"Keep it away from children", "Not for Injection", "For external use only"...... ಇದನ್ನೆಲ್ಲಾ ಎಲ್ಲಾದರು ಒಂದು ಕಡೆ ಓದಿದ ಇಲ್ಲವೇ ನೋಡಿದ ನೆನಪಿದೆಯೇ ? ಹೌದು, ನೀವು ಕೊಂಡುಕೊಂಡ ಔಷಧಿಯಲ್ಲಿ ಯಾವುದೋ ಒಂದು ಮೂಲೆಯಲ್ಲಿ ಈ ಎಚ್ಹರಿಕೆ ಇರುತ್ತೆ ನೋಡಿ, ನಾವೇನೋ ಅದನ್ನ ನೋಡಿ ಅಲ್ಲೇ ಮರೆತು ಹೋಗಿರ್ತಿವಿ ಆದರೆ ಅದರ ಕುರಿತು ಸ್ವಲ್ಪ ಯೋಚಿಸಿದರೆ ಕೆಲವು ಆಘಾತಕಾರಿ ಸಂಗತಿಗಳು ತಿಳಿಯುತ್ತವೆ. ಈ ಮುಂಚೆ ತಿಳಿಸಿದ ಎಚ್ಚರಿಕೆಗಳು ನಮ್ಮ ನಾಡಿನ ಎಷ್ಟು ಜನರಿಗೆ ತಲುಪುತ್ತದೆ? ಹೀಗೆಯೇ, ಗ್ರಾಹಕನಾಗಿ ನಾವು ಕೊಳ್ಳುವ ಯಾವುದೇ ವಸ್ತುಗಳ ಮೇಲಿನ ಮಾಹಿತಿ ನಮಗೆ ಎಷ್ಟರ ಮಟ್ಟಿಗೆ ಸಿಗುತ್ತಿದೆ? ಹೊಸದೊಂದು ಪ್ರೆಶರ್ ಕುಕ್ಕರ್ ಅನ್ನೋ ಅಥವಾ ಗ್ಯಾಸ್ ಸಿಲಿಂಡರನ್ನು ಮನೆಗೆ ತಂದವರು ಅದರ ಬಳಕೆ ಹಾಗು ಎಚ್ಚರಿಕೆ ಮಾಹಿತಿಯುಳ್ಳ ಇಂಗ್ಲಿಷ್ user guide ಓದಲಾಗದೆ, ಮೂಲೆಗೆ ಎಸೆದು, ಕೊನೆಗೆ ಬಳಸುವಾಗ ತಪ್ಪುಗಳಾಗಿ ಆದ ಪ್ರಾಣ ಹಾನಿಗಳು, ಅನಾಹುತಗಳು ಎಷ್ಟೋ? ಹಾಗೆಯೇ ಮುಂದೆ ಆಗಲಿರುವ ಅನಾಹುತಗಳೆಷ್ಟೋ? ಕ್ಷಮಿಸಿ, ಬಳಕೆ ಹಾಗು ಎಚ್ಚರಿಕೆ ಮಾಹಿತಿ ಸರಿಯಾಗಿ ಇಲ್ಲದ ಅಪಾಯಕಾರಿ ಅಡುಗೆ ಮನೆಯಲ್ಲಿ ನಿಮ್ಮ ಅಮ್ಮ, ಹೆಂಡತಿ, ಅಕ್ಕ, ತಂಗಿ, ಮಕ್ಕಳು ಅಥವಾ ನೀವು ಇರುವಿರಿ.
ಈ ಮೇಲಿನ ಟಿಪ್ಪಣಿ ಬರೆಯಬೇಕೆನಿಸಿದ್ದು ಗ್ರಾಹಕ ಚಳುವಳಿ ಕುರಿತು ಹೀಗೆಯೇ ಒಂದು ಅಂಕಣ ಓದಿದ ಮೇಲೆ. ಅಂಕಣದಲ್ಲಿ ತಿಳಿದ ಗ್ರಾಹಕನ ಹಕ್ಕುಗಳಾದ
ಸುರಕ್ಷೆತೆಯ ಹಕ್ಕು
ಮಾಹಿತಿಯ ಹಕ್ಕು
ಆಯ್ಕೆ ಮಾಡುವ ಹಕ್ಕು
ದೂರುಗಳನ್ನು ಹೇಳಿಕೊಳ್ಳುವ ಹಕ್ಕು
ಇವುಗಳಲ್ಲಿ ನನಗೆ 'ಮಾಹಿತಿಯ ಹಕ್ಕು' ತಲೆಗೊಂದು ಹುಳ ಬಿಟ್ಟಿದೆ. ಗ್ರಾಹಕ ಚಳುವಳಿಯ ಇತಿಹಾಸ ನೋಡಿದರೆ 1872 ರಲ್ಲಿ ಮೊದಲ ಬಾರಿಗೆ ಗ್ರಾಹಕರ ಹಕ್ಕಿನ ಕುರಿತ ಕೂಗು ದೂರದ ಅಮೇರಿಕಾದಲ್ಲಿ ಎದ್ದಿತು, ನಂತರ 1962 ಮಾರ್ಚ್ 15 ರಂದು ಅಮೇರಿಕಾ ಅದ್ಯಕ್ಷ ಕೆನಡಿಯವರು ಮೇಲೆ ನೀಡಿದ ನಾಲ್ಕು ಗ್ರಾಹಕ ಹಕ್ಕುಗಳ ಘೋಷಣೆಯನ್ನು ಮಾಡಿದರು, ಬಾರತವು ಸೇರಿ ಹಲವು ರಾಷ್ಟ್ರಗಳು ಈ ಹಕ್ಕುಗಳನ್ನು ಪಾಲಿಸುತ್ತಾ ಬಂದಿವೆ, ಆ ನೆನಪಿನಲ್ಲೇ ಪ್ರತಿ ಮಾರ್ಚ್ 15 ರಂದು 'ಗ್ರಾಹಕ ದಿನಾಚರಣೆಯನ್ನು' ಆಚರಿಸುತ್ತೇವೆ. ಭಾರತದ ಮಟ್ಟಿಗೆ ಹೇಳುವುದಾದರೆ ಗ್ರಾಹಕ ಸೇವೆಯಲ್ಲಿ ಮಾಹಿತಿ ಹಕ್ಕಿನ ಅನುಷ್ಠಾನ ಸರಿಯಾಗಿ ಆಗದೆ ಇರುವುದು ನಮ್ಮ ಕಣ್ಣೆದುರಿನ ಸತ್ಯ. ಭಾಷಾ ವೈವಿದ್ಯತೆಯುಳ್ಳ ಭಾರತದಲ್ಲಿ ನಾವು ಕೊಳ್ಳುವ ವಸ್ತುಗಳ ಮಾಹಿತಿ ಕೇವಲ ಇಂಗ್ಲಿಶ್ ಅಥವಾ ಹಿಂದಿಯಲ್ಲಿ ಮಾತ್ರ ಸಿಗುತ್ತಿರುವುದು ಇದಕ್ಕೆ ನೇರ ಉದಾಹರಣೆ. ಗ್ರಾಹಕರಿಗೆ ಬೇಕಾದ ಮಾಹಿತಿ ಅವರ ನುಡಿಯಲ್ಲೇ ಸಿಗದಿರುವುದು ಒಂದು ಬೇಸರದ ಸಂಗತಿ ಆದರೆ ಆ ಮಾಹಿತಿಯನ್ನು ನಮ್ಮ ನುಡಿಯಲ್ಲೇ ನಮಗೆ ನೀಡಿ ಎಂದು ಗ್ರಾಹಕನಾಗಿ ಹೊಕ್ಕೊತ್ತಾಯ ಮಾಡದೆ ಇರುವುದು ಒಂದು ದುರಂತವೇ ಸರಿ.
ಕನ್ನಡಿಗರಿಗೆ ಕನ್ನಡದಲ್ಲಿ ಗ್ರಾಹಕ ಸೇವೆ ಮತ್ತು ಮಾಹಿತಿ ಸಿಗದೇ ಹೋದಲ್ಲಿ ಸುರಕ್ಷತೆ ಮತ್ತು ಪಾರದರ್ಶಕತೆಗೆ ಸಂಭಂದಿಸಿದ ಅನಾಹುತಗಳು ಆಗುವುವು. ಸದ್ಯದ ಆರ್ಥಿಕ ಬೆಳವಣಿಗೆ ಹಾಗು ಖಾಸಗೀಕರಣದಿಂದ ಹಲವಾರು ರೀತಿಯ ಉದ್ಯಮಗಳು ನಮ್ಮ ನಾಡಿನಲ್ಲಿ ಹುಟ್ಟಿಕೊಳ್ಳುತ್ತಿವೆ. ಹಿಂದೆ ಬಿ.ಎಸ್.ಏನ್.ಎಲ್ ಒಂದೇ ಇತ್ತು, ಇಂದು ಏರ್ಟೆಲ್, ವಡಾಫೋನ್, ಇತ್ಯಾದಿ... ಕ.ರಾ.ರ.ಸಾ.ಸಂ. ಸರ್ಕಾರಿ ಬಸ್ಸಿನ ಜೊತೆ ವಿ.ಅರ್.ಎಲ್, ಎಸ್.ಅರ್.ಎಸ್ ಎಂಬ ಖಾಸಗಿ ಬಸ್ ಸೇವೆಗಳು... ಹೀಗೆ ಎಲ್ಲ ವಿಭಾಗದಲ್ಲಿ ಖಾಸಗಿ ಉದ್ಯಮಗಳು ತಲೆ ಎತ್ತುತ್ತಿವೆ. ಇವರ ನಡುವಿನ ಸ್ಪರ್ಧೆಯಿಂದ ಇಂದು ಗ್ರಾಹಕ ದೊರೆಯಾಗಿದ್ದಾನೆ, ಗ್ರಾಹಕ ಸೇವೆಯಲ್ಲಿನ ಗುಣಮಟ್ಟ ಹೆಚ್ಚುತ್ತಿದೆ. ಗ್ರಾಹಕನಾಗಿ ಕನ್ನಡದಲ್ಲಿ ಮಾಹಿತಿ ಹಾಗು ಸೇವೆಯ ಅವಶ್ಯಕತೆ ಕುರಿತು ಬಳಕೆದಾರರಿಗೆ ತಿಳುವಳಿಕೆ ಇಲ್ಲದಿರುವುದು ಮತ್ತು ಕನ್ನಡದಲ್ಲಿ ಗ್ರಾಹಕ ಸೇವೆಯ ಪ್ರಾಮುಕ್ಯತೆ ಅರಿವು ಉದ್ಯಮಿಗಳಿಗೆ ಇಲ್ಲದಿರುವುದು ಇಂದು ಗ್ರಾಹಕ ಸೇವೆಯಲ್ಲಿ ಕನ್ನಡದ ಕಡೆಗಣನೆಗೆ ಕಾರಣ. ಕರ್ನಾಟಕದಲ್ಲಿ ಒಂದು ಉದ್ಯಮ ನಡೆಸಬೇಕೆಂದರೆ 'ಕನ್ನಡ' ಅನಿವಾರ್ಯ ಎಂಬ ಪರಿಸ್ತಿತಿ ನಿರ್ಮಾಣವಾದರೆ ಮಾತ್ರ ಕನ್ನಡ ಹಾಗು ಕನ್ನಡಿಗರ ಅಸ್ತಿತ್ವ ನಾಡಿನಲ್ಲಿ ಉಳಿಯುತ್ತದೆ. ಕರ್ನಾಟಕದಲ್ಲಿ ಕನ್ನಡದ ಅನಿವಾರ್ಯತೆ ರೂಪಿಸಲು ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯಿಂದ ಮಾತ್ರ ಸಾದ್ಯ. ಅಂದರೆ, ಗ್ರಾಹಕ ಸೇವೆಯಲ್ಲಿನ ಪ್ರತಿ ಹಂತದಲ್ಲು ಕನ್ನಡದಲ್ಲಿ ಸೇವೆ ನಿಡುವಂತೆ ಹಕ್ಕೊತ್ತಾಯ ಮಾಡಿದರೆ, ಕಂಪನಿಗಳಿಗೆ ಕನ್ನಡದಲ್ಲಿ ಸೇವೆ ನೀಡಲು ಕನ್ನಡಿಗರ ಅವಶ್ಯಕತೆ ಬೀಳುತ್ತದೆ ಆ ಮೂಲಕ ಕನ್ನಡಿಗರಿಗೆ ಅವಕಾಶಗಳು ಸಿಗುತ್ತವೆ ಹಾಗೆಯೇ ಕನ್ನಡಕ್ಕೊಂದು ಮಾರುಕಟ್ಟೆ ಸಿಗುತ್ತದೆ. ಬೆಳಗ್ಗೆ ಹದಿನೈದು ರೂಪಾಯಿ ಕೊಟ್ಟು ತರುವ ಹಾಲಿನಿಂದ ಹಿಡಿದು ರಾತ್ರಿ ಆರಿಸಿ ಮಲಗುವ ವಿದ್ಯುತ್ ದೀಪದವರೆಗೂ ನೀವು ಗ್ರಾಹಕರು, ಹತ್ತಿರದ ತರಕಾರಿ ಅಂಗಡಿಗೆ ಹೋದಾಗ ಕನ್ನಡದಲ್ಲೇ ಎಲ್ಲ ಕೇಳುವ ನಾವು ಸೂಪರ್ ಮಾರ್ಕೆಟ್ ಕಾಲಿಟ್ಟೊಡನೆ ಮುಜುಗರದಿಂದ ಇಂಗ್ಲೀಷಿನಲ್ಲೋ ಅಥವಾ ಹಿಂದಿಯಲ್ಲೋ ಸೇವೆ ಪಡೆದುಕೊಂಡು ಬರುತ್ತೇವೆ, ಗ್ರಾಹಕ ಹಕ್ಕುಗಳ ನಿಟ್ಟಿನಲ್ಲಿ ಇದೊಂದು ಅಪಾಯಕಾರಿ ಬೆಳವಣಿಗೆ.

ಗ್ರಾಹಕ ಚಳುವಳಿ ಎಂದರೆ ಮೊದಲೇ ತಿಳಿಸಿದ ಗ್ರಾಹಕ ಹಕ್ಕುಗಳ ಒತ್ತಾಯದ ಜೊತೆಗೆ ಗ್ರಾಹಕ ಸೇವೆಯಲ್ಲಿನ ಭಾಷಾ ಪ್ರಾಮುಕ್ಯತೆಯು ಸೇರಿದೆ. ಮಾಹಿತಿ ಹಕ್ಕಿಗಾಗಿ ಹೋರಾಟ ಮಾಡಿ, ಆ ಮಾಹಿತಿ ನಿಮಗೆ ತಿಳಿಯುವ ನುಡಿಯಲ್ಲಿ ಇಲ್ಲದಿದ್ದರೆ ಅದರಿಂದ ಏನು ಪ್ರಯೋಜನ? ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ನಮ್ಮಲ್ಲಿನ ಗ್ರಾಹಕ ಚಳುವಳಿ ಕನ್ನಡ ಕೇಂದ್ರಿತ ಆದಲ್ಲಿ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ಕನ್ನಡದಲ್ಲಿ ಗ್ರಾಹಕ ಸೇವೆಯ ಹಕ್ಕೊತ್ತಾಯದಿಂದ ಕನ್ನಡಿಗರಿಗೆ ಅನುಕೂಲ ಒಂದೇ ಅಲ್ಲ ನಾಡು -ನುಡಿಯ ಉಳಿವು ಆಡಗಿದೆ.