ಬುಧವಾರ, ನವೆಂಬರ್ 21, 2012

m - governance - ಒಂದು ಕಿರು ನೋಟ



ನಾವು ಕಾಣದ, ಕೇವಲ ಕೇಳಿದ ಅಥವಾ ಇತಿಹಾಸದ ಪುಟಗಳಲ್ಲಿ ಓದಿದ ಪ್ರಕಾರ ರಾಜ ಮನೆತನದ ಆಳ್ವಿಕೆಯ ಕಾಲದಲ್ಲಿ ರಾಜರ ಕಾನೂನು, ರಾಜಾಜ್ಞೆ ಹಾಗು ಇನ್ನಿತರ ಆಡಳಿತಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಡಂಗುರ ಸಾರುವುದರ  ಮೂಲಕ ತಿಳಿಸಲಾಗುತ್ತಿತ್ತು, ನಂತರ ಬಂದ  ಮಂದಿಯಾಳ್ವಿಕೆ (ಪ್ರಜಾಪ್ರಭುತ್ವ) ಯಲ್ಲಿ, ಸರ್ಕಾರವು ತನ್ನ ಮಾಹಿತಿಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಸುದ್ದಿ ಮಾಧ್ಯಮವನ್ನು ಬಳಸಿತು. ಕಂಪ್ಯೂಟರ್ ಕ್ರಾಂತಿಯಿಂದ ಸರ್ಕಾರ ಮತ್ತು ಜನರ ನಡುವಿನ ಅಂತರ ಮತ್ತಷ್ಟು ಕಡಿಮೆ ಆಯಿತು. ಸರ್ಕಾರವು ತನ್ನ ಮಾಹಿತಿಗಳ ಜೊತೆ ಕೆಲವು ಸೇವೆಗಳನ್ನು ಕೂಡ ಈ ಅಂತರ್ಜಾಲದ ಸಹಾಯದಿಂದ ಜನರಿಗೆ ನೀಡಲು ಸಾಧ್ಯವಾಯಿತು. ಎತ್ತುಗೆಗೆ, ನಮ್ಮ ಚುನಾವಣೆ  ಗುರುತಿನ ಚೀಟಿಯ ವಿವರವನ್ನು ಸರ್ಕಾರಿ ಮಿಂದಾಣದಲ್ಲಿ ಪಡೆಯಬಹುದು. ಹೀಗೆ e - governance ಎಂಬ ಪರಿಣಾಮಕಾರಿ ಸೇವೆಯ ಹುಟ್ಟಿನಿಂದ ಸರ್ಕಾರ ಹಾಗು ಜನರಿಗೆ ಮಾಹಿತಿ ಹಂಚಿಕೊಳ್ಳಲು ನೆರವಾಗಿದೆ.
ನಮ್ಮ ದೇಶದಲ್ಲಿ ಅಂತರ್ಜಾಲ ಹಾಗು ಕಂಪ್ಯೂಟರ್ ತಿಳುವಳಿಕೆ ಉಳ್ಳವರ ಹಾಗು ಇವುಗಳ ಸೌಕರ್ಯ ಹೊಂದಿರುವವರ ಎಣಿಕೆ ತೀರ ಕಡಿಮೆ ಇರುವುದು  e - governance  ಅನ್ನು ಪೂರ್ಣವಾಗಿ ಬಳಸಿಕೊಳ್ಳಲು ಆಗುತ್ತಿಲ್ಲ. ಆದರೆ, ದೇಶದಲ್ಲಿ ದೊಡ್ಡದಾಗಿ ಬೆಳೆಯುತ್ತಿರುವ ಅಲೆಯುಲಿ (ಮೊಬೈಲ್ ಫೋನ್) ಬಳಕೆದಾರರ ಎಣಿಕೆ  m - governance ಸೇವೆ ನೀಡಲು ಆಶಾದಾಯಕವಾಗಿದೆ!

ಏನಿದು m - governance?
m - governance ಎಂಬುದು e - governance ನ ಒಂದು ಭಾಗ, ಇದರಲ್ಲಿ  ಸರ್ಕಾರವು ತನ್ನ ಸೇವೆ ಹಾಗು ಮಾಹಿತಿಯನ್ನು ಅಲೆಯುಲಿಗಳ (ಮೊಬೈಲ್ ಫೋನ್) ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಬಹುದು. ಎತ್ತುಗೆಗೆ ಒಂದು ಚುಟುಕು ಓಲೆ (SMS ) ಕಳಿಸುವುದರ ಮೂಲಕ ಹೇಗೆ ಒಬ್ಬ ವಿದ್ಯಾರ್ಥಿಯ SSLC ಅಂಕಗಳನ್ನು ತಿಳಿಯುವರೋ ಹಾಗೆ. ದೇಶದಲ್ಲಿ ಅಲೆಯುಲಿ ಬಳಕೆದಾರರ ಎಣಿಕೆ ಈಗಾಗಲೇ ಅತಿ ಹೆಚ್ಚು ಇರುವುದರಿಂದ ಹಾಗು ವೇಗವಾಗಿ ಇದು ಬೆಳೆಯುತ್ತಿರುವುದರಿಂದ m - governance ಸೇವೆ ಗೆಲುವು ಪಡೆಯುದು ಎಂಬ ನಿರೀಕ್ಷೆ ಇದೆ.

m - governance ನಿಂದ ಏನೆಲ್ಲಾ ಸೇವೆ ನೀಡಬಹುದು?
  • ಸರ್ಕಾರಕ್ಕೆ ಸಂಬಂಧ ಪಟ್ಟ, ಮಾಹಿತಿ ಹಕ್ಕಿನ ಗಡಿಯೊಳಗೆ ಬರುವ ಮಾಹಿತಿಗಳನ್ನು ಜನರ ಅಂಗೈಗೆ ತಲುಪುವಂತೆ ಮಾಡಬಹುದು.
  • ಜನ ಸಾಮಾನ್ಯರು ಕುಂದು ಕೊರತೆಗಳನ್ನು, ಹೊಸ ಯೋಜನೆಗಳ ಅವಶ್ಯಕತೆಯನ್ನು, ಪ್ರತಿಕ್ರಿಯೆಗಳನ್ನು ಹಾಗು ದೂರೂಗಳನ್ನು ಅಲೆಯುಲಿ ಮೂಲಕವೇ ಸರ್ಕಾರಕ್ಕೆ ತಿಳಿಸುವಂತೆ ಆಗಬಹುದು.
  • ಸರ್ಕಾರವು ಕೆಲವು ಯೋಜನೆಗಳಿಗೆ ಜನರ ಅಭಿಪ್ರಾಯವನ್ನು ಮತಗಳ ಮೂಲಕ ಪಡೆಯಬಹುದು (m - voting )
  • ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ಇಲ್ಲವೇ ಇನ್ನಿತರ ಬಾಕಿ ವಿವರಗಳನ್ನು ಪಡೆಯಬಹುದು.
  • ಹೆಚ್ಹು ಮಳೆ ಬಂದು ನೆರೆ ಬಂದಾಗ, ಭೂಕಂಪನ ಅಥವಾ ಇನ್ನಿತರ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರ ಜನರನ್ನು ತಲುಪಿ ಜಾಗ್ರತೆಯ ಮಾಹಿತಿ ನೀಡಬಹುದು ಹಾಗೆ ಜನರಿಗೂ ಸಂಬಂಧಪಟ್ಟ ಅಧಿಕಾರಿಗಳನ್ನು ತಲುಪಲು ಸಹಾಯಕಾರಿ.
  • ...... ಹೀಗೆ ಹತ್ತು ಹಲವು.
ಈ ಎಲ್ಲ ಯೋಜನೆಗಳನ್ನು ಹೊಸ ಹೊಸ ಸೇವೆಗಳನ್ನು ಕೇಳಲು ಬಹಳ ನಲಿವಾಗುತ್ತೆ ಆದರೆ ಇದು ಅತಿ ಮೂಲಭೂತವಾದ 'ನುಡಿ-ಮಾಧ್ಯಮ'ವನ್ನು ಸರಿಯಾಗಿ ಪಾಲಿಸದಿದ್ದಲ್ಲಿ ಈ ಸೇವೆಗಳ ಸೋಲು ಖಂಡಿತ ಅನ್ನಿಸುತ್ತದೆ. ಯಾವುದೇ ಸರ್ಕಾರಕ್ಕೆ ತನ್ನ ಜನರನ್ನು ತಲುಪಲು ಆ ಜನರ ನುಡಿಯೇ ಸಾಧನ. ಒಮ್ಮೆ ಯೋಚಿಸಿ ನೋಡಿ, ಮೇಲೆ ತಿಳಿಸಿದ ಎಲ್ಲ ಸೇವೆಗಳು ಕರ್ನಾಟಕದಲ್ಲಿ ಜಾರಿಗೆ ಬಂದರೆ ಮತ್ತು ಆ ಸೇವೆಗಳು ಕೇವಲ ಇಂಗ್ಲಿಷ್ ಮೂಲಕ ಸಿಗುವಂತಿದ್ದರೆ 7 ಕೋಟಿ ಕನ್ನಡಿಗರಲ್ಲಿ ಎಷ್ಟು ಜನರಿಗೆ ಉಪಯೋಗ ಆಗಬಹುದು? ನೆರೆ ಬಂದಾಗ, ಸರ್ಕಾರ ಸುರಕ್ಷ್ಸತೆಯ ಕುರಿತು ಮಾಹಿತಿಗಳನ್ನು ಇಂಗ್ಲೀಷಿನಲ್ಲಿ ನೀಡುತ್ತಿದ್ದರೆ ಇಂಗ್ಲಿಷ್ ಬಾರದವರೆಲ್ಲ ನೀರಿನಲ್ಲಿ ಕೊಚ್ಚಿ ಹೋಗಿರುತ್ತಾರೆ! 

ಪಕ್ಕದ ಕೇರಳ ಸರ್ಕಾರ m - governance ಪದ್ದತಿಯನ್ನು ಅಳವಡಿಸಿಕೊಂಡು ಸೇವೆ ನೀಡುತ್ತಿದೆ, ಒಂದು ಚುಟುಕೋಲೆ (SMS) ಕಳಿಸುವುದರ ಮೂಲಕ ಜನರು]ತಮ್ಮ]ಚುನಾವಣೆ  ಗುರುತಿನ ಚೀಟಿ ವಿವರ ತಿಳಿಯಬಹುದು ಮತ್ತು ಇತ್ತೀಚಿಗೆ ಇದೇ ಸರ್ಕಾರದ ಆರೋಗ್ಯ ಇಲಾಖೆ, ನಿಷೇಧಿತ ಔಷಧಿಗಳ ವಿವರವನ್ನು ತಿಳಿಯ ಬಯಸುವವರಿಗೆ, ವಿವರಗಳನ್ನು ಚುಟುಕೋಲೆ ಮೂಲಕ ತಿಳಿಸುವ ವ್ಯವಸ್ಥೆ ಮಾಡಿದೆ.  ನೆರೆ, ನಿಷೇಧಿತ ಔಷಧಿ, ಭೂಕಂಪನ ಹೀಗೆ ಪ್ರಾಣ ಹಾನಿ ತರುವಂತಹ ವಿವರಗಳು ಜನರಿಗೆ ತಿಳಿಯುವ ನುಡಿಯಲ್ಲಿ ಸಿಗದಿದ್ದರೆ ಏನು ಪ್ರಯೋಜನ?   

ಚಿತ್ರ ಕೃಪೆ -ಗೂಗಲ್ ಇಮೇಜ್ 

ಕರ್ನಾಟಕ ಸರ್ಕಾರ m - governance ಸೇವೆಯನ್ನು ಜನರಿಗೆ ತಿಳಿಯುವ ಕನ್ನಡದಲ್ಲಿ ನೀಡುವುದು ಎಷ್ಟು ಮುಖ್ಯವೋ, ಜನರ ಅಲೆಯುಲಿಗಳಲ್ಲಿ ಕನ್ನಡ ಆಯ್ಕೆ ಇರುವುದು ಅಷ್ಟೇ ಮುಖ್ಯ, ಈಗ ಮಾರುಕಟ್ಟೆಯಲ್ಲಿ ಇರುವ ಅಲೆಯುಲಿಗಳಲ್ಲಿ ಹೆಚ್ಚಿನವುಗಳಲ್ಲಿ ಕನ್ನಡವನ್ನು ಓದಲು-ಬರೆಯಲು ಆಗದು. ಕನ್ನಡ ಆಯ್ಕೆ ಇರುವ ಅಲೆಯುಲಿಯನ್ನು ಸರ್ಕಾರವು ನಾಡಿನ ಎಲ್ಲರಿಗು ನೀಡಲು ಸಾಧ್ಯವಿಲ್ಲ, ಇಲ್ಲವೇ ನಾಡಿನಲ್ಲಿ ಎಲ್ಲರಿಗು ಇಂಗ್ಲಿಷ್ ಕಲಿಸುವ ಯೋಜನೆ ಏನಾದರು ಸರ್ಕಾರ ಹಾಕಿಕೊಂಡಲ್ಲಿ ಅದು ನಗೆಪಾಟಲಿಗೆ ಈಡಾಗುತ್ತದೆ. ಅಲ್ಲದೆ, ಎಲ್ಲಾ ಜನರ ಹಣಕಾಸಿನ ಪರಿಸ್ಥಿತಿ ಮತ್ತು ಬಯಕೆಗಳು  ಒಂದೇ ರೀತಿಯಲ್ಲಿ ಇರುವುದಿಲ್ಲ, ಒಬ್ಬ ಒಂದು ಸಾವಿರ ರುಪಾಯಿಯ ಅಲೆಯುಲಿ ಕೊಂಡರೆ ಇನ್ನೊಬ್ಬ ಮೂವತ್ತು ಸಾವಿರದ ಅಲೆಯುಲಿ ಹೊಂದಿರುತ್ತಾನೆ, ಆದ್ದರಿಂದ ಕನ್ನಡ ಆಯ್ಕೆ ಇರುವ ಅಲೆಯುಲಿಯನ್ನೇ ಕೊಳ್ಳಬೇಕು ಎಂದು ನಿರ್ಭಂಧ ಹಾಕಲು ಆಗುವುದಿಲ್ಲ.  ನಾಡಿನಲ್ಲಿ ಮಾರಾಟವಾಗುವ ಎಲ್ಲಾ ಅಲೆಯುಲಿಗಳಲ್ಲಿ ಕನ್ನಡ ಆಯ್ಕೆ ಇದ್ದಲ್ಲಿ ಮಾತ್ರ ಈ ಸಮಸ್ಯೆಗೆ ಪರಿಹಾರ. ಇಂತಹ ಬೇಡಿಕೆಯೊಂದನ್ನು ತಯಾರಕ ಕಂಪನಿಗಳ ಮುಂದಿಡುವ ಕೆಲಸ ಕನ್ನಡ ಗ್ರಾಹಕರು ಮಾಡಬೇಕಿದೆ. ನಾವು ಕೊಳ್ಳುವ ಅಲೆಯುಲಿಯಲ್ಲಿ ಕನ್ನಡ ಆಯ್ಕೆ ಇದೆಯೇ ನೋಡಿಕೊಂಡು ಇಲ್ಲದಿದ್ದಲ್ಲಿ ಕನ್ನಡ ಆಯ್ಕೆಗೆ ಒತ್ತಾಯ ಮಾಡಿದಲ್ಲಿ ಮುಂಬರುವ ದಿನಗಳಲ್ಲಿ ಕನ್ನಡವನ್ನು ಎಲ್ಲಾ ಅಲೆಯುಲಿಗಳಲ್ಲಿ ಕಾಣಬಹುದು ಮತ್ತು ಅದರ ಪ್ರಯೋಜನ ಪಡೆದುಕೊಳ್ಳಬಹುದು.

m - governance ಎನ್ನುವ ವಿಶಿಷ್ಟ ಸೇವೆಯಿಂದ ಜನರ ಅಂಗೈ ಮೇಲೆ ಸರ್ಕಾರದ ಮಾಹಿತಿ ಮತ್ತು ಸೇವೆಗಳು ಸಿಗುವಹಾಗಿದೆ, ಈ ಸೇವೆ ಕರ್ನಾಟಕದಲ್ಲಿ, ಕನ್ನಡದಲ್ಲೇ ಕನ್ನಡಿಗರಿಗೆ ಸಿಕ್ಕಿದರೆ ಒಂದು ಅರ್ಥ ಬರುತ್ತದೆ. ಅದಕ್ಕೆ ಬೇಕಾದ ವ್ಯವಸ್ಥೆ ರೂಪಿಸುವಲ್ಲಿ ಸರ್ಕಾರದ ಪಾತ್ರದ ಜೊತೆಗೆ ಕನ್ನಡಿಗ ಗ್ರಾಹಕನಾಗಿ ನಮ್ಮ ಪಾತ್ರವು ಇದೆ. ಮುಂದೆ, ಯಾವುದೇ ಹೊಸ ಅಲೆಯುಲಿ ಕೊಳ್ಳುವಾಗ ಕನ್ನಡ ಆಯ್ಕೆ ಇದೆಯೇ ನೋಡಿ, ಇಲ್ಲದಿದ್ದಲ್ಲೇ ಆ ಕಂಪನಿಗೊಂದು ಪತ್ರ ಬರೆದು ಕನ್ನಡ ಆಯ್ಕೆಗಳನ್ನು ನೀಡುವಂತೆ ತಿಳಿಸಿ. ಹಾಗೆಯೇ ಸರ್ಕಾರಿ ಸೇವೆಗಳು m - governance ಮೂಲಕ ಕನ್ನಡದಲ್ಲಿ ಸಿಗದಿದ್ದಲ್ಲಿ ಕನ್ನಡದಲ್ಲಿ ನೀಡುವಂತೆ ಒತ್ತಾಯವಿರಲಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ