಗಾರು ಇರಲಿಲ್ಲ ಇದಕ್ಕಿಂತ ಮಿಗಿಲಾಗಿ
ಜೊತೆಗಿರುವ ಹೊತ್ತೆಲ್ಲ ನನಗಂತು ಸಿಹಿಸುಗ್ಗಿ
ಎದೆಬಡಿದು ಬದುಕಿತ್ತು ಬರಿ ಅವಳಿಗಾಗಿ
ಇದು ಆದದ್ದು ಹೀಗೆ, ಒಲವಾಯ್ತು ನನಗೆ, ಗೊತ್ತಿಲ್ಲ ಹೇಗೆ?

ಒಲವುಕ್ಕಿ ಬಂದಿರಲು ಬೇಡಿದೆನು ಬಾಳಿಗೆ
ಒಲ್ಲೆಯೆಂದಳು ತಿರುಗಿ ಕಾರಣವು ಬಗೆಬಗೆ
ಬೆಂಕಿಯೆ ಬಿದ್ದಿತ್ತು ನನ್ನೊಲವ ಅರಮನೆಗೆ
ಅಗುಳಿಯ ಹಾಕಿತ್ತು ಮನಸಿನ ಬಾಗಿಲಿಗೆ
ಒಲವು ಸತ್ತಿದ್ದು ಹೀಗೆ, ಆದರು ಒಲವಿತ್ತು ನನಗೆ, ಗೊತ್ತಿಲ್ಲ ಹೇಗೆ?

ಒಂಟಿ ನಾ ಹೊರಟಿರುವೆ ಗೆಲುವಿರದ ಹಾದಿಯಲಿ
ಹುಡುಕುತ್ತಲೇ ಇರುವೆ ಎಡವಿದ್ದು ನಾನೆಲ್ಲಿ?
ಅಲೆಮಾರಿಯಾಗಿರುವೆ ಒಂಟಿತನದ ಜೊತೆಯಲ್ಲಿ
ಉಸಿರಾಟ ನಡೆದಿದೆ ನನ್ನವಳ ನೆನಪಿನಲಿ
ನಾನಿರುವುದು ಹೀಗೆ, ಇನ್ನು ಒಲವಿದೆಯೊ ನನಗೆ, ಗೊತ್ತಿಲ್ಲ ಹೇಗೆ?

ಮರೆಯವಳೆಂದಿದೆ ಬುದ್ದಿ ಮನಸೆಂದಿದೆ ನೆನೆ
ಬುದ್ದಿಗಾದರು ಚೂರು ಬುದ್ದಿ ಇದ್ದರೆ ತಾನೆ?
ದೇವನಿದ್ದರೆ ನನ್ನ ಮತ್ತೊಮ್ಮೆ ಹುಟ್ಟಿಸುವನೆ?
ಆಗ ಅವಳೊಪ್ಪೊ ಗಂಡು ಆಗಿರ ಬೇಕು ನಾನೆ!
ಬಯಕೆಯಿರುವುದು ಹೀಗೆ, ಮುಂದೆ ಬದುಕಲಿ ಹೇಗೆ? ಗೊತ್ತಿಲ್ಲ ನನಗೆ!

*******************************************************************************

ಹೀಗೊಂದು ಕಚಗುಳಿ ನೀಡುವ ಬಿಸಿ ಬಿಸಿ ಸಾಲುಗಳನ್ನು ಬರೆಯಬೇಕೆಂದು ಬಹುದಿನದ ಬಯಕೆಯಾಗಿತ್ತು, ಕೊನೆಗೂ ಬರೆದಾಯಿತು. ಒಮ್ಮೆ ಓದಿ. ಓದಿ ತಿಳಿದರೆ ತಿಳ್ಕೊಳಿ, ತಿಳಿಯದೆ ಹೋದರೆ ತಲೆ ಕೆರ್ಕೋಳಿ, ಎರೆಡು ಆಗದಿದ್ದರೆ ಹೊದಿಕೆ ಹೊಧ್ಕೊಂಡು ಮಲ್ಕೊಳಿ :)

।। ತುಸು ಬಿಸಿ ಸಾಲುಗಳು ।।

ಮುಂಗುರುಳ ನೇವರಿಸಿ ಹಿಂದೆ ಸರಿಸಿಟ್ಟು  
ತಿಳಿಗೆನ್ನೆ ಜೋಡಿಯ ಬೊಗಸೆಯಲಿ ಅವಿತಿಟ್ಟು
ಸಿಹಿ ಗಲ್ಲ ಇಳಿ ಮೂಗ ತುಸು ಬದಿಗೆ ಒತ್ತಿಟ್ಟು 
ಮಿನುಗುವ ತುಟಿಗಳಿಗೆ ಬಿಸಿ ಮುತ್ತನಿಡಲೇ?

ಎನ್ನೆದೆಗೆ ನಿನ್ನ ಬೆನ್ನಪ್ಪಿ ಒರಗಿಸಿ 
ಕೈಗಳು ಬರಸೆಳೆದು ನಡುವನ್ನು ಬಳಸಿ 
ಮರಿಗಡ್ಡದ ಗಲ್ಲ ನಿನ್ ಹೆಗಲ ಸವೆಸಿ 
ಕೆಂಪಾದ ಕಿವಿ ತುದಿಯ ನಾ ಕಚ್ಚಿ ಇಡಲೇ ?

ಎಡಗಡೆಯ ಎದೆಬಡಿತ ಬಲಬದಿಗೆ ತಾಗಿ 
ಕೈಎರೆಡು ಸೊಂಟಕೆ ಒಂದು ಸುತ್ತಾಗಿ
ನಿನ ಕಾಲು ನೆಲಬಿಡಲು ನಾ ಕೊಂಚ ಬಾಗಿ 
ಹೀಗೊಮ್ಮೆ ತೂಗಲು ನಿನ್ನಪ್ಪಿ ಕೊಳ್ಳಲೇ ?

ಮೈಯೊಳಗೆ ಹೊಕ್ಕಾಗ ಒಂದೊಳ್ಳೆ ಇರುವೆ 
ನಿಂತಲ್ಲೇ ಕುಣಿವೆ, ಕಣ್ಮುಚ್ಚಿ ತುಟಿಕಚ್ಚಿ ನಗುವೆ 
ನಾನೂನು ನಿನ್ನನ್ನು ಹಾಗೊಮ್ಮೆ ನಗಿಸುವೆ 
ಅದಕೆಂದು ಬೆರಳಿಂದ ಕಚಗುಳಿಯನಿಡಲೇ?  

ನಿನ್ನ ಮುಟ್ಟಿಯೂ ಕಾಡುವೆ ಮುಟ್ಟದೆಯೂ ಕಾಡುವೆ 
ಬಯಕೆಗಳ ಬಾಗಿಲ ತಟ್ಟಿ ನಾ ಓಡುವೆ 
ನೀ ತಣಿಯುವವರೆಗೂ ದಣಿವಾಗದಿರುವೆ 
ಮನ್ನಿಸೆ ಬೆಡಗಿ ನಾ ತುಸು ತುಂಟ ತರಲೆ!

*********************************************************************************
ಜಾತಿ ದೆಸೆಯಿಂದ ಪ್ರೀತಿ ಮಾಡಲಾಗದ ಗೆಳತಿಯ ಕಂಡು ನನಗನಿಸಿದ್ದು. 

ನನ್ನ ಜಾತಿಯಲ್ಲಿ ನಾ ಹುಟ್ಟಬಾರದಿತ್ತು, 

ಇಲ್ಲವೇ ... ಈ "ಜಾತಿ"ಯೇ ಹುಟ್ಟಬಾರದಿತ್ತು!

*********************************************************************************
ಹೀಗೊಂದು ದುರಂತ ತೋರಿಸುವ ಸಾಲುಗಳು, ಮೊದಲ ಆರು ಸಾಲುಗಳು ವಿರಹದ ನೋವನ್ನ್ನು ಸ್ವಲ್ಪ ಜೋರಾಗೆ ಹೇಳಿಕೊಳ್ಳುತ್ತವೆ, ಆದರೆ ನಂತರದ ನಾಲ್ಕು ಸಾಲುಗಳಲ್ಲಿ ಮನಸ್ಸು ಮತ್ತೊಮ್ಮೆ ಸಾಮಾನ್ಯ ಪರಿಸಿತ್ತಿಗೆ ಬರುವ ಸೂಚನೆ ನೀಡುತ್ತವೆ. ಕೊನೆಯಲ್ಲಿ, ಎಲ್ಲೇ ಇದ್ದರು ಹೇಗೆ ಇದ್ದರು ತನ್ನವಳು ನಗುತಿರಲಿ, ಈ ಮನಸ ನೆನೆದು ಎಂದೂ ಕೊರಗದಿರಲಿ ಎಂಬ ಹಿರಿತನ ಮೆರೆಯುತ್ತದೆ.
ಈಗಿನ ಎಲ್ಲ ಒಡೆದ ಪ್ರೇಮಿಗಳ ಅನಿಸಿಕೆ ಹೆಚ್ಚುಕಮ್ಮಿ ಹೀಗೆ ಅನ್ನಿಸುತ್ತೆ, ಅದಕ್ಕೆ ನಾಲಕ್ ಸಾಲು ಗೀಚಿದೆ.
ವಿಶೇಶ ಸೂಚನೆ: ಇಲ್ಲಿ ಬರೆದಿರುವ ಸಾಲುಗಳು ಊಹಿಸಿಕೊಂಡು ಬರೆದವು, ಬರೆದ ವ್ಯಕ್ತಿಗೂ ಇಲ್ಲಿರುವ ವೇದನೆಗೂ ಯಾವುದೇ ನಂಟಿಲ್ಲ. ಹಾಗಾಗಿ ಇದು ನನ್ನದೇ ನೋವು ಎಂದು ದಯವಿಟ್ಟು ತಪ್ಪಾಗಿ ಉಹಿಸಿಕೊಳ್ಳಬೇಡಿ :)   

||ಒಂಟಿತನ ಜೊತೆಯಿದೆ ನಾ ಒಬ್ಬಂಟಿಯಲ್ಲ||

ದೇಹದೊಳು ಉಸಿರಿದೆ ಮನ ಸಾವನ್ನಪ್ಪಿದೆ 
ಚಿಂತೆಯ ಚಿತೆಯೊಳಗೆ ಮನಸ್ಸು ಬೇಯುತ್ತಿದೆ

ಅರಿಯೆನು ನಿನಮೇಲೆ ಯಾಕಿಷ್ಟು ಒಲವು
ಹೊತ್ತೆಲ್ಲ ನಿನ್ನೊಡನೆ ಕಳೆಯುವ ಹಟವು

ನೀ  ಇಲ್ಲದಿದ್ದಾಗ  ಚಡಪಡಿಕೆ ಹೆಚ್ಚಿ
ಹುಚ್ಚಾಗಿ ಹರಿದಿದೆ ಮನಸೆಲ್ಲೋ ಕೊಚ್ಚಿ 

ಅಬ್ಬಬ್ಬ ಸಾಕಪ್ಪ! ಗಟ್ಟಿ ಪದಗಳ ಸಾಲು 
ಹೊರಬರಲು ಹೆಣಗುತಿದೆ ನಿನ್ನೊಲವ ಅಮಲು 

ಈ ಮತ್ತು ಇಳಿವುದು ಕೆಲ ಹೊತ್ತು ಕಳೆದಂತೆ 
ಮತ್ತೊಮ್ಮೆ ಬಾರದಿರು ನಾ ನಿನ್ನ ಮರೆತಂತೆ 

ನಗುವಿರಲಿ ನಲಿವಿರಲಿ ನೀ ಎಲ್ಲೆ ಇದ್ದರು 
ಮರೆತಿರಲಿ ನನ್ನೆನಪು ನಾ ಎದುರು ಬಂದರು 

ಕೊರಗದಿರು ನನಗ್ಯಾವ ಜೊತೆಯಿಲ್ಲ ಎಂದೆಲ್ಲ  
ಒಂಟಿತನ ಜೊತೆಯಿದೆ ನಾ ಒಬ್ಬಂಟಿಯಲ್ಲ !
**********************************************************************************************************************************
ಮೊನ್ನೆ ಮಳೆ ಬಿದ್ದಾಗ ನಮ್ ತಲೆಗೊಂದ್ ಮೊಳೆ ಹೊಡ್ಕೊಂಡ್ ಬರೆದಿದ್ದು.

ನನ್ನವಳೆಂದಳು...
ಹ್ಹ...ಬರಬಾರದೇಕೆ ಬಿಸಿಗಾಳಿ 
ಮಳೆಗಾಳಿ ಬಿರುಬೀಸಿ ಇರುಳೆಲ್ಲ ಚಳಿ ಚಳಿ

ನನಗನಿಸಿತು...
ಚ್ಚೆ...ಆಗಬಾರದಿತ್ತೆ ನಾ ಹೊದಿಕೆ 
ಮೆಚ್ಚಿದವಳ ಮುಚ್ಚಿ ಬೆಚ್ಚಗಿರಿಸೋ ಬಾಗ್ಯಕೆ|

*********************************************************************************
ಹೀಗೆ ಮದ್ಯರಾತ್ರಿಲಿ, ದೆವ್ವಗಳು ಓಡಾಡೋ ಹೊತ್ತಲ್ಲಿ, ತಲೆಗೆ ಹುಳ ಬಿಟ್ಕೊಂಡು ಬರೆದ ಸಾಲುಗಳು. 

ನಿನ್ನ ಕಂಡಾಗ...

ನನ್ನೆದೆಯ ನೆಲದೊಳಗೆ 
ನಂಬಿಕೆಯ ಬೇರಿಳಿದು 
ಬಯಕೆಯ ಚಿಗುರೊಡೆದು 
ಒಲವೆಂಬ ಹೂ ಅರಳಿವೆ! 

ನೀ ಒಪ್ಪಿದರೆ....

ಬಾಳೆಂಬ ಗುಡಿಯೊಳಗೆ
ದೇವತೆಯು ನೀನಾಗಿ
ಪೂಜಕನು ನಾನಾಗಿ
ಆ ಹೂವ ನೈವೆದ್ಯಗೈಯುವೆ!

ನೀ ಒಪ್ಪದಿರೆ ....

ನೀನಿಲ್ಲದ ನಾಳೆಯೊಳಗೆ
ನಿನ್ನೆನಪ ನೀರೆರೆದು
ಒಲವಿನ ಹೂವಿದು
ಬಾಡದಂತೆ ನೋಡಿಕೊಳ್ಳುವೆ!

*********************************************************************************
ನನ್ನ ಗೆಳತಿಯೊಬ್ಬರು ಅವರ ಅಕ್ಕನ ಪುಟ್ಟ ಮಗಳ ಚಿತ್ರ  ತೋರಿಸಿ, ಹೇಗಿದ್ದಾಳೆ? ಎಂದು ಕೇಳಿದರು. ಬರಿ ಮಾತಲ್ಲಿ ಹೇಳುವಬದಲು ಕಟ್ಟಿದೆ ಪದಗಳ ಸಾಲು.

ಇವಳು ಚೆಲುವೆ ಚಿಕ್ಕಮ್ಮನ ಮಗಳು

ಇಂದ್ರಲೋಕದಿಂದ್ ಇಳೆಗೆ ಇಳಿದಿಹಳು
ಗುಂಡು ಕೆನ್ನೆಯ ದುಂಡು ಮೊಗದವಳು
ತುಟಿ ಹಿಂದೆ ಮೂಡಿಲ್ಲ ಬಿಳಿಯ ಹಲ್ಲುಗಳು |ಇವಳು ಚೆಲುವೆ ಚಿಕ್ಕಮ್ಮನ ಮಗಳು|

ಪುಟ್ಟ ದಿಟ್ಟ ಬಟ್ಟಲ ಕರಿ ಕಣ್ಣುಗಳು
ಅಂಗೈ ಮೇಲೆ ಮಡಚಿದ ಬೆರಳುಗಳು
ಹಣೆ ತುದಿಗೆ ಮುಂಗುರುಳ ಬೇರುಗಳು |ಇವಳು ಚೆಲುವೆ ಚಿಕ್ಕಮ್ಮನ ಮಗಳು|

ಮೂಗು ಹೋಲಿಸಲು ಸಿಗದ್ಯಾವ ಹೂವುಗಳು
ನೊರೆಹಾಲ ಮೈಬಣ್ಣ ತಿಳಿ ಮನಸಿನವಳು
ಸಾಕೆನಗೆ ಹೊಳೆಯದು ಮತ್ತ್ಯಾವ ಪದಗಳು |ಇವಳು ಚೆಲುವೆ ಚಿಕ್ಕಮ್ಮನ ಮಗಳು|

*********************************************************************************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ