ಮಂಗಳವಾರ, ಜುಲೈ 5, 2011

ನಮಗಿದು ಬೇಕಾ??

ಇದು ಸುಮಾರು ೫ ರಿಂದ ೬ ವರ್ಷಗಳ ಹಿಂದಿನ ಕಥೆ, ನಮ್ಮ ಬೆಂಗಳೂರಿನಲ್ಲಿ ಎಫ್ ಎಂ ರೇಡಿಯೋ ಗಳು ಅಂಬೆಗಾಲು ಇಡುತ್ತ ನಾ ಮುಂದು, ತಾ ಮುಂದು ಎನ್ನುತ್ತಾ ತಮ್ಮ ಉಳಿವಿಗಾಗಿ ಹಾಗು 'ನಂ. ೧' ಸ್ಥಾನಕ್ಕಾಗಿ ಹೋರಾಡುತ್ತಿದ್ದ ಕಾಲ. ಆಗ ಬೆಂಗಳೂರಿನಲ್ಲಿ ಇದ್ದ ಕೆಲವೇ ಕೆಲವು ಎಫ್. ಎಂ ಪ್ರಸರ ಕೇಂದ್ರಗಳು ಬರಿ ವಲಸಿಗರನ್ನು ತೃಪ್ತಿ ಪಡಿಸುವ ಸಲುವಾಗಿಯೋ ಅಥವಾ ಬೆಂಗಳೂರಿನವರ ಅಭಿರುಚಿಯನ್ನು ಸರಿಯಾಗಿ ತಿಳಿಯದೆ ಮಾಡಿದ ಪ್ರಮಾದವೋ, ಏನೋ? ಬರಿ  ಹಿಂದಿ ಹಾಗು ಇಂಗ್ಲಿಷ್ ಹಾಡುಗಳನ್ನು ಪ್ರಸಾರ ಮಾಡುತ್ತಾ ಅತಿ ದೊಡ್ಡ ಕೇಳುಗರ ಗುಂಪಿನಿಂದ ಎಫ್. ಎಂ. ಎನ್ನುವುದು ದೂರ ಉಳಿದಿತ್ತು. ಆಗ ಬಂದ ಕೆಲವು ಹೊಸ ಚಾನೆಲ್ಗಳಿಗೆ ಯಾರು ಹೇಳಿ ಕೊಟ್ಟರೋ ಏನೋ ಗೊತ್ತಿಲ್ಲ 'ಬರಿ ಕನ್ನಡ ಹಾಡು ಹಾಕಿ ಮತ್ತೆ ಕೇಳುಗರ ಸಂಖ್ಯೆ ನೋಡಿ' ಎಂದು, ಅವು ಅದನ್ನೇ ಮಾಡಿದವು. ಅದರ ಫಲಿತಾಂಶ ಈಗ ಆ ಚಾನೆಲ್ಲುಗಳು 'ಟಾಪ್ ೫' ಸ್ತಾನದಲ್ಲಿವೆ. ಜೊತೆಗೆ ಆದ ಮತ್ತೊಂದು ಬದಲಾವಣೆ ಅಂದರೆ 'ಬರಿ ಹಿಂದಿ ಹಾಗು ಇಂಗ್ಲಿಷ್ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದ ಚಾನೆಲ್ಲಗಳು ಕೂಡ ಕನ್ನಡ ಹಾಡುಗಳನ್ನು ಹಾಕಿ ಟಾಪ್ ೫ ಸ್ಥಾನಕ್ಕೆ ಸೆಣೆಸುತ್ತಿವೆ. 

ಹೀಗೆ ಹೊಸದನ್ನು ಮಾಡಿ ಈಗ ನಂಬರ್ ಒನ್ ಸ್ಥಾನದಲ್ಲಿ ಇರುವ ಚಾನೆಲ್ ಎಂದರೆ ಅದು ಬಿಗ್ ಎಫ್. ಎಂ. ೯೨.೭. ( ಒಂದು ಕಾಲದ, ನನಗೆ ಅತ್ಯಂತ ಇಷ್ಟವಾದ ಎಫ್. ಎಂ. ಚಾನೆಲ್!), ಆಗ ಬರಿ ಕನ್ನಡ ಹಾಡುಗಳನ್ನು ಮಾತ್ರ ಹಾಕಿ ಜನರನ್ನು ತನ್ನತ್ತ ಸೆಳೆದ ಇವರು ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಹಾಗು ಮೈಸೂರು ಪ್ರಸಾರ ಕೇಂದ್ರಗಳಲ್ಲಿ, ಸುಂದರ ಕನ್ನಡ ಹಾಡುಗಳ ಮಧ್ಯೆ ಹಿಂದಿ ಹಾಡುಗಳನ್ನು ಹಾಕಲು ಶುರು ಮಾಡಿದ್ದರೆ, ಈಗ ಮೈಸೂರಿನಲ್ಲಿ ಇರುವ ನನಗೆ ಅನಿಸಿದ್ದು ಏನೆಂದರೆ ಇವರು ಕನ್ನಡಕ್ಕಿಂತ ಹೆಚ್ಹಾಗಿ ಹಿಂದಿ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದಾರೆ ಎಂದು.

ಸಿಹಿಯಾದ, ಮೃದುವಾದ ಜಾಮೂನನ್ನು ಬಾಯಿ ತುಂಬ ತಿನ್ನುವಾಗ ಒರಟಾದ ಕಲ್ಲು ಸಿಕ್ಕರೆ ಹೇಗೆ ಹೇಳಿ? ನಾನು ಕೆಲ ದಿನಗಳು ಸಹಿಸಿದೆ, ಅತಿ ಹೆಚ್ಹು ಇಷ್ಟ ಪಡುವ ಚಾನೆಲ್ ಆಗಿದ್ದರಿಂದ ಕೆಲ ದಿನ ಇಷ್ಟವಿಲ್ಲದಿದ್ದರೂ ಕನ್ನಡ ಹಾಡುಗಳ ಮಧ್ಯೆ ಪ್ರಸಾರವಾಗುವ ಹಿಂದಿ ಹಾಡುಗಳನ್ನ ಕೇಳುತ್ತಿದ್ದೆ. ಅತಿ ಪ್ರಿಯವಾದ ನನ್ನ ಬಿಗ್ ಎಫ್ ಎಂ ಚಾನೆಲ್ ಅನ್ನು ಬಿಟ್ಟು ಹೋಗಲು ಮನಸಾಗದೆ, ನನ್ನ ಕಷ್ಟದ ಬಗ್ಗೆ ನಿಲಯದ ವ್ಯವಸ್ಥಾಪಕರಿಗೆ ತಿಳಿಸಿ, ಬರಿ ಕನ್ನಡ ಹಾಡುಗಳನ್ನು ಪ್ರಸಾರ ಮಾಡಿ ಎಂದು ಪ್ರಾರ್ಥಿಸಲು, ಹೇಗೋ ಮಾಡಿ ಮೈಸೂರಿನ ಎಫ್. ಎಂ. ನಿಲಯದ ದೂರವಾಣಿ ಸಂಖ್ಯೆಯನ್ನು  ಸಂಪಾದಿಸಿ ಕರೆ ಮಾಡಿದೆ.

ನಾನು ಅಂದು ಮಾತನಾಡಿದ್ದು ಬಿಗ್ ಎಫ್ ಎಂ ನ ಮೈಸೂರಿನ ಕಾರ್ಯಕ್ರಮಗಳನ್ನು ನೋಡಿಕೊಳ್ಳುವ ವ್ಯಸ್ಥಾಪಕರ (ಪ್ರೋಗ್ರಾಂ ಕೋಆರ್ಡಿನೆಟರ) ಹತ್ತಿರ, 'ನಿಮ್ಮ ಚಾನೆಲ್ಲಿನಲ್ಲಿ ಆರಾಮಾಗಿ ಕನ್ನಡ ಹಾಡು ಕೇಳುತ್ತಿದ್ದ ನನಗೆ ಮಧ್ಯ ಮಧ್ಯ ಹಿಂದಿ ಹಾಡನ್ನು ಯಾಕೆ ಕೇಳಿಸ್ತೀರ  ಸ್ವಾಮೀ, ಬರಿ ಕನ್ನಡ ಹಾಡುಗಳನ್ನು ಯಾಕೆ ಹಾಕಬಾರದು ನೀವು?'. ಎಂಬ ನನ್ನ ಪ್ರಶ್ನೆಗೆ ಅವರಿಂದ ಬಂದ ಉತ್ತರಗಳು ಹೇಗಿದ್ದವು, "ಹಿಂದಿ ನಮ್ಮ ರಾಷ್ಟ್ರ ಭಾಷೆ, ಮೈಸೂರಿನಲ್ಲಿ ಹಿಂದಿ ಬಾರದ ೨೦ ಜನರನ್ನು ನನಗೆ ತೋರಿಸಿ, ನಾವು ಎಲ್ಲ ಭಾಷೆಯ ಜನರನ್ನು ಮನರಂಜಿಸ ಬೇಕು, ನಮ್ಮ ಕಾರ್ಯಕ್ರಮಗಳ ರೂಪುರೇಷೆ ಗಳೇ ಹಾಗೆ....". ನಾನಂತು ಸುಸ್ತು ಆಗಿಬಿಟ್ಟೆ, ಅವರ ಉತ್ತರಕ್ಕಲ್ಲ ಅವರ ಅಜ್ಞಾನಕ್ಕಾಗಿ.

ಮೊದಲನೆಯದಾಗಿ, ಭಾರತ ವ್ಯವಿದ್ಯತೆಗಳ ತವರೂರು, ಅದರಲ್ಲೂ ಭಾಷಾ ವ್ಯವಿದ್ಯತೆ ನಮ್ಮ ಹಿರಿಮೆ, ಇಂತಹ ದೇಶದಲ್ಲಿ ಯಾವುದೇ ಒಂದು ಭಾಷೆಯನ್ನು ಹೇಗೆ ರಾಷ್ಟ್ರ ಭಾಷೆ ಎಂದು ಪರಿಗಣಿಸಿ ಉಳಿದ ಭಾಷೆಗಳನ್ನು ಕಡೆಗಣಿಸಲು ಹೇಗೆ ಸಾಧ್ಯ? ಎಲ್ಲಾ ರಾಜ್ಯಗಳ ಭಾಷೆಗೂ ಅದರದೇ ಆದ ನೆಲೆಗಟ್ಟು, ಇತಿಹಾಸ, ಸಂಸ್ಕೃತಿ ಇದೆ, ಇವುಗಳ ನಡುವೆ ನಾವು ಯಾವುದೇ ಒಂದು ಭಾಷೆಗೆ ಮನ್ನಣೆ ನೀಡಿದೆರೆ ನಮ್ಮ ವ್ಯವಿದ್ಯತೆಯನ್ನು ನಾವೇ ಕೊಂದುಹಾಕಿದಂತೆ ಅಲ್ಲವೇ? ಅದೆಲ್ಲಕ್ಕಿಂತ ಹೆಚ್ಹಾಗಿ ನಮ್ಮ ದೇಶಕ್ಕೆ 'ರಾಷ್ಟ್ರ ಭಾಷೆ' ಅನ್ನುವುದೇ ಇಲ್ಲ ಎಂಬ ವಿಚಾರ ಇವರಿಗೆ ತಿಳಿದಿಲ್ಲ ಎಂಬುದೇ ನನಗೆ ಆಶ್ಚರ್ಯದ ವಿಷಯ.. ಇವರಿಗೆ ಈ ವಿಷಯವನ್ನು ತಿಳಿಸಲು ನಾನು ಕೆಳಗಿನ ಕೊಂಡಿಯನ್ನು ಉದಾಹರಣೆಯಾಗಿ ನೀಡ ಬೇಕಾಗಿ ಬಂತು.
 http://articles.timesofindia.indiatimes.com/2010-01-25/india/28148512_1_national-language-official-language-hindi

http://www.mid-day.com/news/2011/jun/240611-RTI-Manoranjan-Roy-Home-Ministry-official-name-passport.htm

ಎರಡನೆಯದು, ಮೈಸೂರಿನಲ್ಲಿ ಹಿಂದಿ ಬಾರದ ೨೦ ಜನ ಬೇಕಂತೆ ಹಾಗು ಅವರು ಎಲ್ಲ ಭಾಷೆಯ ಜನರನ್ನು ರಂಜಿಸ ಬೇಕಂತೆ, ಸ್ವಾಮಿ, ಮೈಸೂರನ್ನು ಒಂದು ಸುತ್ತು ಸರಿಯಾಗಿ ಹೊಡೆದು ನೋಡಿದ್ದರೆ ಅವರು ಈ ಮಾತನ್ನು ನನಗೆ ಹೇಳುತ್ತಿರಲಿಲ್ಲ, ' ಜನರ ಭಾಷೆ ಹಾಗು ಅಭಿರುಚಿಗಳನ್ನು ತಿಳಿಯದೆ ಅದು ಹೇಗೆ ಕಾರ್ಯಕ್ರಮಗಳನ್ನು ರೂಪಿಸುತ್ತರೋ ನಾನರಿಯೆ?'. ಕನ್ನಡಿಗರೇ ತುಂಬಿರುವ ಮೈಸೂರಿನಲ್ಲಿ ಕೇವಲ ಕೆಲವು ವಲಸಿಗರಿಗೊಸ್ಕರ ಅಷ್ಟು ಜನ ಕನ್ನಡಿಗರು ಕನ್ನಡೇತರ ಹಾಡುಗಳನ್ನು ಕೇಳಬೇಕಾ? ಇವರು ಎಲ್ಲ ಭಾಷೆಯ ಜನರನ್ನು ರಂಜಿಸುತ್ತಾರೆ ಅನ್ನವುದಾದರೆ ನಾವು ಚೆನ್ನೈ, ಮುಂಬೈ, ದೆಹಲಿ ಅಂಥಹ ಮುಂತಾದ ನಗರಗಳಲ್ಲಿ ಕನ್ನಡ ಹಾಡುಗಳನ್ನು ಬಿಗ್ ಎಫ್. ಎಂ . ಏಕೆ ಪ್ರಸಾರ ಮಾಡುವುದಿಲ್ಲ? ಅಲ್ಲಿಯೂ ಕನ್ನಡಿಗರಿದ್ದಾರೆ, ಅವರಿಗೂ ಮನರಂಜನೆ ಬೇಕಲ್ಲವೇ? ಇದು ಯಾವ ನ್ಯಾಯ?

ಇನ್ನು ಅವರ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ನನ್ನ ಯಾವುದೇ ಪ್ರತಿಕ್ರಿಯೆ ಇಲ್ಲ, ಅವರು ಹಿಂದಿ ಹಾಡುಗಳನ್ನು ಹಾಕುವ ರೂಪುರೇಷೆಗಳನ್ನು ರಚಿಸಿ ಕೊಂಡಿದ್ದಾರೆ, ಕೆಳುಗರಾದ ನಾವು ನಮಗೆ ಇಷ್ಟವಾದ ಕನ್ನಡ ಹಾಡುಗಳನ್ನು ಪ್ರಸಾರ ಮಾಡುವ ಚಾನೆಲ್ಲುಗಳಿಗೆ ವಾಲುತ್ತೇವೆ. ನಾನೀಗ ಅದನ್ನೇ ಮಾಡುತ್ತಿದ್ದೇನೆ,  ಕರ್ನಾಟಕದಲ್ಲಿ ಯಾವ ಭಾಷೆಯಲ್ಲಿ ಮನರಂಜನೆ ನೀಡಬೇಕು ಎಂದು ತಿಳುದು ಕೊಳ್ಳದ ಹಾಗು ನಮ್ಮ ಅಭಿರುಚಿಗಳಿಗೆ ಸ್ಪಂದಿಸದ ಬಿಗ್ ಎಫ್ ಎಂ ಅನ್ನು ಕೇಳುವ ಗೋಜಿಗೆ ನಾನು ಹೋಗುತ್ತಿಲ್ಲ, ನನ್ನ ರೇಡಿಯೋದಲ್ಲಿ ೯೨.೭ ತರಂಗಾಂತರವನ್ನು ನಾನು ತೆಗೆದು ಹಾಕಿದ್ದೇನೆ.
ಜೊತೆಗೆ ನಾನು ಇದನ್ನು ಓದಿದವರಿಗೆ ಕೇಳುವ ಪ್ರಶ್ನೆ '೨೪ ಗಂಟೆ ಕನ್ನಡ ಹಾಡುಗಳನ್ನು ಹಾಕುವ ಎಷ್ಟೋ ಪ್ರಸಾರ ಕೇಂದ್ರ ಗಳು ನಮ್ಮ ನಡುವೆ ಇರುವಾಗ ಇಂಥಹ ಅರೆಬೆರಕೆ ಮನರಂಜನೆ ಬೇಕಾ? ನಮಗಿದು ಬೇಕಾ??'

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ