ಸೋಮವಾರ, ಸೆಪ್ಟೆಂಬರ್ 26, 2011

ಕನ್ನಡಕ್ಕೊಂದು ಕಾಫೀ ತೋಟ ಬೆಳೆಯಲಿ !

ರಜೆಗೆ ಊರಿಗೆ ಹೋದ ನನಗೆ ಮಾಡಲು ಬೇರೆ ಕೆಲಸವಿಲ್ಲದೇ, ನಮ್ಮ ಕಾಫಿ ತೋಟವನ್ನು ಒಂದು ಸುತ್ತು ಹಾಕಿ ಬರೋಣವೆಂದು ತಂದೆಯ ಹಿಂದೆ ನಡೆದ ನನಗೆ ಅವರು ಹೇಳಿದ ಹಿಂದಿನ ಕಥೆ ಈ ಅವಲೋಕನಕ್ಕೆ ದಾರಿ ಮಾಡಿತು! 
ಸುಮಾರು ೧೯೬೦ ಹಾಗು ೭೦ರ ದಶಕದಲ್ಲಿ ನಾವು ಈಗಿರುವ ಊರಿಗೆ ಇನ್ನೊಂದು  ಹತ್ತಿರದ ಊರಿಂದ ವಲಸೆ ಬಂದ ನಮ್ಮ ಪೂರ್ವಜರು ಹಾಗು ಅವರ ಕೆಲ ಸ್ನೇಹಿತ ಕುಟುಂಬಗಳು ಬಂದು ನೆಲಸಿದ್ದು ಆಗಿದ್ದ ದಟ್ಟ ಕಾಡಿನಲ್ಲಿ. ಹೊತ್ತಿನ ತುತ್ತಿಗೂ ಆಪತ್ತಿದ್ದ ಕಾರಣದಿಂದ ವಲಸಿಗ ಕುಟುಂಬಗಳು  ಕೂಳಿಗಾಗಿ ಹಿಡಿದಿದ್ದು ಇನ್ನೊಬ್ಬರ ಮನೆಯ ಹಾಗು ತೋಟದ ಕೆಲಸವನ್ನು, ಆ ಕೆಲಸದಲ್ಲಿ ಸಿಗುತ್ತಿದ್ದದ್ದು ಬರೆ ಉಂಡು ಊಟ ತುಂಡು ಕಂಬಳಿ!

ಈ ನಡುವಿನಲ್ಲಿ ಕೆಲವು ಬುದ್ದಿವಂತರು ಕೆಲಸಕ್ಕೆ ಹೋಗುವ ಜೊತೆಗೆ ಬಿಡುವಿನ ಸಮಯದಲ್ಲಿ ದಟ್ಟ ಕಾಡನ್ನು ಕಡಿದು ತೋಟ ಮಾಡಿ, ಬದುಕಿಗೆ ದಾರಿ ಮಾಡಿಕೊಳ್ಳುವ ಭಗೀರಥ ಪ್ರಯತ್ನಕ್ಕೆ ಕೈ ಹಾಕಿದರು, ಉಳಿದವರು ಕೂಲಿ ಮಾಡುತ್ತಲೇ ಉಳಿದರು. ಆರಂಭದಲ್ಲಿ ಹಲವು ಎಡರು ತೊಡರುಗಳು ಎದುರಾದರು 'ಭೂಮಿ ತಾಯಿ ಬಂಜೆ ಅಲ್ಲ ಅನ್ನುವ ಹಾಗೆ ಆಕೆ ಬೆವರು ಹರಿಸಿದ ಜನರಿಗೆ ಫಲ ಕೊಟ್ಟೆ ಬಿಟ್ಟಳು! ಹೀಗೆ ಉದ್ದಾರ ಆದ ಹಲವಾರು ಕುಟುಂಬಗಳ ಹೆಸರನ್ನು ನನ್ನ ತಂದೆ ನನಗೆ ಹೇಳಿದರು, ಸ್ವಂತ ಜಾಗ, ಮನೆ ಮಾಡಿಕೊಂಡು ಉತ್ತಮ ಬದುಕು ಕಟ್ಟಿ ಕೊಳ್ಳಬೇಕೆಂಬ ಹಟವಿಲ್ಲದವರು ಇಂದು ಇವರ ಮನೆಗಳಿಗೆ ಕೂಲಿಗೆ ಬರುತ್ತಿದ್ದಾರೆ!

ಈ ಕಥೆಲಿ ಏನ್ ಮಹಾ ಅವಲೋಕನ ಮಾಡಿದ್ಯಪ್ಪ ಅಂತ ನೀವು ಕೇಳ್ತಾ ಇದ್ದೀರಾ ಅಲ್ವಾ? ಹೇಳ್ತೀನಿ ಕೇಳಿ, 
ಇವತ್ತು ನಮ್ಮ ಮನಸ್ಥಿತಿಯಲ್ಲಿ ಬರೆ ಇನ್ನೊಂದು ಭಾಷೆಯನ್ನು ಕಲಿತು (ಅದು ಇಂಗ್ಲಿಷ್, ಹಿಂದಿ, ಫ್ರೆಂಚ್, ಜರ್ಮನ್... ಇತ್ಯಾದಿ  ಆಗಿರಬಹುದು) ಅದರ ಮೇಲೆ ಕೆಲಸ ಮಾಡಿ ಬದುಕನ್ನು ಕಟ್ಟಿ ಕೊಳ್ಳುವ ಭಗೀರಥ ಪ್ರಯತ್ನದಲ್ಲೇ ಇದ್ದೇವೆ, ಜೊತೆಗೆ ನಮ್ಮ ಮುಂದಿನ ಪೀಳಿಗೆಯನ್ನು ಈ ಹುಚ್ಚು ಕುದೆರೆಯ ಸವಾರಿಗೆ ಅಣಿ ಮಾಡುತ್ತಿದ್ದೇವೆ. ನಮ್ಮದೇ ಭಾಷೆಯಲ್ಲಿ ನಮಗೆ ಅನುಕೂಲವಾಗುವ ಸ್ವಂತಿಕೆಯ ಸಮಾಜವನ್ನು ಕಟ್ಟುವ ಮನೋಭಾವಗಳೇ ಮಾಯವಾಗಿದೆ. ಇಂದು ಕರ್ನಾಟಕದಲ್ಲಿ ಇಂಗ್ಲಿಷ್, ಫ್ರೆಂಚ್, ಜರ್ಮನ್ ಕಲಿಕಾ ಕೇಂದ್ರ ಗಳಿವೆ, ಜೊತೆಗೆ ಕೇಂದ್ರ ಸರ್ಕಾರ ಕೃಪಾಪೋಷಿತ ಹಿಂದಿ ಕಲಿಕಾ ಕೇಂದ್ರಗಳು ಇವೆ ಆದರೆ ಕನ್ನಡ ಕಲಿಕಾ ಕೇಂದ್ರಗಳು ಬೇರೆ ರಾಜ್ಯ ಹಾಗು ದೇಶಗಳಲ್ಲಿ ಎಷ್ಟಿವೆ?? ಹೋಗಲಿ ಕರ್ನಾಟಕದಲ್ಲಿರುವ ಎಲ್ಲ ಶಾಲೆಗಳು ಕನ್ನಡ ಕಲಿಸುತ್ತಾವ? ಇದಕ್ಕೆ ಕಾರಣಗಳೇನು?

ಕಾರಣ ಇಷ್ಟೇ, ಇದು ಕನ್ನಡಿಗರ ಇಚ್ಚಾಶಕ್ತಿಯ ಕೊರತೆ,ಬರಿ ಇನ್ನೊಂದು ಭಾಷೆ ಮೇಲೆ ಕೂಲಿ ಮಾಡುವ ಬುದ್ದಿ ನಮದು, ಕನ್ನಡವೆಂಬ ಫಲವತ್ತಾದ ನೆಲದಲ್ಲಿ ಸ್ವಂತಿಕೆಯ ಕೃಷಿ ಮಾಡಿ, ಸಮೃದ್ದ ಕರುನಾಡು ಎಂಬ ಬೆಳೆ ತೆಗೆಯುವ ಹಠ ಇಲ್ಲದಿರುವುದು. ನಮ್ಮ ಧೈನಿಂದನ ಕೆಲಸಗಳಲ್ಲಿ, ಗ್ರಾಹಕರಾಗಿ ಸೇವೆ ಪಡೆಯುವ ಎಷ್ಟೋ ಕಡೆಗಳಲ್ಲಿ ನಾವು ನಮ್ಮ ಭಾಷೆಯನ್ನು ಬಳಸ ಬಹುದು, ಇದರಿಂದ ಕನ್ನಡಕ್ಕೊಂದು ಮಾರುಕಟ್ಟೆ ದೊರೆಯುತ್ತದೆ (ಸ್ವಂತ ಜಾಗ), ಕನ್ನಡವೂ ಬೆಳೆಯುತ್ತದೆ (ಸಮೃದ್ದ ಬೆಳೆ ), ಕನ್ನಡದ ಬೇಡಿಕೆ ಏರುತ್ತದೆ (ಬೆಳೆಗೆ ಸಿಗುವ ಬೆಲೆ)  ಜೊತೆ ಜೊತೆಗೆ ಕನ್ನಡಿಗರು ಬೆಳೆಯುತ್ತಾರೆ (ಸ್ವಾಭಿಮಾನಿ ಹಾಗು ಶ್ರೀಮಂತ ರೈತ) 

ಅದಕ್ಕೆ ನಾನೊಂದು ಕೊಂಡಿದ್ದು "ಕನ್ನಡಕ್ಕೊಂದು" ಕಾಫಿ ತೋಟ ಇರಲಿ, "ಕನ್ನಡ"ಕೊಂದು ಕಾಡು ಬೆಳೆಯದಿರಲಿ!!!