ಕನ್ನಡಕ್ಕೆ ಡಬ್ಬಿಂಗ್ ಬಂದಲ್ಲಿ ಕನ್ನಡ ನುಡಿ ಹಾಗು ಕನ್ನಡಿಗರಿಗೆ ಉಪಯೋಗ ಆಗುವುದೇ ಹೊರತು ಯಾವ ಅಪಾಯವು ಇಲ್ಲ ಎಂದು ಬರೆದ ಅಂಕಣ "ಕಟ್ಟಿ ಹಾಕುವ ಸಂಸ್ಕೃತಿಯಿಂದ ನಷ್ಟ" ದಿನಾಂಕ ೫ - ಡಿಸೆಂಬರ್ - ೨೦೧೨ ರಂದು ಪ್ರಜಾವಾಣಿ ಸುದ್ದಿ ಹಾಳೆಯಲ್ಲಿ ಪ್ರಕಟವಾಗಿತ್ತು. ಆ ಅಂಕಣವನ್ನು ಮತ್ತೊಮ್ಮೆ ಕೆಳಗೆ ನೀಡಿದ್ದೇನೆ ಓದಿಲ್ಲವಾದರೆ ಒಮ್ಮೆ ಓದಿ ನಿಮ್ಮ ಅನಿಸಿಕೆ ಹಂಚಿಕೊಳ್ಳಿ.
*****************************************************************
"ಕಟ್ಟಿ ಹಾಕುವ ಸಂಸ್ಕೃತಿಯಿಂದ ನಷ್ಟ"
*****************************************************************
"ಕಟ್ಟಿ ಹಾಕುವ ಸಂಸ್ಕೃತಿಯಿಂದ ನಷ್ಟ"
ಕಳೆದ ಒಂದು ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತ ಬಂದಿರುವ ಡಬ್ಬಿಂಗ್ ಚರ್ಚೆ ಈಗ ಮತ್ತೆ ಕಾವೇರಿದೆ. ಕರ್ನಾಟಕ ಚಲನಚಿತ್ರ ಮಂಡಳಿಗೆ ಸಿನಿಮಾ ಮತ್ತು ಧಾರಾವಾಹಿಗಳ ಡಬ್ಬಿಂಗ್ ವಿರೋಧಿ ನೀತಿಯನ್ನು ಪ್ರಶ್ನಿಸಿ ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯ (ಸಿಸಿಐ) ಜಾರಿ ಮಾಡಿರುವ ಕೋರ್ಟ್ ನೋಟೀಸ್ ಮತ್ತೊಮ್ಮೆ ಈ ಡಬ್ಬಿಂಗ್ ಚರ್ಚೆಯನ್ನು ಮುಂಪುಟಕ್ಕೆ ತಂದಿದೆ. ಕೇವಲ ಕನ್ನಡಿಗ ಗ್ರಾಹಕ ಮತ್ತು ಚಿತ್ರರಂಗದ ನಡುವೆ ಇದ್ದ ಈ ಚರ್ಚೆ ಈಗ ಕಾನೂನು ಸಮರಕ್ಕೆ ಅಣಿಯಾಗಿ ನಿಂತಿದೆ. ಈ ಹೊತ್ತಿನಲ್ಲಿ "ಕನ್ನಡಕ್ಕೆ ಡಬ್ಬಿಂಗ್ ಬೇಡ" ಅನ್ನುವವರ ವಾದದ ಕಡೆ ಗಮನಹರಿಸಿದರೆ ಯಾವುದೇ ಹುರುಳಿಲ್ಲದ ಹಾಗೂ ಮುಂದೊಮ್ಮೆ ಕನ್ನಡಕ್ಕೆ ಮಾರಕ ಆಗುವಂತಹ ವಿಚಾರಗಳು ಹೊರಬೀಳುತ್ತವೆ. ಡಬ್ಬಿಂಗ್ ಬೇಡ ಅನ್ನುವುದಕ್ಕೆ ಡಬ್ಬಿಂಗ್ ವಿರೋಧಿ ಬಣ ಕೊಡುವ ಕಾರಣಗಳು;
- ಡಬ್ಬಿಂಗ್ ಕನ್ನಡ ವಿರೋಧಿ
- ಕನ್ನಡ ಹಾಳಾಗುವುದು
- ಕನ್ನಡ ಸಂಸ್ಕೃತಿ ಕೆಡುವುದು
- ಕನ್ನಡ ಚಿತ್ರರಂಗದವರ ಕೆಲಸ ಹೋಗುವು
ದು - ಹಾಗೆಯೇ ಕನ್ನಡ ಚಿತ್ರರಂಗ ಚಿಕ್ಕದು
ಅದು ಡಬ್ಬಿಂಗ್ ಅಲೆಯನ್ನು ತಡೆದುಕೊ ಳ್ಳುವ ಶಕ್ತಿ ಹೊಂದಿಲ್ಲ ಎನ್ನುವುದು
ಮೇಲಿನ ಒಂದೊಂದು ಕಾರಣಗಳನ್ನು ಬಿಡಿಸುತ್ತ ಹೋಗೋಣ.
ಕನ್ನಡಿಗರು ಕನ್ನಡದಲ್ಲೇ ಎಲ್ಲ ಬಗೆಯ ಮನರಂಜನೆ ಸಿಗಬೇಕೆನ್ನುವುದು ಹೇಗೆ ಕನ್ನಡ ವಿರೋಧಿ ಆಗುತ್ತದೆ? "ಜಗತ್ತಿನ ಯಾವುದೇ ಸಿನಿಮಾ ಅಥವಾ ಕಾರ್ಯಕ್ರಮವನ್ನು ನಾವು ನಮ್ಮದೇ ನುಡಿಯಲ್ಲಿ ನೋಡುವಂತಾಗಬೇಕು" ಎನ್ನುವುದು ಯಾವ ರೀತಿಯಿಂದಲೂ ಕನ್ನಡ ವಿರೋಧಿ ಎನಿಸಿಕೊಳ್ಳುವುದಿಲ್ಲ. ಅವತಾರ್ ನಂತಹ ಸಿನಿಮಾಗಳು, ಸತ್ಯ ಮೇವ ಜಯತೆಯಂತಹ ಕಾರ್ಯಕ್ರಮಗಳನ್ನು ಕನ್ನಡಿಗರು ಸವಿಯಲು ಬೇರೊಂದು ನುಡಿಯ ಮೊರೆ ಹೋಗಬೇಕಾಗಿರುವುದು ಕನ್ನಡಿಗರ ದೌರ್ಭಾಗ್ಯವೆಂದೇ ಹೇಳಬೇಕು. ಡಬ್ಬಿಂಗ್ ಇಲ್ಲವೆಂದ ಮಾತ್ರಕ್ಕೆ ಕನ್ನಡಿಗರು ಬೇರೆ ನುಡಿಯ ಚಿತ್ರಗಳನ್ನು ನೋಡದೆ ಬಿಡುತ್ತಿಲ್ಲ, ಕನ್ನಡೇತರ ಚಿತ್ರಗಳನ್ನು ನೋಡುವುದಕ್ಕಾಗಿ ಕನ್ನಡಿಗರು ಬೇರೆ ಭಾಷೆಯನ್ನು ನಿಧಾನವಾಗಿ ಕಲಿಯುತ್ತಿದ್ದಾರೆ, ಹೀಗೆ ದಿನೇ ದಿನೇ ಕನ್ನಡೇತರ ಚಿತ್ರಗಳನ್ನು ನೋಡುವವರ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ, ಇದರಿಂದ ಪರಭಾಷೆ ಚಿತ್ರಗಳಿಗೆ ನಮ್ಮಲ್ಲಿ ಒಂದು ಒಳ್ಳೆ ಮಾರುಕಟ್ಟೆ ನಿರ್ಮಾಣ ಮಾಡಿಕೊಡಲಾಗಿದೆ!
ಇಂದಿನ ಮಕ್ಕಳಿಗೆ ಕಾರ್ಟೂನ್ ಆಗಲಿ ಒಳ್ಳೆಯ ಅನಿಮೇಷನ್ ಚಿತ್ರಗಳಾಗಲಿ ಅವರ ನುಡಿಯಲ್ಲಿ ಸಿಗುತ್ತಿಲ್ಲ, ವಿಜ್ಞಾನ ಮತ್ತು ಕಲಿಕೆಗೆ ಸಂಬಂಧಪಟ್ಟ ಹಿಸ್ಟರಿ, ನ್ಯಾಷನಲ್ ಜಿಯಾಗ್ರಫಿ ಮತ್ತು ಡಿಸ್ಕವರಿಯಂತಹ ಚಾನೆಲ್ ಗಳು ಕೂಡ ಕನ್ನಡದಲ್ಲಿ ಇಲ್ಲ, ಹೀಗೆ ಮಕ್ಕಳ ಬೆಳವಣಿಗೆಯ ಸಮಯದಲ್ಲಿ ಕನ್ನಡದ ಪಾತ್ರ ಏನೂ ಇಲ್ಲದೆ ಹೋದಲ್ಲಿ ಮುಂದಿನ ಪೀಳಿಗೆ ಕನ್ನಡವನ್ನು ನಿಜವಾಗಿಯೂ ಉಳಿಸಿಕೊಳ್ಳುವುದೇ? ಮಕ್ಕಳನ್ನು ಎಳೆಯ ವಯಸ್ಸಿನಿಂದಲೇ ಕನ್ನಡದಿಂದ ದೂರವಿಡುವುದು ಕನ್ನಡಕ್ಕೆ ಮಾರಕವೇ ಹೊರತು ಪೂರಕವಲ್ಲ. ಡಬ್ಬಿಂಗ್ ಇದ್ದಲ್ಲಿ ಕನ್ನಡ ಬೆಳೆಯುವುದೇ ಹೊರತು ಅಳಿಯುವುದಿಲ್ಲ ಎಂದು ಈ ಮೇಲಿನ ಉದಾಹರಣೆಗಳ ಮೂಲಕ ನಾವು ಅರಿತುಕೊಳ್ಳಬೇಕಿದೆ. ಡಬ್ಬಿಂಗ್ ಕನ್ನಡ ವಿರೋಧಿ ಎಂಬ ಅಪನಂಬಿಕೆ ಇಟ್ಟುಕೊಂಡು ನಿಧಾನವಾಗಿ ನಮ್ಮ ನುಡಿಯ ಅಂತ್ಯಕ್ಕೆ ನಾವೇ ಮುನ್ನುಡಿ ಬರೆಯುತ್ತಿದ್ದೇವೆ.
ಇನ್ನು ಕನ್ನಡ ಸಂಸ್ಕೃತಿಯ ವಿಚಾರಕ್ಕೆ ಬಂದರೆ ಕನ್ನಡ ಸಿನಿಮಾ ಎಂಬುದು ಕನ್ನಡ ಸಂಸ್ಕೃತಿಯ ಕನ್ನಡಿ ಅಲ್ಲವೇ ಅಲ್ಲ. ಹಾಗೇನಾದರು ಆಗಿದ್ದರೆ ಮಚ್ಚು ಹಿಡಿದು ಸಿಕ್ಕವರನ್ನು ಕೊಚ್ಚುವುದು, ಹೊಕ್ಕಳು ತೋರಿಸಿ ಹಣ್ಣೆಸೆಯುವುದು ಇವೆಲ್ಲ ನಮ್ಮ ಸಂಸ್ಕೃತಿ ಆಗಬೇಕಿತ್ತು. ಚಿತ್ರಗಳು ಸಂಸ್ಕೃತಿಯನ್ನು ಸಾರುತ್ತವೆ ಎನ್ನುವುದಾದರೆ ಚಿತ್ರರಂಗದವರು ಯಾವ ಸಂಸ್ಕೃತಿ ಬಿಂಬಿಸಲು ನೀಲಿ ಚಿತ್ರದ ನಾಯಕಿಯನ್ನು ಐಟಂ ಹಾಡಿಗೆ ಕುಣಿಸುವ ಪ್ರಯತ್ನ ಪಟ್ಟಿದ್ದರು ಎಂದು ತಿಳಿಯದು. ಡಬ್ಬಿಂಗ್ ಬಂದಾಕ್ಷಣ ನಾವು ನಾಡಹಬ್ಬ ದಸರಾ ನಿಲ್ಲಿಸುತ್ತೆವಾ? ಅಥವಾ ಸವದತ್ತಿ ಎಲ್ಲಮ್ಮನ ಜಾತ್ರೆ ಮಾಡೋದು ನಿಲ್ಲಿಸುತ್ತೆವಾ? ಅಥವಾ ಕನ್ನಡಿಗರು ತಮ್ಮತನವನ್ನೇ ಮರೆತು ಬಿಡುತ್ತಾರೆಯೇ? ಈ ಡಬ್ಬಿಂಗ್ ಮತ್ತು ಕನ್ನಡ ಸಂಸ್ಕೃತಿಗೂ ಎತ್ತಣದಿಂದ ಎತ್ತ ಸಂಬಂಧವೋ ತಿಳಿಯದು. ಡಬ್ಬಿಂಗ್ ಚಿತ್ರಗಳು ಕನ್ನಡ ಸಂಸ್ಕೃತಿಯನ್ನೇ ಕೊಲ್ಲುತ್ತೆ ಅನ್ನುವುದಾದರೆ ಡಬ್ಬಿಂಗ್ ಇರುವ ತಮಿಳು, ತೆಲುಗು, ಹಿಂದಿ, ಮರಾಠಿ, ಮಲಯಾಳಿ ಸಂಸ್ಕೃತಿಗಳೆಲ್ಲ ಇಷ್ಟೊತ್ತಿಗೆ ನಶಿಸಿ ಹೋಗಬೇಕಿತ್ತಲ್ಲವೇ? ಅಥವಾ ಕನ್ನಡ ಚಿತ್ರಗಳಿಂದಲೇ ಕನ್ನಡ ಸಂಸ್ಕೃತಿ ಉಳಿದಿದೆ ಅನ್ನುವುದಾದರೆ ಕನ್ನಡದಲ್ಲಿ ಬಂದ ಸಾಲು ಸಾಲು ಮಚ್ಚು-ಕೊಚ್ಚು ಚಿತ್ರಗಳಿಂದಾಗಿ ಕನ್ನಡ ಸಮಾಜದಲ್ಲಿ ಮನೆ ಮನೆಯಲ್ಲೂ ಮಚ್ಚಿನ ಕಾರುಬಾರು ನಡೆಯಬೇಕಿತ್ತೆನೋ ಅಥವಾ ಮಚ್ಚು ಕೊಚ್ಚು ಅನ್ನುವುದೇ ಕನ್ನಡ ಸಂಸ್ಕೃತಿಯಾಗಬೇಕಿತ್ತು. ಆದರೆ ಅಂತಹದ್ದು ಏನೂ ಆಗದಿರುವುದು ಡಬ್ಬಿಂಗ್ ಕನ್ನಡ ಸಂಸ್ಕೃತಿಗೆ ಮಾರಕ ಎಂಬುದು ಒಂದು ಅಪನಂಬಿಕೆ ಎಂದು ತಿಳಿಸುತ್ತದೆ.
ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವರ ವಿಚಾರಕ್ಕೆ ಬಂದರೆ, ಡಬ್ಬಿಂಗ್ ಬಂದಲ್ಲಿ ಚಿತ್ರರಂಗದ ಕೆಲಸಗಾರರು ಕೆಲಸ ಕಳೆದುಕೊಳ್ಳುತ್ತಾರೆ ಎಂಬ ವಾದ ಕೂಡ ಇದೆ. ಡಬ್ಬಿಂಗ್ ಬಂದೊಡನೆ ಪುನಿತ್ ರಾಜ್ ಕುಮಾರ್ ಚಿತ್ರ ಮಾಡೋದು, ಯೋಗರಾಜ್ ಭಟ್ರು ಸಾಹಿತ್ಯ ಬರೆಯೋದು, ಹರಿಕೃಷ್ಣ ಸಂಗೀತ ನೀಡೋದು ಇವರೆಲ್ಲ ತಮ್ಮ ಕೆಲಸ ನಿಲ್ಲಿಸಿ ಬಿಡುವುದಿಲ್ಲ, ಕನ್ನಡ ಚಿತ್ರಗಳು ಹಾಗು ಧಾರಾವಾಹಿಗಳು ಬರುವುದೂ ನಿಲ್ಲುವುದಿಲ್ಲ. ಇಷ್ಟಕ್ಕೂ ಈಗ ಬರುವ ಒಂದು ಕನ್ನಡ ಚಿತ್ರದಲ್ಲಿ ನಾಯಕಿ ಹಾಗು ಹಾಡುಗಾರರು ಮುಂಬೈನಿಂದಲೋ, ಕೇರಳದಿಂದಲೋ ಬಂದರೆ ಉಳಿದ ತಂತ್ರಜ್ನರ ಅರ್ಧದಷ್ಟು ದಂಡು ಪರಭಾಷಿಕರದ್ದೆ ಆಗಿರುತ್ತದೆ, ಹತ್ತಿರದ ಕಲಾವಿದರಿಗೆ ಅವಕಾಶ ನೀಡದೆ ಪಾಕಿಸ್ತಾನದಿಂದಲೂ ನಾಯಕಿಯರನ್ನು ಕರೆಸುವ ನಮ್ಮ ಚಿತ್ರರಂಗದವರು ಡಬ್ಬಿಂಗ್ ನಿಂದ ಕನ್ನಡ ಕೆಲಸಗಾರರ ಅನ್ನ ಹೋಗುವುದು ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂಬುದನ್ನು ತೋರಿಸುತ್ತದೆ. ಡಬ್ಬಿಂಗ್ ಬಂದರೆ ಕನ್ನಡಿಗರ ಕೆಲಸಕ್ಕೆ ಕುತ್ತಾಗುತ್ತದೆ ಎಂದು ಹೇಳುವ ಕನ್ನಡ ಚಿತ್ರರಂಗದವರು ಕನ್ನಡ ಚಿತ್ರಗಳಲ್ಲಿ ಕನ್ನಡದವರಿಗೆ ಅವಕಾಶ ನೀಡಿ ಕನ್ನಡಿಗರ ಪರ ಕಾಳಜಿ ತೋರಬೇಕಿದೆ.
ಡಬ್ಬಿಂಗ್ ಬಂದಲ್ಲಿ ಮನರಂಜನೆ ಕ್ಷೇತ್ರದಲ್ಲಿ ಹೊಸ ಹೊಸ ಕೆಲಸ ಹುಟ್ಟುವ ಸಾಧ್ಯತೆಗಳು ಇದೆ. ಉದಾಹರಣೆಗೆ, ೧೯೯೦ ರ ದಶಕದಲ್ಲಿ ಹಲವೆಡೆ ಎಸ್.ಟಿ.ಡಿ ಬೂತನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದವರು ಹಲವರಿದ್ದರು. ಅದೇ ಸಮಯದಲ್ಲಿ ಮೊಬೈಲ್ ಫೋನ್ ಮಾರುಕಟ್ಟೆಗೆ ಬಂದಿತು. ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದಂತೆ ಎಸ್.ಟಿ.ಡಿ ಬೂತಿನ ಉದ್ದಿಮೆ ಕುಸಿಯತೊಡಗಿತು. ಆ ಸಂಧರ್ಭದಲ್ಲಿ ಎಸ್.ಟಿ.ಡಿ ಬೂತಿನವರ ಉದ್ದಿಮೆ ಕಾಪಾಡಲು ಸರ್ಕಾರವೇನಾದರು ಮೊಬೈಲ್ ಫೋನ್ ನಿಷೇಧಿಸಿದ್ದರೆ ಇಂದು ಕಾಣುತ್ತಿರುವ ಮೊಬೈಲ್ ಫೋನ್ ಕ್ರಾಂತಿ ಆಗುತ್ತಲೇ ಇರಲಿಲ್ಲ. ಎಸ್.ಟಿ.ಡಿ ಬೂತನ್ನು ಇಟ್ಟಿದ್ದ ವ್ಯಾಪಾರಿಗಳು ಇಂದು ಮೊಬೈಲ್ ಅಂಗಡಿ ಇಟ್ಟುಕೊಂಡು, ಮೊಬೈಲ್ ಕರೆನ್ಸಿ ಮಾರಿಕೊಂಡು, ಮೊಬೈಲ್ ಸಂಭಂಧಿತ ಇತರೆ ಸಾಮಗ್ರಿ ಮಾರಿಕೊಂಡು ತಮ್ಮ ವ್ಯಾಪಾರ ವೃದ್ಧಿ ಮಾಡಿಕೊಂಡಿದ್ದಾರೆ. ಮೊಬೈಲ್ನಿಂದ ಜನರಿಗೆ ಅನುಕೂಲ ಒಂದೇ ಅಲ್ಲ ಮೊಬೈಲ್ ಸಂಬಂಧಿತ ಹಲವು ಸಣ್ಣ ಪುಟ್ಟ ಉದ್ದಿಮೆಗಳ ಹುಟ್ಟೂ ಆಗಿದೆ. ಹಾಗೆಯೇ ಡಬ್ಬಿಂಗ್ ಬಂದಲ್ಲಿ ಹೊಸ ರೀತಿಯ ಕೆಲಸದ ಅವಕಾಶಗಳು ಹುಟ್ಟುತ್ತವೆ, ಬೇರೆ ಭಾಷೆಯ ಒಂದು ಚಿತ್ರ ಅಥವಾ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡಲು ಕನ್ನಡಿಗರು ಬೇಕೆ ಬೇಕು. ಉದಾಹರಣೆಗೆ, ನ್ಯಾಷನಲ್ ಜಿಯಾಗ್ರಫಿಯ ಒಂದು ಕಾರ್ಯಕ್ರಮವನ್ನು ಕನ್ನಡಕ್ಕೆ ತರಲು ಕನ್ನಡಿಗ ತಂತ್ರಜ್ನರ ಅವಶ್ಯಕತೆ ಬೀಳುವುದು. ಇದರಿಂದ ಕನ್ನಡದಲ್ಲಿ ವಿಜ್ಞಾನ ಕಲಿತವರಿಗೆ ಅವಕಾಶ ಸಿಗುವುದು. ಹೀಗೆ ಡಬ್ಬಿಂಗ್ ಎಂಬುದು ಕನ್ನಡಿಗರಿಗೆ ಉದ್ಯೋಗ ಅವಕಾಶದ ಬಾಗಿಲು ತೆರೆಯುವುದು ಮತ್ತು ಒಟ್ಟಾರೆಯಾಗಿ ಉದ್ಯೋಗ ಅವಕಾಶಗಳ ಸಂಖ್ಯೆ ಹೆಚ್ಚುವುದೇ ಹೊರತು ತೊಂದರೆ ಆಗುವ ಯಾವ ಮುನ್ಸೂಚನೆಗಳು ಕಾಣುತ್ತಿಲ್ಲ.
ನಮ್ಮ ಚಿತ್ರರಂಗ ಚಿಕ್ಕದು ಎಂದು ಕೊರಗುವ ಬದಲು ಡಬ್ಬಿಂಗ್ ಚಿತ್ರಗಳ ಜೊತೆ ಪೈಪೋಟಿಗೆ ಬಿದ್ದು ಇನ್ನೂ ಉತ್ತಮ ಚಿತ್ರಗಳನ್ನು ನೀಡುವತ್ತ ಚಿತ್ರರಂಗದವರು ಗಮನ ಹರಿಸಬೇಕಿದೆ. ಕನ್ನಡ ಸಾಹಿತ್ಯದಲ್ಲಿ ಅನುವಾದ ಕೃತಿಗಳ ನಿಷೇಧವಿಲ್ಲ ಹಾಗೆಂದು ನಮ್ಮ ಸಾಹಿತ್ಯವೇನು ಬಡವಾಗಿಲ್ಲ, ಅನುವಾದಿತ ಮತ್ತು ಸ್ವಂತ ಕೃತಿಗಳಿಂದ ನಮ್ಮ ಸಾಹಿತ್ಯ ಶ್ರೀಮಂತವಾಗಿದೆ. ಅಷ್ಟೇ ಏಕೆ ದೇಶದಲ್ಲೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹಿರಿಮೆ ನಮ್ಮ ಕನ್ನಡಕ್ಕಿಲ್ಲವೇ? ಇಂದು ಕನ್ನಡಿಗರು ಉನ್ನತ ಕಲಿಕೆಗಾಗಿ ಇಂಗ್ಲೀಶ್ ನೆಚ್ಚಿ ಕೊಳ್ಳಬೇಕಾಗಿದೆ, ಹೀಗಿರುವಾಗ ಮನರಂಜನೆಗೊಸ್ಕರ ಬೇರೆ ಬೇರೆ ಭಾಷೆಗಳ ಹಿಂದೆ ಹೋಗಬೇಕಾಗಿರುವುದು ಕನ್ನಡವೆಂಬುದನ್ನು ಕೇವಲ ಅಡುಗೆಮನೆಯ ಭಾಷೆಯಾಗಿ ಮಾಡಿ ಬಿಡುತ್ತದೆ. ಕನ್ನಡಕ್ಕೆ ಡಬ್ಬಿಂಗ್ ಬಂದು ಕನ್ನಡಿಗರಿಗೆ ಎಲ್ಲ ಬಗೆಯ ಮನರಂಜನೆ ಕನ್ನಡದಲ್ಲಿ ಸಿಗುವಂತೆ ಮಾಡುವುದು ಕನ್ನಡಕ್ಕೆ ಹೊಸದೊಂದು ಶಕ್ತಿ ತುಂಬಿಸಿದಂತೆ. ಕಟ್ಟಿ ಹಾಕುವ ಸಂಸ್ಕೃತಿಯಿಂದ ಯಾವ ಮಾರುಕಟ್ಟೆಯು ಬೆಳೆಯದು, ಡಬ್ಬಿಂಗ್ ಬಂದು ಹೊಸ ಅವಕಾಶಗಳಿಗೆ ನಾಂದಿ ಹಾಡುವುದರ ಜೊತೆಗೆ ಕನ್ನಡಿಗರಿಗೆ ಕನ್ನಡದಲ್ಲೇ ಎಲ್ಲ ಬಗೆಯ ಮನರಂಜನೆ ದೊರೆತು ಕನ್ನಡವು ಯಾವಾಗಲು ಅವರ ಕಿವಿಮೇಲೆ ಬೀಳುತ್ತಿರಲಿ ಮತ್ತು ಕಣ್ಣಿಗೆ ಕಾಣುತ್ತಿರಲಿ ಆ ಮೂಲಕ ಕನ್ನಡ ಬೆಳೆಯಲಿ.