ಬುಧವಾರ, ಮಾರ್ಚ್ 21, 2012

ಒತ್ತಾಯಿಸಿದ ಗ್ರಾಹಕನಿಗೆ ಒಲಿದ ಕನ್ನಡ ಸೇವೆ: ಭಾರತಿ -ಎಕ್ಸಾ ಮತ್ತು ನಾನು!

ಸುಮಾರು ಮೂರು ವರ್ಷಗಳಿಂದ ಭಾರತಿ- ಎಕ್ಸಾ ಎಂಬ ಕಂಪನಿಯ ಜೀವ ವಿಮೆಯ ಗ್ರಾಹಕನಾದ ನನಗೆ ಕಳೆದ ತಿಂಗಳು ನನ್ನ ವಿಮೆಯ ಕಂತಿನ ವಿಚಾರಾವಾಗಿ ಒಂದು ಸಣ್ಣ ಗೊಂದಲ ಉಂಟಾಗಿತ್ತು. ಗೊಂದಲವನ್ನು ಪರಿಹರಿಸುವ ಸಲುವಾಗಿ ಅವರ ಗ್ರಾಹಕ ಸೇವೆಯ ದೂರವಾಣಿಗೆ ಕರೆ ಮಾಡಿದರೆ ನನಗೆ ಬೆರಗು ಕಾದಿತ್ತು! ಗ್ರಾಹಕ ಸೇವೆಯ ಐವಿಅರ್ ನಲ್ಲಿ ಇಂಗ್ಲಿಷ್ ಮತ್ತು ಹಿಂದಿಯನ್ನು ಬಿಟ್ಟರೆ ಬೇರೆ ಆಯ್ಕೆಗಳಿಲ್ಲ! ಹೋಗಲಿ, ಕರೆ ಸ್ವೀಕರಿಸಿದ ವ್ಯಕ್ತಿ ಹತ್ತಿರ ಕನ್ನಡ ಮಾತಾನಾಡುವವರಿಗೆ ಕರೆ ವರ್ಗಾಯಿಸಲು ಕೇಳಿದರೆ ಕನ್ನಡ ಸೇವೆಯೇ ಇಲ್ಲ! ಅಲ್ಲಾ, ಈ ಕಂಪನಿಯ ಗ್ರಾಹಕರಾಗಬೇಕಾದರೆ ನಾವು ಇಂಗ್ಲಿಷ್ ಅಥವಾ ಹಿಂದಿಯನ್ನು ಕಲಿಬೇಕಾ? ಕನ್ನಡದಲ್ಲಿ ಸೇವೆ ಸಿಗಲು ಸಾಧ್ಯವೆ ಇಲ್ಲವೇ? ಏನಾದರು ಆಗಲಿ ಒತ್ತಾಯ ಮಾಡಿ ಕನ್ನಡಲ್ಲೇ ಸೇವೆ ಪಡೆಯಬೇಕೆಂದು ನಿರ್ಧರಿಸಿ, ನನ್ನ ಗೊಂದಲ ನಿವಾರಣೆಗೆ ಕನ್ನಡ ಬಲ್ಲವರ ಹತ್ತಿರ ಸುಲಭವಾಗಿ ಮಾತುಕತೆ ನಡೆಸ ಬಹುದು ಎಂದು ಹೇಳಿ ಆ ವ್ಯವಸ್ಥೆ ಮಾಡುವಂತೆ ಅವರನ್ನು ಕೇಳಿಕೊಂಡೆ. ಜೊತೆಗೆ ಒಂದು ಮಿಂಚೆಯನ್ನು ಬರೆದೆ.
ಇದಾದ ಕೆಲವು ದಿನಗಳ ನಂತರ ಪ್ರತಿ ಎರೆಡು ಮೂರು ದಿನಗಳಿಗೊಮ್ಮೆ ಈ ಕಂಪನಿಯ ಗ್ರಾಹಕ ಸೇವಾ ಕೇಂದ್ರದಿಂದ ನನ್ನ ಗೊಂದಲ ನಿವಾರಣೆಗೆಂದು ಕರೆ ಮಾಡುತ್ತಿದ್ದರು, ಆದರೆ ಅವರು ಮಾತನಾದುತ್ತಿದ್ದಿದು ಕೇವಲ ಇಂಗ್ಲೀಷ ಅಥವಾ ಹಿಂದಿಯಲ್ಲಿ. ಆ ಭಾಷೆಗಳಲ್ಲಿ ವ್ಯವಹರಿಸುವುದು ನನಗೆ ಮತ್ತೊಂದು ಗೊಂದಲವಾಗಿದ್ದರಿಂದ ಅನುಕೂಲಕರ ವ್ಯವಹಾರಕ್ಕೆ ನಾನು ನನ್ನ ತಾಯ್ನುಡಿಯಲ್ಲೇ ಸೇವೆ ಬೇಕೆಂದು ಹೇಳಿ ಕರೆ ಮುಗಿಸುತ್ತಿದ್ದೆ.


ಅಂತು ಕಳೆದ ಶನಿವಾರ ಕನ್ನಡ ಬಲ್ಲ ಒಬ್ಬರು ಬೆಂಗಳೂರಿನ ಶಾಖೆಯಿಂದ ಕರೆ ಮಾಡಿ ನನ್ನ ತೊಂದರೆ ನಿವಾರಿಸಿದರು, ನನ್ನ ತೊಡಕುಗಳನ್ನು ಬಹಳ ಸುಲಭವಾಗಿ ಹಂಚಿಕೊಳ್ಳಲು ಅದರಿಂದ ಸಾಧ್ಯವಾಯಿತು ಹಾಗೆಯೇ ಅಧಿಕಾರಿ  ಕೂಡ ಸರಳವಾಗಿ ಮರುನುಡಿ ನೀಡಿ ನನ್ನನ್ನು ಮತ್ಯಾವ ಗೊಂದಲಕ್ಕೆ ಈಡು ಮಾಡದೆ ಸೇವೆ ನೀಡಿದರು.
ಗೆಳೆಯರೆ/ಗೆಳತಿಯರೆ, ಇಲ್ಲಿ ನಾನು ಹಂಚಿಕೊಲ್ಲಬೇಕಾಗಿದ್ದು ಇಷ್ಟೇ, ಕರ್ನಾಟಕದಲ್ಲಿ ಕನ್ನಡಿಗರಿಗೆ ಕನ್ನಡದಲ್ಲಿ ಸೇವೆ ನೀಡ ಬೇಕಾಗಿರುವುದು ಎಲ್ಲ ಕಂಪನಿಗಳಿಗೆ ಮೂಲಭೂತವಾದದ್ದು. ಇದನ್ನು ಮರೆತು, ಕನ್ನಡಿಗರ ಮೇಲೆ ಬೇರೆ ನುಡಿಗಳ ಹೇರಿಕೆಯನ್ನು ಹಲವು ಕಂಪನಿಗಳು ಮಾಡುತ್ತಿವೆ, ಒಬ್ಬ ಗ್ರಾಹಕನಾಗಿ ಈ ಚಿತ್ರಣವನ್ನು ಬದಲು ಮಾಡುವ ಶಕ್ತಿ ಪ್ರತಿಯೋಬ್ಬನಿಗಿದೆ, ಇದಕ್ಕೆ ನನ್ನ ಮೇಲಿನ ಪ್ರಕರಣವೇ ಸಾಕ್ಷಿ. ಇದು ಅಭಿಮಾನದ ದೃಷ್ಟಿಯಿಂದ ಮಾಡಿದ್ದಲ್ಲ ನನ್ನ ಅನುಕೂಲದ ದೃಷ್ಟಿಯಿಂದ, ತಾಯ್ನುಡಿಯಲ್ಲಿ ವ್ಯವಹಾರ ಅತ್ಯಂತ ಸುಲಭ ಹಾಗು ಸರಳವಾಗಿ ಕಾಣುತ್ತದೆ. ಗ್ರಾಹಕನಾಗಿ ಪ್ರತಿಯೊಬ್ಬರೂ ಹೀಗೆ ಕನ್ನಡದಲ್ಲಿ  ಸೇವೆ ಪಡೆದಲ್ಲಿ ಮೋಸ ಹೋಗುವ ಸಂಧರ್ಭಗಳು ಕಡಿಮೆ. ಆದ್ದರಿಂದ ಗ್ರಾಹಕರಾಗಿ ನೀವು ಪಡೆದುಕೊಳ್ಳುವ ಸೇವೆ ಕನ್ನಡದಲ್ಲಿ ಇರಲಿ.  

ನೀವು ಈ ಕಂಪನಿಗೆ ಕನ್ನಡ ಸೇವೆ ನೀಡಿ ಎಂದು ಕೇಳುವ ಮನಸಾದಲ್ಲಿ ಒಂದೈದು ನಿಮಿಷ ಬಿಡುವು ಮಾಡಿಕೊಂಡು  ಈ ವಿಳಾಸಕ್ಕೆ service@bharti-axalife.com  ಒಂದು ಮಿಂಚೆ  ಬರೆದು ಅಥವಾ ೧೮೦೦ -೧೦೨ -೪೪೪೪ ಕರೆ ಮಾಡಿ ಕನ್ನಡ ಸೇವೆಗೆ ಕೇಳಿಕೊಳ್ಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ