ಶುಕ್ರವಾರ, ಮಾರ್ಚ್ 30, 2012

ಕ್ಷಮಿಸಿ ಎಲ್ಲಾ, ನಾನು ಕನ್ನಡಾಭಿಮಾನಿ ಅಲ್ಲ!

(ಈ ಕೆಳಗಿನ ಬರವಣಿಗೆಯಲ್ಲಿ ಬಳಸಿರುವ 'ಗೆಳೆಯರು/ನೆಂಟರು' ಎಂಬ ಪದ ಎಲ್ಲಾ ಓದುಗರಿಗೆ ಅನ್ವಯಿಸುವುದಿಲ್ಲ)

ಇತ್ತೀಚಿನ ದಿನಗಳಲ್ಲಿ ಗ್ರಾಹಕನಾಗಿ ನನ್ನ ಅನುಕೂಲಕ್ಕಾಗಿ ಕನ್ನಡವನ್ನು ಕೇಳುತ್ತಿರುವ, ಕರ್ನಾಟಕದಲ್ಲಿ ಎಲ್ಲೇ ಹೋದರು ಕನ್ನಡ ಸೇವೆಗೆ ಒತ್ತಾಯಿಸುತ್ತಿರುವ ಮತ್ತು ಕನ್ನಡದ ಮೇಲೆ ಬೇರೆ ನುಡಿಯ ಹೇರಿಕೆಯನ್ನು ವಿರೋಧಿಸುತ್ತಿರುವ ನನಗೆ ನನ್ನ ಗೆಳೆಯರು ಹಾಗು ನೆಂಟರು ಇಟ್ಟ ಬಿರುದು 'ಕನ್ನಡಾಭಿಮಾನಿ'! ಇದು ನನಗೆ ಬೆರಗು ಗೊಳಿಸಿದ ವಿಷಯ, ಏಕೆಂದರೆ ವಾಸ್ತವವಾಗಿ ನಾನು ಕನ್ನಡಾಭಿಮಾನಿಯಲ್ಲ! ಇದೇನಾದರು ನಿಮಗೆ ಬೆರಗುಗೊಳಿಸಿದ್ದರೆ ಕೆಳಗಿನ ಅಂಶಗಳನ್ನು ನೋಡಿ

೧.  ತಿಂಗಳು ಪೂರ್ತಿ ದುಡಿದರು ನಿಮ್ಮ ಕಂಪನಿಯವರು ನಿಮಗೆ ಸಂಬಳ ನೀಡಿಲ್ಲ ಅಂದುಕೊಳ್ಳಿ, ಆಗ ನೀವು ನಿಮ್ಮ ಸಂಬಳಕ್ಕಾಗಿ ಕಂಪನಿಯವರನ್ನು ಒತ್ತಾಯಿಸಿದರೆ ಅದು ನಿಮಗೆ ಸಂಬಳದ ಮೇಲಿನ ಅಭಿಮಾನವೋ ಅಥವಾ ನಿಮಗೆ ಸಂಬಳದ ಅಗತ್ಯತೆಯೋ?
೨. ನಿಮ್ಮ ದೇಹಕ್ಕೆ ಯಾವುದೋ ಒಂದು ಕಾಯಿಲೆ ಚಿಕ್ಕದಾಗಿ ಶುರುವಾಗುತ್ತದೆ, ಅದು ಇಡೀ ದೇಹವನ್ನು ಆವರಿಸಿ ನಿಮ್ಮನ್ನು ಬಲಿ ತೆಗೆದು ಕೊಳ್ಳದಿರುವಂತೆ ಮದ್ದನ್ನು ತೆಗೆದು ಕೊಂಡರೆ ಅದು ನಿಮಗೆ ನಿಮ್ಮ ದೇಹದ ಮೇಲೆ ಇರುವ ಅಭಿಮಾನವೋ ಅಥವಾ ನಿಮ್ಮ ಬದುಕಿನ ಮೇಲಿರುವ ಕಾಳಜಿಯೋ?
೩. ಸುಡು ಬೇಸಿಗೆಯಲ್ಲಿ ಆರಾಮಾಗಿ ಹತ್ತಿ ಬಟ್ಟೆ ಹಾಕಿಕೊಂಡು ಕೆಲಸಕ್ಕೆ ಹೋಗುತ್ತಿದ್ದ ನಿಮಗೆ, ದಪ್ಪಗಿರುವ, ಗಾಳಿಯು ಸುಳಿದಾಡದಂತಹ ಬಟ್ಟೆಯನ್ನು ಹಾಕಲು ನಿಮ್ಮ ಕಂಪನಿಯವರು ಹೇಳುತ್ತಾರೆ ಅಂದುಕೊಳ್ಳಿ, ನೀವು ಅದರ ವಿರುದ್ದ ಸೊಲ್ಲೆತ್ತಿದರೆ ಅದು ನಿಮಗೆ ಹತ್ತಿ ಬಟ್ಟೆಯ ಮೇಲಿರುವ ಅಭಿಮಾನಕ್ಕಾಗೋ ಅಥವಾ ನಿಮ್ಮ ಅನುಕೂಲಕ್ಕಾಗೋ?
೪. ನಿಮ್ಮ ಮನೆಯ ಸಂಸಾರದೊಳಗೆ ಪಕ್ಕದ ಮನೆಯವರು ಮೂಗು ತೂರಿಸಿದರೆ, ಇಲ್ಲವೇ ನಿಮ್ಮ ಮನೆಯ ಮೇಲೆ ಆಳ್ವಿಕೆ ನಡೆಸ ಹೋದರೆ ನೀವು ಸುಮ್ಮನಿರುವಿರೆ? ಅವರನ್ನು ಒದ್ದು ಓಡಿಸೋದಿಲ್ಲವೇ? ಹಾಗಾದರೆ ಅದು ನಿಮಗೆ ನಿಮ್ಮ ಮನೆಯ ಮೇಲಿನ ಅಭಿಮಾನವೋ ಅಥವಾ ನಿಮ್ಮ ಮನೆಯಲ್ಲಿ ನಿಮ್ಮ ಸಾರ್ವಬೌಮತ್ವದ ಪ್ರೆಶ್ನೆಯೋ?

.... ಹೀಗೆ ಹೇಳುತ್ತಾ ಹೋದರೆ ನೊರೆಂಟು ಉಂಟು, ಕರ್ನಾಟಕದಲ್ಲಿ ಕನ್ನಡದಲ್ಲಿ ಸೇವೆ ನೀಡಿದರೆ ಕನ್ನಡ ಬಾರದಿರುವರು ಏನು ಮಾಡಬೇಕು ಎಂದು ಎಷ್ಟೋ ಗೆಳೆಯರು ನನ್ನ ಕೇಳಿದ್ದಾರೆ, ನನಗೆ ತುಂಬಾ ಸೋಜಿಗ ಅನಿಸೋದು ಇದೇ, ಹೀಗೆ ಪ್ರಶ್ನೆ ಕೇಳಿದ ಇವರು 'ಕರ್ನಾಟಕದಲ್ಲಿ ಕನ್ನಡದಲ್ಲಿ ಸೇವೆ ನೀಡದಿದ್ದರೆ ಕೇವಲ ಕನ್ನಡ ಬಲ್ಲ ನಮ್ಮ ಕನ್ನಡಿಗರು ಏನು ಮಾಡಬೇಕು' ಎಂಬುದನ್ನು ಯಾಕೆ ಯೋಚಿಸುವುದಿಲ್ಲ ಎಂದು. ಹೀಗೆ ಕೇಳಿದ ಎಷ್ಟೋ ಗೆಳೆಯರ ತಂದೆ, ತಾಯಿ ಅಥವಾ ಅವರ ನೆಂಟರಿಗೆ ಕನ್ನಡ ಬಿಟ್ಟು ಬೇರೆ ಯಾವ ನುಡಿಯು ಬಾರದು. ಕನ್ನಡ ಬಾರದ ಹೊರಗಿನವರು, ಕನ್ನಡ ಮಾತ್ರ ಬರುವ ಇವರ ಮನೆಯವರಿಗಿಂತ ಮೇಲಾದರೆ?  ಅವರು ಅವರ ಮೂಗಿನ ನೇರಕ್ಕೆ ಯೋಚಿಸುವುದನ್ನು ಬಿಟ್ಟರೆ ಖಂಡಿತ ಬದಲಾವಣೆ ಸಾಧ್ಯ ಅನಿಸುತ್ತದೆ.

ಮತ್ತೆ ಕೆಲವರು ಹೇಳ್ತಾರೆ, 'ನೀನು ಕನ್ನಡಾಭಿಮಾನಿ ಅಲ್ಲವಾ ಯಾಕೆ ಇಂಗ್ಲಿಷ್ ಪದಗಳನ್ನು ಮಾತಿನ ಮಧ್ಯದಲ್ಲಿ ಬಳಸುತ್ತಿಯ? ನೀನು ಕನ್ನಡವನ್ನೇ ಮಾತನಾಡಬೇಕು'. ನಿಜವಾಗಲು ಇಂತಹ ಬಾಲಿಶ ಕೇಳ್ವಿಗಳಿಗೆ ನನಗೆ ಮರುನುಡಿಗಳು ತಿಳಿದಿಲ್ಲ. ನನ್ನ ಮಾತಿನಲ್ಲಿರುವ ಅನ್ಯ ನುಡಿಪದಗಳ ಧಾಳಿಗೆ ನಾನು ಕಾರಣನೆ?  'ನಾನು ಊಟ ಮಾಡುವ ಎಲೆಯಲ್ಲಿ 'ನೊಣ' ಬಿದ್ದಿರುವುದನ್ನು ತೋರಿಸುತ್ತಿರುವ ಈ ಗೆಳೆಯರು ಅವರ ಎಲೆಯಲ್ಲಿ 'ಹೆಗ್ಗಣ' ಬಿದ್ದಿರುವುದನ್ನು ಗಮನಿಸಲೇ ಇಲ್ಲವಲ್ಲ !? ನನ್ನ ಮಾತಿನಲ್ಲಿ ಇಂಗ್ಲಿಶ್ ಹುಡುಕುವ ಬದಲು ಕನ್ನಡ ಸೇವೆ ಎಲ್ಲಿ ಸಿಗುತ್ತಿಲ್ಲ ಎಂದು ಹುಡುಕಿದರೆ, ಮುಂದೆ ಕನ್ನಡವನ್ನು ಕರ್ನಾಟಕದಲ್ಲಿ ಹುಡುಕುವ ಪರಿಸ್ತಿತಿ ಬರುವುದಿಲ್ಲ. ಇದು ನಮ್ಮ ನಾಡಿನ ದುರಂತ ಅನಿಸುತ್ತದೆ, ಬೆನ್ನು ತಟ್ಟುವರಿಗಿಂತ ಕಾಲು ಎಳೆಯುವರೆ ಹೆಚ್ಚು.
        
ಗ್ರಾಹಕನಾಗಿ ಕನ್ನಡಕ್ಕಾಗಿ ಒತ್ತಾಯ ಮಾಡುವುದು, ನಮ್ಮ ನುಡಿಯನ್ನು ನಾವು ಪ್ರೋತ್ಸಾಹಿಸುವುದು ನನ್ನ ಜೊತೆ ಉಳಿದ ಕನ್ನಡಿಗರ ಅನುಕೂಲಕ್ಕಾಗಿ, ಅಗತ್ಯತತೆಗಾಗಿ, ಕಾಳಜಿಗಾಗಿ ಮತ್ತು  ಕರ್ನಾಟಕದಲ್ಲಿ ಕನ್ನಡದ ಸಾರ್ವಬೌಮತ್ವಕ್ಕಾಗಿ. ಹಾಗೆಂದ ಮಾತ್ರಕ್ಕೆ ಅಭಿಮಾನ ಎಂಬುದು ಸೊನ್ನೆ ಎಂಬ ಹುರುಳಲ್ಲ, ಅಭಿಮಾನಕ್ಕಿಂತ ಮೊದಲು ನಾನು ಈ ಮೊದಲು ಹೇಳಿದ ಕಾರಣಗಳು ಬಂದು ನಿಲ್ಲುತ್ತವೆ.     

ಗೆಳೆಯರೆ/ನೆಂಟರೆ, ನಿಮ್ಮ ಚುಚ್ಚು, ಬಿಚ್ಚು ನುಡಿಗಳು ನನಗೆ ಮೆಚ್ಚುಗೆಯಾಗಿವೆ. ಹೀಗೆ ಆಡುತ್ತಿರಿ, ಆ ಮೂಲಕ ನನ್ನನ್ನು ನಾನು ನೋಡಿಕೊಳ್ಳುತ್ತೇನೆ. ಯಾವುದೇ ಹಣ ಪಡೆಯದೇ ನನ್ನ ಹಿಂದೆ ಬಿದ್ದು ನನ್ನ ಸರಿ-ತಪ್ಪುಗಳನ್ನು ಕಂಡು ಹಿಡಿದು ತೋರಿಸಿಕೊಡುತ್ತಿದ್ದೀರೀ  ಆ ಮೂಲಕ ನನ್ನ ತಪ್ಪುಗಳು ನನಗೆ ತಿಳಿಯುತ್ತಿವೆ ನಿಮಗೆ ನನ್ನ ವಂದನೆಗಳು. ನಿಮ್ಮ ಮಾತುಗಳು ತುಪ್ಪವಿದ್ದಂತೆ ಅದರಿಂದ ಕನ್ನಡ ದೀಪ ಬೆಳಗಲಿ. 

2 ಕಾಮೆಂಟ್‌ಗಳು:

  1. ಇದು ನಮ್ಮೆಲ್ಲರ ಅನುಭವಾನೂ ಕೂಡಾ... ಏನು ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದುಸ್ತಿದೀರಾ? ಭಾಳ ಕನ್ನಡಾಭಿಮಾನ ನಿಮಗೆ ಅಂದೋರು ಎಶ್ಟೋ ಜನ...! ಇಲ್ಲಪ್ಪಾ, ನನ್ನಮಕ್ಕಳಿಗೆ ಓದು ಸರೀಗೆ ತಲೇಗ್ ಹತ್ಲೀ ಅಂತಾ ಕನ್ನಡ ಮೀಡಿಯಂ,... ಅಕಸ್ಮಾತ್ ನಾವು ಇಂಗ್ಲೀಶಿನವರಾಗಿದ್ರೆ ಇಂಗ್ಲೀಶ್ ಮೀಡಿಯಂ ಹಾಕ್ತಿದ್ದೆ ಎನ್ನೋದೂ ಕಾಮನ್ ಉತ್ತರ. ಅದಕ್ಕೆ ಮುಂದೆ ಕಷ್ಟ ಆಗಲ್ವಾ ಅಂತಾ ಅವರನ್ನೋದೂ, ಈಗ ನನ್ನ ಮಗ ಇಂಗ್ಲೀಶ್ ಮೀಡಿಯಮ್ಮು...ಹತ್ತನೇ ತರಗತಿಯಲ್ಲಿ ಕ್ಲಾಸಿಗೇ ಫಸ್ಟು ಅಂತಾ ನಾ ಹೇಳೊದೂ ಮಾಮೂಲಿಯಾಗಿಬಿಟ್ಟಿದೆ!

    ಪ್ರತ್ಯುತ್ತರಅಳಿಸಿ
  2. ಹೌದು...ಇದು ನಾವೆಲ್ಲರೂ ಎದುರಿಸ್ತಿರೋ ಸಮಸ್ಯೆ...'...ನಿನ್ನ ಮಾತಲ್ಲಿ ಇಂಗ್ಲಿಶ್ ಯಾಕಿದೆ, ಹಿಂದಿ ಭಾರತೀಯ ಭಾಷೆ ಮೊದ್ಲು ಇಂಗ್ಲಿಷ್ ಮಾತಡೋದು ನಿಲ್ಸು..' ಅಂತ ಹೇಳೋ ಜನಗಳು ಕನ್ನಡಿಗರೇ ಅನ್ನೊದು ತುಂಬಾ ದುಖಃ ತರುತ್ತೆ, ಮೈಯೆಲ್ಲಾ ಉರಿಯುತ್ತೆ. ಎಲ್ಲಿವರೆಗೆ ಕನ್ನಡಿಗರ ಮನಸಲ್ಲಿ ಆತ್ಮಾಭಿಮಾನ ಬರೋದಿಲ್ವೊ ಅಲ್ಲಿವರೆಗೆ ಇದು ಇದ್ದದ್ದೆ.

    ಪ್ರತ್ಯುತ್ತರಅಳಿಸಿ